ಬೆಂಗಳೂರು : ನಗರದ (Bengaluru) ಮೇಲಿನ ಜನಸಂಖ್ಯೆ (Population) ಮತ್ತು ವಾಹನ ದಟ್ಟಣೆಯ (traffic problem) ಒತ್ತಡವನ್ನು ಕಡಿಮೆ ಮಾಡಲು ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೂ ಉದ್ಯಮವನ್ನು ವಿಸ್ತರಿಸಲು ಸರ್ಕಾರ ಮಹತ್ವದ ಮಾಸ್ಟರ್ ಪ್ಲಾನ್ ರೂಪಿಸಿದೆ.
"ಬೆಂಗಳೂರಿನಾಚೆಗೆ ಮತ್ತಷ್ಟು ಹೊಸ ಬೆಂಗಳೂರುಗಳನ್ನು ನಿರ್ಮಿಸಲು ನಮ್ಮ ಸರ್ಕಾರ ಮುಂದಾಗಿದೆ. ರಾಜಧಾನಿಯಲ್ಲಿರುವ ಎಲ್ಲಾ ಆಧುನಿಕ ಸೌಕರ್ಯಗಳನ್ನು ರಾಜ್ಯದ ಎರಡು ಹಾಗೂ ಮೂರನೇ ಹಂತದ ನಗರಗಳಿಗೂ ಒದಗಿಸಲು ನಾವು ಬದ್ಧರಾಗಿದ್ದೇವೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಪ್ರಕಟಿಸಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಬುಧವಾರ (ಜುಲೈ 8) ನಡೆದ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) 'ಟಾರ್ಗೆಟ್ ಇಂಡಿಯಾ' ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಈ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು. ಇತರೆ ನಗರಗಳಿಗೂ 'ಡಬಲ್ ಎಫ್‌ಎಆರ್' (Double FAR) ಬಂಪರ್ ಆಫರ್! ರಾಜಧಾನಿಯ ಹೊರಗಿನ ನಗರಗಳಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, "ಬೆಂಗಳೂರಿನಲ್ಲಿ ಕಚೇರಿ ಜಾಗದ ಬಾಡಿಗೆ ಪ್ರತಿ ಚದರ ಅಡಿಗೆ 1 ರಿಂದ 1.5 ಡಾಲರ್ ಇದ್ದರೆ, ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೇವಲ ಅರ್ಧ ಡಾಲರ್‌ಗೆ ಸಿಗುತ್ತದೆ. ಉದ್ಯಮಗಳನ್ನು ಆಕರ್ಷಿಸಲು ಆ ನಗರಗಳಲ್ಲೂ 'ಡಬಲ್ ಎಫ್‌ಎಆರ್' (Double FAR) ನೀಡಲು ಮುಂದಾಗಿದ್ದೇವೆ. ಇದರಿಂದ ಅಲ್ಲಿಯೂ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಹಾದಿ ಸುಗಮವಾಗಲಿದೆ. ಕರ್ನಾಟಕದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮತ್ತು ಪ್ರತಿಭಾವಂತ ಮಾನವ ಸಂಪನ್ಮೂಲವಿದೆ. ನಾವೆಲ್ಲರೂ ಒಂದೇ ತಂಡ 'ಟೀಮ್ ಕರ್ನಾಟಕ' ಎಂಬ ಧ್ಯೇಯದೊಂದಿಗೆ ಒಟ್ಟಾಗಿ ಕೆಲಸ ಮಾಡೋಣ" ಎಂದು ಉದ್ಯಮಿಗಳಿಗೆ ಕರೆ ನೀಡಿದರು. ಬೆಂಗಳೂರಿನ ಮೂಲಸೌಕರ್ಯಕ್ಕೆ 1.5 ಲಕ್ಷ ಕೋಟಿ ರೂ.ಗಳ ಬೃಹತ್ ವೆಚ್ಚ! ರಾಜಧಾನಿಯ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದ್ದು, ವಿವಿಧ ಬೃಹತ್ ಯೋಜನೆಗಳನ್ನು ಡಿ.ಕೆ. ಶಿವಕುಮಾರ್ ಅವರು ಪಟ್ಟಿ ಮಾಡಿದ್ದಾರೆ: • ಟನಲ್ ರಸ್ತೆ ಮತ್ತು ಮೇಲ್ಸೇತುವೆ: ಹೆಬ್ಬಾಳ ಭಾಗದ ಸಂಚಾರ ದಟ್ಟಣೆ ನಿವಾರಣೆಗೆ ಸಣ್ಣ ಟನಲ್ ರಸ್ತೆ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಇದರೊಂದಿಗೆ ನಗರದಲ್ಲಿ ಒಟ್ಟು 40 ಕಿ.ಮೀ ಉದ್ದದ ಬೃಹತ್ ಟನಲ್ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಆದೇಶ ಹೊರಡಿಸಲಾಗುವುದು. ಜೊತೆಗೆ 44 ಕಿ.ಮೀ ಡಬಲ್ ಡೆಕ್ಕರ್ ಹಾಗೂ 133 ಕಿ.ಮೀ ಮೇಲ್ಸೇತುವೆ ಯೋಜನೆ ರೂಪಿಸಲಾಗಿದೆ. ಕರ್ನಾಟಕವೇ ಜಾಗತಿಕ ಪ್ರತಿಭೆಗಳ ಪವರ್‌ಹೌಸ್ "ನಮ್ಮ ರಾಜ್ಯದಲ್ಲಿ 257 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಪ್ರತಿ ವರ್ಷ 1.50 ಲಕ್ಷ ಎಂಜಿನಿಯರ್‌ಗಳು ಹೊರಬರುತ್ತಿದ್ದಾರೆ. ದೇಶದಲ್ಲಿರುವ 138 ಅಂತಾರಾಷ್ಟ್ರೀಯ ಶಾಲೆಗಳ ಪೈಕಿ 40 ಶಾಲೆಗಳು ಕರ್ನಾಟಕ ಮತ್ತು ಬೆಂಗಳೂರಿನಲ್ಲಿಯೇ ಇವೆ. ಪ್ರಸ್ತುತ ಬೆಂಗಳೂರಿನಲ್ಲಿ ಸುಮಾರು 2 ಲಕ್ಷ ವಿದೇಶಿ ಪಾಸ್‌ಪೋರ್ಟ್ ಹೊಂದಿರುವ ಜಾಗತಿಕ ತಜ್ಞರು ಕೆಲಸ ಮಾಡುತ್ತಿದ್ದಾರೆ. ನೆರೆರಾಜ್ಯ ಮಹಾರಾಷ್ಟ್ರವು ಉದ್ಯಮಗಳಿಗೆ ತುಂಬಾ ದುಬಾರಿಯಾಗುತ್ತಿರುವುದರಿಂದ, ಹೂಡಿಕೆದಾರರಿಗೆ ಕರ್ನಾಟಕವೇ ಮೊದಲ ಮತ್ತು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಉದ್ಯಮ ರಂಗದ ನಮ್ಮ ಸ್ನೇಹಿತರೇ ಅಭಿಪ್ರಾಯ ಪಡುತ್ತಿದ್ದಾರೆ," ಎಂದು ಡಿ.ಕೆ. ಶಿವಕುಮಾರ್ ಹೆಮ್ಮೆಯಿಂದ ನುಡಿದರು. ಬೆಂಗಳೂರಿನ ಹವಾಮಾನ ಮತ್ತು ಇಲ್ಲಿನ ವಿಶಿಷ್ಟ ಸಂಸ್ಕೃತಿಯೇ ನಗರದ ಅತಿ ದೊಡ್ಡ ಬಲ ಎಂದ ಅವರು, ನಗರದ ಸೌಂದರ್ಯೀಕರಣಕ್ಕಾಗಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಗುತ್ತಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು. ಮುಂಬರುವ 'ಬೆಂಗಳೂರು ಟೆಕ್ ಸಮಿಟ್' ಜಾಗತಿಕ ಉದ್ಯಮಗಳಿಗೆ ಮತ್ತಷ್ಟು ದೊಡ್ಡ ಅವಕಾಶಗಳನ್ನು ತೆರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
• ಬೆಂಗಳೂರು ಬಿಸಿನೆಸ್ ಕಾರಿಡಾರ್: 123 ಕಿ.ಮೀ ಉದ್ದದ ಈ ಕಾರಿಡಾರ್‌ನ ಮೊದಲ ಹಂತದ ಕಾಮಗಾರಿಗಾಗಿಯೇ 26 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.
• ಮೆಟ್ರೋ ವಿಸ್ತರಣೆ: ಸದ್ಯ 350 ಕಿ.ಮೀ ಮೆಟ್ರೋ ಸಂಪರ್ಕಕ್ಕೆ ಯೋಜನೆ ಇದ್ದು, ಮುಂದಿನ ವರ್ಷದ ವೇಳೆಗೆ ಇದನ್ನು 500 ಕಿ.ಮೀ ಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ತಿಂಗಳು 30 ಸಾವಿರ ಹೊಸ ವಾಹನಗಳು ರಸ್ತೆಗಿಳಿಯುತ್ತಿರುವುದರಿಂದ ಈ ಎಲ್ಲಾ ಸುಗಮ ಸಂಚಾರ ಯೋಜನೆಗಳಿಗೆ ಒಟ್ಟು 1.5 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

