ವಿಜಯನಗರ: ರಾಜಕೀಯದಲ್ಲಿ ಕೇವಲ ಚದುರಂಗದಾಟ ಮಾತ್ರವಲ್ಲ, ದೈವಬಲವೂ ಅಷ್ಟೇ ಮುಖ್ಯ ಎಂಬ ಮಾತು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ (D.K. Shivakumar) ಅವರ ವಿಷಯದಲ್ಲಿ ಅಕ್ಷರಶಃ ನಿಜವಾಗಿದೆ. ಕೋಟ್ಯಂತರ ಭಕ್ತರ ಆರಾಧ್ಯ ದೈವ, ಕಾರ್ಣಿಕದ ದೇವರೆಂದೇ ಪ್ರಸಿದ್ಧಿಯಾದ ವಿಜಯನಗರ ಜಿಲ್ಲೆಯ ಮೈಲಾರ ಲಿಂಗೇಶ್ವರನಿಗೆ ಸಲ್ಲಿಸಿದ ಒಂದು ವಿಶೇಷ ಕಾಣಿಕೆ ಹಾಗೂ ದೋಷ ಪರಿಹಾರವೇ ಇಂದು ಡಿಕೆಶಿಯವರನ್ನು ಸಿಎಂ ಕುರ್ಚಿಯವರೆಗೆ ತಂದು ನಿಲ್ಲಿಸಿದೆ ಎಂಬ ರೋಚಕ ಚರ್ಚೆ ಈಗ ಭಕ್ತವಲಯ ಹಾಗೂ ರಾಜಕೀಯ ವಲಯದಲ್ಲಿ ಜೋರಾಗಿದೆ.
ಅಂದು ಅರಿಯದೇ ನಡೆದಿದ್ದ ಆ ಪ್ರಮಾದವೇನು?
ಘಟನೆ ನಡೆದಿರುವುದು 2018ರಲ್ಲಿ. ಮೈಲಾರ ಲಿಂಗೇಶ್ವರನ ಪ್ರಸಿದ್ಧ ಕಾರ್ಣಿಕ ವಾಣಿ ಕೇಳಲು ಅಂದು ಡಿ.ಕೆ. ಶಿವಕುಮಾರ್ ಅವರು ಹೆಲಿಕಾಪ್ಟರ್ ಮೂಲಕ ಮೈಲಾರ ಕ್ಷೇತ್ರಕ್ಕೆ ಆಗಮಿಸಿದ್ದರು. ಆದರೆ, ಆ ಸಂದರ್ಭದಲ್ಲಿ ಅವರಿಂದ ಅರಿಯದೇ ಒಂದು ದೊಡ್ಡ ಪ್ರಮಾದ ನಡೆದುಹೋಗಿತ್ತು. ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೈಲಾರ ಲಿಂಗೇಶ್ವರ ದೇವಸ್ಥಾನದ ಮೇಲ್ಭಾಗದಲ್ಲಿ ಹಾರಾಡಿತ್ತು. ಸ್ಥಳೀಯ ನಂಬಿಕೆ ಪ್ರಕಾರ, ದೇವಸ್ಥಾನದ ಗೋಪುರದ ಮೇಲೆ ಹೆಲಿಕಾಪ್ಟರ್ ಅಥವಾ ವಿಮಾನ ಹಾರಾಡುವುದು ಅತ್ಯಂತ ಅಶುಭ ಹಾಗೂ ದೇವರ ಕೋಪಕ್ಕೆ ಕಾರಣವಾಗುತ್ತದೆ. ಈ ಹಿಂದೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೆಲಿಕಾಪ್ಟರ್ ಕೂಡ ಇದೇ ರೀತಿ ದೇವಸ್ಥಾನದ ಮೇಲೆ ಹಾರಾಡಿತ್ತು, ಅದರ ಬೆನ್ನಲ್ಲೇ ಅವರು ಸಾಲು ಸಾಲು ಸಂಕಷ್ಟ ಮತ್ತು ಜೈಲುವಾಸ ಅನುಭವಿಸಿದ್ದರು ಎಂಬುದು ಇಲ್ಲಿನ ಜನರ ಬಲವಾದ ನಂಬಿಕೆಯಾಗಿತ್ತು.
ಆಕಸ್ಮಿಕವಾಗಿ ನಡೆದ ಈ ಘಟನೆಯ ನಂತರ ಡಿ.ಕೆ. ಶಿವಕುಮಾರ್ ಅವರ ಜೀವನದಲ್ಲಿ ಸಾಲು ಸಾಲು ಬಿಕ್ಕಟ್ಟುಗಳು ಎದುರಾದವು. ಜಾರಿ ನಿರ್ದೇಶನಾಲಯದ (ED) ತನಿಖೆ, ತಿಂಗಳುಗಳ ಕಾಲ ದೆಹಲಿಯ ತಿಹಾರ್ ಜೈಲುವಾಸ ಹಾಗೂ ರಾಜಕೀಯವಾಗಿ ಅನೇಕ ಅಡೆತಡೆಗಳನ್ನು ಅವರು ಅನುಭವಿಸಬೇಕಾಯಿತು. ಇದು ಮೈಲಾರ ಲಿಂಗೇಶ್ವರನ ಮೇಲ್ಭಾಗದಲ್ಲಿ ಹೆಲಿಕಾಪ್ಟರ್ ಹಾರಿಸಿದ ದೈವಕೋಪದ ಫಲ ಎಂದು ಅವರ ಆಪ್ತ ಬೆಂಬಲಿಗರು ಹಾಗೂ ಧರ್ಮದರ್ಶಿಗಳು ಡಿಕೆಶಿಯವರಿಗೆ ತಿಳಿಸಿದ್ದರು ಎನ್ನಲಾಗಿದೆ.
ಪ್ರಾಯಶ್ಚಿತ್ತಕ್ಕಾಗಿ ಬೆಳ್ಳಿಯ ಹೆಲಿಕಾಪ್ಟರ್ ತಪ್ಪು ಕಾಣಿಕೆ
ತಮ್ಮಿಂದ ಆದ ತಪ್ಪನ್ನು ಸರಿಪಡಿಸಿಕೊಳ್ಳಲು ದೃಢವಾಗಿ ನಿರ್ಧರಿಸಿದ ಡಿ.ಕೆ. ಶಿವಕುಮಾರ್, ಡಿಸೆಂಬರ್ 18, 2020 ರಂದು ಮತ್ತೆ ಮೈಲಾರ ಕ್ಷೇತ್ರಕ್ಕೆ ಭೇಟಿ ನೀಡಿದರು. ಅಂದು ಅವರು ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾಯಶ್ಚಿತ್ತ ವಿಧಿವಿಧಾನಗಳನ್ನು ಸಲ್ಲಿಸಿ, ತಪ್ಪು ಕಾಣಿಕೆಯನ್ನು ಅರ್ಪಿಸಿದರು. ತಾವು ಹೆಲಿಕಾಪ್ಟರ್ ಮೂಲಕ ಮಾಡಿದ ತಪ್ಪಿಗೆ ಕ್ಷಮೆಯಾಚಿಸುವ ಸಂಕೇತವಾಗಿ ಬರೋಬ್ಬರಿ ಒಂದು ಕೆ.ಜಿ ತೂಕದ ಬೆಳ್ಳಿಯ ಹೆಲಿಕಾಪ್ಟರ್ ಅನ್ನು ಮೈಲಾರ ಲಿಂಗೇಶ್ವರನ ಪಾದಕ್ಕೆ ಅರ್ಪಿಸಿ ದೋಷ ಪರಿಹಾರ ಮಾಡಿಕೊಂಡಿದ್ದರು.
ಫಲ ನೀಡಿದ ಮೈಲಾರಪ್ಪನ ಆಶೀರ್ವಾದ?
ವಿಶೇಷವೆಂದರೆ, ಈ ದೋಷ ಪರಿಹಾರದ ನಂತರ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಗ್ರಾಫ್ ದಿನದಿಂದ ದಿನಕ್ಕೆ ಏರತೊಡಗಿತು. ಅವರ ಮೇಲಿದ್ದ ಸಂಕಷ್ಟಗಳೆಲ್ಲವೂ ಒಂದೊಂದಾಗಿ ದೂರವಾದವು. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದ ಅವರು, ಈಗ ಸಿದ್ದರಾಮಯ್ಯನವರ ರಾಜೀನಾಮೆಯ ನಂತರ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜೂನ್ 3ರಂದು ಅಧಿಕಾರ ವಹಿಸಿಕೊಳ್ಳುತ್ತಿರುವುದು ಮೈಲಾರ ಲಿಂಗೇಶ್ವರನ ಸಂಪೂರ್ಣ ಆಶೀರ್ವಾದ ಎಂದು ಕ್ಷೇತ್ರದ ಭಕ್ತರು ಮತ್ತು ಧರ್ಮದರ್ಶಿಗಳು ವಿಶ್ಲೇಷಿಸುತ್ತಿದ್ದಾರೆ.

