ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ (Karnataka CM) ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ವಿಧಾನಸೌಧಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ (DK Shivakumar) ಅವರು ಸಾಂಪ್ರದಾಯಿಕ ವಾಡಿಕೆಯನ್ನು ಬದಿಗಿಟ್ಟು ವಿಭಿನ್ನವಾಗಿ ಶಕ್ತಿಸೌಧ (Vidhanasoudha) ಪ್ರವೇಶಿಸಿದ್ದು ಎಲ್ಲರ ಗಮನ ಸೆಳೆದಿದೆ.
ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಮತ್ತು ಸಚಿವರು ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕವೇ ಒಳಪ್ರವೇಶಿಸುವುದು ವಾಡಿಕೆ. ಪಶ್ಚಿಮ ಭಾಗದ ಮೂರನೇ ಮಹಡಿಯಲ್ಲೇ ಸಿಎಂ ಕಚೇರಿ ಇರುವ ಕಾರಣ ಬಹುತೇಕರು ಇದೇ ದ್ವಾರವನ್ನು ಬಳಸುತ್ತಾರೆ. ಆದರೆ ಡಿ.ಕೆ.ಶಿವಕುಮಾರ್ ಅವರು ಉತ್ತರ ದ್ವಾರದ ಮೂಲಕ ಪ್ರವೇಶಿಸಲು ಮುಂದಾದರು.
ಎಲ್ಲವೂ ಉತ್ತರಾಭಿಮುಖವೇ ಆಗಬೇಕು !
ಮುಖ್ಯಮಂತ್ರಿಯಾದ ಬಳಿಕ ತಮ್ಮ ಚೊಚ್ಚಲ ಸಚಿವ ಸಂಪುಟ ಸಭೆಯನ್ನು ಮುಗಿಸಿದ ಶಿವಕುಮಾರ್ ಅವರು, ಮಾಧ್ಯಮಗಳಿಗೆ ಮಾಹಿತಿ ನೀಡಲು ವಿಧಾನಸೌಧದ ಸಮ್ಮೇಳನ ಸಭಾಂಗಣಕ್ಕೆ ಆಗಮಿಸಿದರು. ಈ ವೇಳೆ ಪತ್ರಿಕಾಗೋಷ್ಠಿಗಾಗಿ ಮಾಡಲಾಗಿದ್ದ ಆಸನದ ವ್ಯವಸ್ಥೆಯು ದಕ್ಷಿಣಾಭಿಮುಖವಾಗಿರುವುದನ್ನು (ದಕ್ಷಿಣದ ಕಡೆಗೆ ಮುಖ ಮಾಡಿ ಕೂರುವುದು) ಕಂಡು ಅವರು ತಕ್ಷಣವೇ ಉತ್ತರಾಭಿಮುಖವಾಗಿ ಕುಳಿತು ಮಾತನಾಡಲು ಇಚ್ಛಿಸಿದರು.
ಆದರೆ, ಮಾಧ್ಯಮ ಪ್ರತಿನಿಧಿಗಳು ಈಗಾಗಲೇ ಕ್ಯಾಮೆರಾ ಹಾಗೂ ಮೈಕ್ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದರಿಂದ ಈಗ ಬದಲಾಯಿಸಿದರೆ ತೊಂದರೆಯಾಗಲಿದೆ ಎಂದು ಸಿಎಂ ಗಮನಕ್ಕೆ ತಂದರು. ಇದಕ್ಕೆ ಒಪ್ಪಿದ ಡಿ.ಕೆ.ಶಿವಕುಮಾರ್ ಅವರು ಅನಿವಾರ್ಯವಾಗಿ ದಕ್ಷಿಣಾಭಿಮುಖವಾಗಿಯೇ ಪತ್ರಿಕಾಗೋಷ್ಠಿ ನಡೆಸಿದರು. ಆದರೆ, "ಮುಂದಿನ ಬಾರಿ ನಾನು ಪತ್ರಿಕಾಗೋಷ್ಠಿ ನಡೆಸುವಾಗ ಉತ್ತರಾಭಿಮುಖವಾಗಿಯೇ ಆಸನದ ವ್ಯವಸ್ಥೆ ಮಾಡಬೇಕು" ಎಂದು ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದು, ಅವರ ವಾಸ್ತು ನಂಬಿಕೆಗೆ ಸಾಕ್ಷಿಯಂತಿದೆ.
ಮೆಟ್ಟಿಲುಗಳಿಗೆ ಸಾಷ್ಟಾಂಗ ನಮಸ್ಕಾರ
ವಿಧಾನಸೌಧದ ಉತ್ತರ ದ್ವಾರದ ಬಳಿ ಆಗಮಿಸಿದ ಮುಖ್ಯಮಂತ್ರಿಗಳು, ಕಾರಿನಿಂದ ಇಳಿಯುತ್ತಿದ್ದಂತೆ ತಮ್ಮ ಚಪ್ಪಲಿಗಳನ್ನು ಕಳಚಿಟ್ಟು ಪ್ರವೇಶ ದ್ವಾರದ ಮೆಟ್ಟಿಲುಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕಿದರು. ಶಕ್ತಿಸೌಧಕ್ಕೆ ಭಕ್ತಿಪೂರ್ವಕ ಪ್ರಣಾಮ ಸಲ್ಲಿಸಿದ ಬಳಿಕವಷ್ಟೇ ಅವರು ಒಳಗೆ ಹೆಜ್ಜೆ ಇಟ್ಟರು. ನಂತರ ತಮ್ಮ ಸಿಎಂ ಕೊಠಡಿಯಲ್ಲೂ ವಿಶೇಷ ಪೂಜೆ ನೆರವೇರಿಸಿ ಅಧಿಕೃತವಾಗಿ ಆಸನ ಅಲಂಕರಿಸಿದರು.
ಸಿಎಂ ಕೊಠಡಿಯಲ್ಲಿ ಅಜ್ಜಯ್ಯನ ಫೋಟೋ
ಡಿ.ಕೆ.ಶಿವಕುಮಾರ್ ಅವರ ಆರಾಧ್ಯ ದೈವ ನೊಣವಿನಕೆರೆ ಅಜ್ಜಯ್ಯ ಅವರ ಭಾವಚಿತ್ರ ಸೇರಿ ದೇವರ ಫೋಟೋಗಳನ್ನಿಡಲಾಗಿದೆ. ತಾವು ನಂಬುವ ದೈವ ತಮ್ಮ ಜೊತೆಗೇ ಇರಬೇಕೆಂದು ಡಿಕೆಶಿಯವರು ಅಜ್ಜಯನ ಫೋಟೋವನ್ನು ತಮ್ಮ ಕಚೇರಿಯಲ್ಲಿರಿಸಿಕೊಂಡಿದ್ದಾರೆ

