ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(D.K. Shivakumar) ಅವರು ಕರ್ನಾಟಕದ(Karnataka) ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಹೈಕಮಾಂಡ್‌ನಿಂದ ಹಸಿರು ನಿಶಾನೆ ಸಿಕ್ಕಿದ್ದರೂ, ಅವರಗೆ "ಮಾಸ"ದ ಸಂಕಟ ಎದುರಾಗಿದೆ
ಅಪ್ಪಟ ದೈವಭಕ್ತ, ಗ್ರಹಗತಿ ಹಾಗೂ ಮುಹೂರ್ತಗಳನ್ನು ಚಾಚೂತಪ್ಪದೆ ಪಾಲಿಸುವ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಪಟ್ಟಾಭಿಷೇಕದ ಸಮಯದಲ್ಲೇ ಹಿಂದೂ ಪಂಚಾಂಗದ ಅತ್ಯಂತ ವಿಶಿಷ್ಟ ಹಾಗೂ ಶುಭ ಕಾರ್ಯಗಳಿಗೆ ಅಷ್ಟೇನೂ ಆಪ್ತವಲ್ಲದ ಮಾಸವಾದ 'ಅಧಿಕ ಜ್ಯೇಷ್ಠ ಮಾಸ' ನಡೆಯುತ್ತಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಏನಿದು ಅಧಿಕ ಜ್ಯೇಷ್ಠ ಮಾಸದ ಗಂಡಾಂತರ? ಅನಿವಾರ್ಯ ಪರಿಸ್ಥಿತಿ ವರ್ಸಸ್ ಅಜ್ಜಯ್ಯನ ಅಪ್ಪಣೆ! ಡಿಕೆಶಿ ನಡೆ ಏನು? ಈಗಾಗಲೇ ಕಾಂಗ್ರೆಸ್ ಪಾಳಯದಲ್ಲಿ ಜೂನ್ 1 ಅಥವಾ ಜೂನ್ 3 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ತಾತ್ಕಾಲಿಕ ದಿನಾಂಕ ನಿಗದಿ ಮಾಡಿಕೊಳ್ಳಲಾಗಿದೆ. ಆದರೆ, ತಮಗೆ ರಾಜಕೀಯವಾಗಿ ಏನೇ ಏರುಪೇರಾದರೂ ನೊಣವಿನಕೆರೆಯ ಅಜ್ಜಯ್ಯನ ಪೀಠದ ಆಶೀರ್ವಾದ ಪಡೆಯುವ ಡಿ.ಕೆ. ಶಿವಕುಮಾರ್, ಈ ಸಾಂವಿಧಾನಿಕ ಅನಿವಾರ್ಯತೆ ಮತ್ತು ಜ್ಯೋತಿಷ್ಯದ ದೋಷವನ್ನು ಹೇಗೆ ಸರಿದೂಗಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ತಕ್ಷಣವೇ ಅವರು ನೊಣವಿನಕೆರೆಗೆ ಭೇಟಿ ನೀಡಿ, ಈ ಅಧಿಕ ಮಾಸದ ಇಕ್ಕಟ್ಟಿನ ನಡುವೆಯೂ ಅಧಿಕಾರ ಸ್ವೀಕರಿಸಲು ಇರುವ 'ಪರಿಹಾರ' ಹಾಗೂ 'ಅಪ್ಪಣೆ'ಯನ್ನು ಪಡೆದುಕೊಂಡೇ ಮುಂದಿನ ಹೆಜ್ಜೆ ಇಡಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಹಿಂದೂ ಪಂಚಾಂಗದ ಪ್ರಕಾರ, ಸೌರಮಾನ ಮತ್ತು ಚಾಂದ್ರಮಾನ ಕಾಲಗಣನೆಯನ್ನು ಸರಿದೂಗಿಸಲು ಪ್ರತಿ ಮೂರು ವರ್ಷಗಳಿಗೊಮ್ಮೆ 'ಅಧಿಕ ಮಾಸ' (ಪುರುಷೋತ್ತಮ ಮಾಸ) ಬರುತ್ತದೆ. ಈ ಬಾರಿ 2026ರಲ್ಲಿ ಮೇ 17 ರಿಂದ ಜೂನ್ 15ರ ವರೆಗೆ 'ಅಧಿಕ ಜ್ಯೇಷ್ಠ ಮಾಸ' ಚಾಲ್ತಿಯಲ್ಲಿದೆ.
ಶಾಸ್ತ್ರಗಳ ಪ್ರಕಾರ, ಈ ಅಧಿಕ ಮಾಸವನ್ನು ಭಗವದ್ಚಿಂತನೆಗೆ ಮಾತ್ರ ಶ್ರೇಷ್ಠ ಎನ್ನಲಾಗುತ್ತದೆಯೇ ವಿನಃ, ಯಾವುದೇ ಲೌಕಿಕ ಸುಖ ಅಥವಾ ಹೊಸ ಜವಾಬ್ದಾರಿಗಳ ಆರಂಭಕ್ಕೆ ಇಲ್ಲಿ ಶುಭ ಮುಹೂರ್ತ ಇರುವುದಿಲ್ಲ. ಈ ಅವಧಿಯಲ್ಲಿ ಮದುವೆ, ಗೃಹಪ್ರವೇಶ, ಮುಂಜಿ ಹಾಗೂ ಹೊಸ ವ್ಯಾಪಾರ-ಉದ್ಯೋಗ ಅಥವಾ ಉದ್ಯಮದ ಆರಂಭವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗಿದ್ದಲ್ಲಿ, ರಾಜ್ಯದ ಅತ್ಯುನ್ನತ 'ಮುಖ್ಯಮಂತ್ರಿ' ಹುದ್ದೆಯ ಹೊಸ ಆರಂಭಕ್ಕೆ ಈ ಮಾಸ ಅಡ್ಡಿಯಾಗುವುದಿಲ್ಲವೇ ಎಂಬ ಪ್ರಶ್ನೆ ಜ್ಯೋತಿಷ್ಯ ವಲಯದಲ್ಲಿ ಎದ್ದಿದೆ.
ರಾಜ್ಯ ರಾಜಕಾರಣದ ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಿರುವುದರಿಂದ ತಕ್ಷಣವೇ ಹೊಸ ಸರ್ಕಾರ ರಚನೆಯಾಗಬೇಕಾದ ಅನಿವಾರ್ಯತೆ ಇದೆ. ಜೂನ್ 15ರ ವರೆಗೆ ಅಧಿಕ ಮಾಸ ಇರುವುದರಿಂದ ಅಲ್ಲಿಯವರೆಗೆ ಪ್ರಮಾಣ ವಚನವನ್ನು ಮುಂದೂಡುವುದು ರಾಜಕೀಯವಾಗಿ ಅಸಾಧ್ಯದ ಮಾತು.

