ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಮುಂಗಾರು ಸಂಸತ್ ಅಧಿವೇಶನವು ಆಗಸ್ಟ್ 13 ರಂದು ಮುಕ್ತಾಯಗೊಳ್ಳಲಿದ್ದು, ಇದರ ಬೆನ್ನಲ್ಲೇ ಮಹತ್ವದ ಕ್ಷೇತ್ರ ವಿಂಗಡಣೆ ವಿಧೇಯಕ (Delimitation Bill) ಹಾಗೂ ಮಹಿಳಾ ಮೀಸಲಾತಿ ವಿಧೇಯಕ ಕುರಿತು ಚರ್ಚಿಸಲು ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು (Central Government) ಎರಡು ದಿನಗಳ ವಿಶೇಷ ಸಂಸತ್ ಅಧಿವೇಶನ (Parliament) ಕರೆಯಲು ಯೋಜನೆ ರೂಪಿಸಿದೆ.
ನಂಬಲರ್ಹ ಮೂಲಗಳ ಪ್ರಕಾರ, ಈ ವಿಶೇಷ ಅಧಿವೇಶನವು ಆಗಸ್ಟ್ 16 ರಿಂದ 18 ರವರೆಗೆ ನಡೆಯುವ ಸಾಧ್ಯತೆಯಿದೆ. ಈ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲು ಅಗತ್ಯವಿರುವ ಮೂರನೇ ಎರಡರಷ್ಟು (2/3) ಬಹುಮತವನ್ನು ಕಾಯ್ದಿರಿಸಿಕೊಳ್ಳಲು ಕೇಂದ್ರ ಸರ್ಕಾರ ತೀವ್ರ ಕಸರತ್ತು ನಡೆಸುತ್ತಿದ್ದು, ಅಗತ್ಯ ಸಂಖ್ಯಾಬಲ ಸಿಕ್ಕ ತಕ್ಷಣವೇ ವಿಧೇಯಕವನ್ನು ಮಂಡಿಸಿ ಅಂಗೀಕರಿಸಲು ನಿರ್ಧರಿಸಿದೆ. ಪ್ರತಿಪಕ್ಷಗಳ ಮನವೊಲಿಕೆಗೆ ಕೇಂದ್ರ ಸಜ್ಜು ಮಹತ್ವದ ವಿಧೇಯಕಗಳನ್ನು ಸಭೆಯ ಮುಂದೆ ತರುವ ಮುನ್ನ ಸಂಸತ್ತಿನಲ್ಲಿ ಉಂಟಾಗಿರುವ ಗೊಂದಲ ಹಾಗೂ ಕಲಾಪದ ಪ್ರತಿರೋಧವನ್ನು ಶಮನಗೊಳಿಸಲು ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಮನವೊಲಿಕೆಗೆ ಮುಂದಾಗಿದೆ. ಇದರ ಭಾಗವಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸುಮಾರು 50 ನಿಮಿಷಗಳ ಕಾಲ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಈ ಸಭೆಯಲ್ಲಿ ಕ್ಷೇತ್ರ ವಿಂಗಡಣೆ ವಿಧೇಯಕ ಮತ್ತು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ತಿದ್ದುಪಡಿಗಳ ಕುರಿತು ಕಾಂಗ್ರೆಸ್ ಪಕ್ಷದ ನಿಲುವನ್ನು ರಿಜಿಜು ಕೇಳಿ ಪಡೆದಿದ್ದಾರೆ. ವಿಧೇಯಕಗಳಿಗೆ ಬೆಂಬಲ ಪಡೆಯಲು ಪ್ರಯತ್ನ ಸಭೆಯ ವೇಳೆ ರಾಹುಲ್ ಗಾಂಧಿ ಅವರು, ಪ್ರತಿಪಕ್ಷಗಳು ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಪಟ್ಟು ಹಿಡಿದಿಲ್ಲ, ಬದಲಾಗಿ ಇತ್ತೀಚಿನ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯದ ಬಗ್ಗೆ ಗೃಹ ಸಚಿವರು ಸಂಸತ್ತಿನಲ್ಲಿ ಅಧಿಕೃತ ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಸಮಾಜವಾದಿ ಪಕ್ಷ ಸೇರಿದಂತೆ ಇತರ ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಪಿಯೂಷ್ ಗೋಯಲ್, ಅರ್ಜುನ್ ರಾಮ್ ಮೇಘವಾಲ್ ಮತ್ತು ಎಲ್. ಮುರುಗನ್ ಅವರಿಗೆ ಜವಾಬ್ದಾರಿ ವಹಿಸಲಾಗಿದ್ದು, ಸಂಸತ್ತಿನ ಕಲಾಪ ಸುಗಮವಾಗಿ ನಡೆಯಲು ಮತ್ತು ವಿಧೇಯಕಗಳಿಗೆ ಬೆಂಬಲ ಪಡೆಯಲು ಪ್ರಯತ್ನಗಳು ಮುಂದುವರಿದಿವೆ.

