ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರವಾಗಿದ್ದ ಮುಖ್ಯಮಂತ್ರಿ ಬದಲಾವಣೆಯ (Cm change row) ಹಗ್ಗಜಗ್ಗಾಟ ಕೊನೆಗೂ ಒಂದು ತಾರ್ಕಿಕ ಅಂತ್ಯಕ್ಕೆ ಬಂದು ತಲುಪಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಬೆನ್ನಲ್ಲೇ ಸಿದ್ದರಾಮಯ್ಯ (Siddaramaiah) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ರಾಜ್ಯದ ಮುಂದಿನ ಚುಕ್ಕಾಣಿ ಹಿಡಿಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.
ಶಿವಕುಮಾರ್ (DK Shivakumar) ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ರಾಜಧಾನಿ ಬೆಂಗಳೂರಿನ ರಾಜಕೀಯ ವಲಯಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಈಗ ಹೊಸ ಮುಖ್ಯಮಂತ್ರಿಯ ಪ್ರಮಾಣವಚನ ಕಾರ್ಯಕ್ರಮ ಯಾವಾಗ ನಡೆಯಲಿದೆ ಎಂಬ ತೀವ್ರ ಕುತೂಹಲ ಮನೆಮಾಡಿದೆ.
ದೆಹಲಿ ಮಟ್ಟದಲ್ಲಿ ನಡೆದ ಸುದೀರ್ಘ ಚರ್ಚೆಗಳು ಹಾಗೂ ಸಂಧಾನ ಸೂತ್ರಗಳ ನಂತರ ನಾಯಕತ್ವ ಹಸ್ತಾಂತರ ಪ್ರಕ್ರಿಯೆ ಚುರುಕಾಗಿದ್ದು, ಡಿ.ಕೆ. ಶಿವಕುಮಾರ್ ಅವರ ನಿವಾಸದ ಬಳಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಆಡಳಿತ ಯಂತ್ರದಲ್ಲೂ ಹೊಸ ಸಿಎಂ ಸ್ವಾಗತಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಸಚಿವ ಸಂಪುಟದಲ್ಲಿ ಯಾರಿಗೆಲ್ಲ ಸ್ಥಾನ ಸಿಗಬಹುದು ಮತ್ತು ಡಿಸಿಎಂ ಹುದ್ದೆ ಯಾರಿಗೆ ಒಲಿಯಲಿದೆ ಎಂಬ ಲೆಕ್ಕಾಚಾರಗಳು ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿವೆ.
ಈ ಇಡೀ ರಾಜಕೀಯ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಮತ್ತು ಆಸಕ್ತಿದಾಯಕ ಅಂಶವೆಂದರೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆಯ್ದುಕೊಂಡಿದ್ದಾರೆ ಎನ್ನಲಾದ ನಿರ್ದಿಷ್ಟ ದಿನಾಂಕ ಮತ್ತು ಅದರ ಹಿಂದಿನ ವಿಶೇಷ ಕಾರಣ. ಸೋಮವಾರದಂದು (ಜೂ.1)
ಡಿ.ಕೆ. ಶಿವಕುಮಾರ್ ನೂತನ ಸಿಎಂ ಆಗೋ ಅಧಿಕಾರ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ. ಕೇವಲ ಆಡಳಿತಾತ್ಮಕ ಅನುಕೂಲಕ್ಕಾಗಿ ಈ ದಿನವನ್ನು ನಿಗದಿಪಡಿಸಿಲ್ಲ; ಬದಲಾಗಿ ತೀವ್ರ ದೈವಭಕ್ತರಾಗಿರುವ ಡಿ.ಕೆ.ಶಿ, ತಮ್ಮ ಹೆಸರಿನಲ್ಲಿರುವ 'ಶಿವ'ನಿಗೆ ಪ್ರಿಯವಾದ ವಾರವಾದ 'ಸೋಮವಾರ'ವೇ ಪದಗ್ರಹಣ ಮಾಡಲು ವಿಶೇಷ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.
ಜ್ಯೇಷ್ಠ ಪೂರ್ಣಿಮೆಯ ಕಾಲಾವಧಿ ಮುಗಿದ ಬೆನ್ನಲ್ಲೇ ಬರುವ ಈ ದಿನವು ಧಾರ್ಮಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಅತ್ಯಂತ ಶುಭದಾಯಕವಾಗಿದೆ ಎಂದು ಅವರ ಆಪ್ತ ಜ್ಯೋತಿಷಿಗಳು ಮತ್ತು ಗುರುಗಳು ಸಲಹೆ ನೀಡಿರುವುದರಿಂದ, ಸೋಮವಾರದ ಶುಭ ಮುಹೂರ್ತದಲ್ಲೇ ಕರ್ನಾಟಕದ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬುದು ಸದ್ಯದ ಅತ್ಯಂತ ಪ್ರಮುಖ ರಾಜಕೀಯ ಅಪ್ಡೇಟ್ ಆಗಿದೆ.

