Dailyhunt Logo
  • Light mode
    Follow system
    Dark mode
    • Play Story
    • App Story
DK SHIVAKUMAR: ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪ್ರಥಮಾಧ್ಯತೆಯಾಗಲಿ: ಸಿಎಂ

DK SHIVAKUMAR: ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪ್ರಥಮಾಧ್ಯತೆಯಾಗಲಿ: ಸಿಎಂ

Navasamaja.com 1 week ago

ಲಬುರಗಿ : ರಾಜ್ಯದಲ್ಲಿ ಇಲ್ಲಿಯವೆರೆಗೆ ನಿರೀಕ್ಷಿತ ಮಳೆ (Monsoon) ಬಾರದೆ, ಬರದ (Drought) ಛಾಯೆ ಆವರಿಸಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು (Drinking water), ಜಾನುವಾರುಗಳಿಗೆ ಮೇವು ಪೂರೈಕೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.

ಶಿವಕುಮಾರ (DK Shivakumar) ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಕಲಬುರಗಿ ವಿಭಾಗದ ಪ್ರಗತಿ ಪರಿಶೀಲನೆ ಹಾಗೂ ಬರ ಪರಿಸ್ಥಿತಿ ಅವಲೋಕನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ತೀವ್ರ ಕೊರತೆ ನಮ್ಮ ಅರಿವಿಗೆ ಬಂದಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಅಲ್ಪಸ್ವಲ್ಪ ಮಳೆ ಬಂದರೆ, ಕಲಬುರಗಿ ವಿಭಾಗದಲ್ಲಿ ಮಳೆ ಇಲ್ಲ ಎಂದರು.

ನಾಡಿನಲ್ಲಿ ಬರದ ಪರಿಸ್ಥಿತಿ ಅವಲೋಕಿಸಲು ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಿಂದಲೆ ಕಲ್ಯಾಣ ಕರ್ನಾಟಕ ಭಾಗದ ಬರ ಪರಿಸ್ಥಿತಿ ಪರಿಶೀಲನೆ ಮಾಡುತ್ತಿರುವೆ. 2-3 ದಿನದಲ್ಲಿ ಬೆಳಗಾವಿ ವಿಭಾಗದ ಪ್ರಗತಿ ಪರಿಶೀಲನೆ ಸಹ ಮಾಡಲಾಗುವುದು. ಜಿಲ್ಲೆಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ಹಣದ ಕೊರತೆ ಇಲ್ಲ. ಪ್ರದೇಶದ ಬೀದರ ಜಿಲ್ಲೆಯಲ್ಲಿ 12 ಕೋಟಿ ರೂ, ಕಲಬುರಗಿ 36 ಕೋಟಿ ರೂ., ಕೊಪ್ಪಳ 10 ಕೋಟಿ ರೂ., ರಾಯಚೂರು 3 ಕೋಟಿ ರೂ., ಯಾದಗಿರಿ 9 ಕೋಟಿ ರೂ., ವಿಜಯನಗರ ಜಿಲ್ಲೆಗಳ ಡಿ.ಸಿ. ಪಿ.ಡಿ. ಖಾತೆಯಲ್ಲಿ 7 ಕೋಟಿ ರೂ. ಹಣ ಲಭ್ಯವಿದ್ದು ಇದನ್ನು ಸಮರ್ಪಕವಾಗಿ ಖರ್ಚು ಮಾಡಬೇಕು ಎಂದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಯಾವುದೇ ಅನುದಾನ ಕೊರತೆ ಇಲ್ಲ. ಮೇವಿ ದಾಸ್ತಾನು ಮಾಡಿಕೊಳ್ಳಬೇಕು. ಹೆಚ್ಚಿನ ಅನುದಾನ ಬೇಕಿದಲ್ಲಿ ರಾಜ್ಯ ಸರ್ಕಾರ ನೀಡಲು ಬದ್ಧವಾಗಿದೆ. ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತನ್ನಿ ಎಂದರು.

ಕೃಷಿ ಇಲಾಖೆ ಚರ್ಚೆ ವೇಳೆಯಲ್ಲಿ ಕಲಬುರಗಿ ವಿಭಾಗದಲ್ಲಿ ಇದೂವರೆಗೆ 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆಗಿದ್ದು 11.16 ಲಕ್ಷ ಹೆಕ್ಟೇರ್ ಮಾತ್ರ. ಪ್ರದೇಶದ 51 ತಾಲೂಕಿನ ಪೈಕಿ 36 ತಾಲೂಕುಗಳು ತೀವ್ರ ಮಳೆ ಕೊರತೆ ಅನುಭವಿಸುತ್ತಿವೆ. ಜುಲೈ ಮಾಹೆಯಲ್ಲಂತು ಮಳೆಯ ಅಭಾವ ತೀವ್ರವಾಗಿದೆ ಎಂದು ಕಂದಾಯ ಇಲಾಖೆಯ ವಿಪತ್ತು ವಿಭಾಗದ ಕಾರ್ಯದರ್ಶಿ ಮನೋಜಕುಮಾರ ಮೀನಾ ಸಭೆಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಸಿ.ಎಂ. ಅವರು ಮುಂದಿನ ದಿನದಲ್ಲಿ ಮಳೆ ಬರುವ ಆಶಾಭಾವನೆ ಇಟ್ಟುಕೊಂಡಿದ್ದೇನೆ. ಒಂದು ವೇಳೆ ಮಳೆ ಬಂದರೆ ಅದಕ್ಕೆ ಪೂರಕವಾಗಿ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಯಾವುದೇ ಸಮಸ್ಯೆಯಾಗದಂತೆ ದಾಸ್ತಾನು ಮಾಡಿಟ್ಟುಕೊಳ್ಳಬೇಕು ಎಂದರು.

ಸಭೆಯಲ್ಲಿ ಭಾಗವಹಿಸಿದ ದೇವದುರ್ಗ ಶಾಸಕಿ ಕರಿಯಮ್ಮ ಜಿ. ನಾಯಕ್, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ್ ಆದಿಯಾಗಿ ಅನೇಕ ಶಾಸಕರು ಹಳ್ಳಿಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇನ್ನು ಟಿ.ಸಿ. ಕೆಟ್ಟರೆ ದುರಸ್ತಿ, ಬದಲಾವಣೆಗೆ 15 ದಿನ ಕಳೆಯುತ್ತಿದೆ. ಇದು ಕೊಳವೆ ಬಾವಿ ಹೊಂದಿದ ರೈತರು ಇದ್ದ ಬೆಳೆಯನ್ನು ರಕ್ಷಣೆ ಮಾಡದಂತೆ ಸ್ಥಿತಿ ಎದುರಾಗಿದ್ದು, ಕನಿಷ್ಠ ಪಕ್ಷ ಟಿ.ಸಿ. ಬದಲಾವಣೆ, ದುರಸ್ತಿ ಬೇಗ ಮಾಡಿಸಬೇಕೆಂದು ಸಿ.ಎಂ. ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆಸಿದ ಸಿ.ಎಂ. ಡಿ.ಕೆ. ಶಿವಕುಮಾರ ಅವರು, ಟಿ.ಸಿ. ಕೆಟ್ಟರೆ ದುರಸ್ತಿ ಮತ್ತು ಬದಲಾವಣೆ ಕ್ಷಿಪ್ರಗತಿಯಲ್ಲಿ ಮಾಡಬೇಕು. ಪ್ರದೇಶದ ಎಲ್ಲಾ ಜಿಲ್ಲೆಗಳಿಗೆ ಹೋಗಿ ವಿದ್ಯುತ್ ಸಮಸ್ಯೆಗಳು ಆಲಿಸಬೇಕೆಂದು ಸಭೆಯಲ್ಲಿದ್ದ ಜೆಸ್ಕಾಂ ಎಂ.ಡಿ. ಅವರಿಗೆ ಖಡಕ್ ನಿರ್ದೇಶನ ನೀಡಿದರು.

ಸೂಪರ್ ಎಲ್ನಿನೋ ಜಾಗ್ರತೆ ಇರಲಿ

ವಿಶ್ವದಾದ್ಯಂತ ಸೂಪರ್ ಎಲ್ನಿನೋ ಭಾಸವಾಗುತ್ತಿದೆ. ಮುಂದಿನ ದಿನದಲ್ಲಿ ಮಳೆ ಕ್ಷೀಣಿಸಿ ಉಷ್ಣಾಂಶ ಹೆಚ್ಚಾಗಿ ಅನೇಕ ಕಾಯಿಲೆಗಳು, ಡೆಂಗ್ಯೂ ಜ್ವರ, ಚಿಕನ್ ಗುನ್ಯಾದಂತಹ ಸಾಂಕ್ರಾಮಿಕ ರೋಗ ಬರುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿ ವರ್ಗ ಇದೆಲ್ಲವನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಬೇಕು. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನಿರ್ದೇಶನ ನೀಡಿದರು.

ನದಿ ಜೋಡಣೆಗೆ ಒಪ್ಪಿಗೆ

ಇತ್ತೀಚೆಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್ ಪಾಟೀಲ ಅವರು ತುಂಗಭದ್ರಾ ಜಲಾಶಯದ ಸ್ಪಿಲ್‌ವೇ ಗೇಟ್‌ಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾದ ಸಂದರ್ಭದಲ್ಲಿ ನೆರೆಯ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಮತ್ತು ತೆಲಾಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರೊಂದಿಗೆ ಸೇರಿ ಕಾವೇರಿ, ಕೃಷ್ಣಾ, ಗೋದಾವರಿ ನದಿ ಜೋಡಣೆ ಮಾಡಬೇಕೆಂದು ಒಪ್ಪಂದಕ್ಕೆ ಬರಲಾಗಿದೆ. ಇದನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 1 ಲಕ್ಷ ಕೋಟಿ ರೂ. ಅನುದಾನ ಮೀಸಲಿಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಹೀಗಾದಲ್ಲಿ 33 ಕೋಟಿ ಟಿ.ಎಂ.ಸಿ. ನೀರು ರಾಜ್ಯದ ಪಾಲಾಗಲಿದ್ದು, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಇತರೆ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಸ್ವತ ಪರಿಹಾರ ಸಿಗಲಿದೆ ಎಂದರು.

ಕೆ.ಕೆ.ಆರ್.ಡಿ.ಬಿ. ಹಣ ಖರ್ಚು ಮಾಡಲಿ

ನಮ್ಮ ಸರ್ಕಾರ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಳೆದ ಮೂರು ವರ್ಷದಲ್ಲಿ 13,000 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಬಹುತೇಕ ಕಾಮಗಾರಿಗಳು ಇನ್ನು ಪೂರ್ಣಗೊಂಡಿಲ್ಲ, ಅದರಲ್ಲಿ ಕೆಲವು ಇನ್ನು ಆರಂಭವಾಗಿಲ್ಲ. ಕಾಲಮಿತಿಯಲ್ಲಿ ಅನುದಾನ ಖರ್ಚು ಮಾಡಿ ಕಾಮಗಾರಿಗಳು ಪೂರ್ಣಗೊಳಿಸಬೇಕೆಂದು ಸಿ.ಎಂ. ಸೂಚಿಸಿದರು.

ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, ಇನ್ನು ಪ್ರಸಕ್ತ 2026-27ನೇ ಸಾಲಿನ ಕ್ರಿಯಾ ಯೋಜನೆ ರೂಪಿಸಲು ಮುಂದಿನ 15 ದಿನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಕ್ರಿಯಾ ಯೋಜನೆ ಪ್ರಸ್ತಾವನೆ ಮಂಡಳಿಗೆ ಸಲ್ಲಿಸಬೇಕೆಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಕಳೆದ ಮೂರು ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ 9,304 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ. ಹಣ ತ್ವರಿತಗತಿಯಲ್ಲಿ ಖರ್ಚು ಮಾಡಲು 229 ಇಂಜಿನೀಯರ್ ಹುದ್ದೆ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರು ನೀಡಿದ್ದು ಕೇವಲ 21. ಇನ್ನು ಇಲಾಖೆಗೆ 703 ಸಿಬ್ಬಂದಿ ಕೋರಿದ್ದು, ಇದನ್ನು ಮಂಜೂರು ಮಾಡಿದಲ್ಲಿ ಆರ್ಥಿಕ ಪ್ರಗತಿ ಸಾಧಿಸಲು ನೆರವಾಗಲಿದೆ ಎಂದರು.

ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಸ್.ಸಿ-ಎಸ್.ಟಿ ಸಮುದಾಯದ ಜನರಿದ್ದಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಹಣ ಖರ್ಚು ಮಾಡಲು ಅವಕಾಶವಿದ್ದು, ಈ ಪ್ರಮಾಣ ಶೇ.40-50 ರೊಳಗಿದ್ದಲ್ಲಿ ಖರ್ಚು ಮಾಡಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತ ಪರಿಷತ್ತು ಅವಕಾಶ ಮಾಡಿಕೊಟ್ಟಲ್ಲಿ ಮಂಡಳಿ ಅನುದಾನ ಇನು ಹೆಚ್ಚು ಖರ್ಚು ಮಾಡಲು ನೆರವಾಗಲಿದೆ ಎಂದರು.

ಕಂದಾಯ ಅಭಿಯಾನ ಕೈಗೊಳ್ಳಿ

ನಮ್ಮ ಸರ್ಕಾರದ ಮೇಲೆ ಜನರ ನಿರೀಕ್ಷೆ ತುಂಬಾ ಜಾಸ್ತಿ ಇದೆ. ಜನಸಮುದಾಯದ ಬದುಕಿನಲ್ಲಿ ಬದಲಾವಣೆ ತರಬೇಕು, ಬಡವರ ಬದುಕು ಹಸನಗೊಳಿಸಬೇಕೆಂದು ನಮ್ಮ ಅಭಿಲಾಷೆಯಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಮುಂದಿನ ಮೂರು ತಿಂಗಳಿನಲ್ಲಿ ಇ-ಪೌತಿ, ದರಖಾಸ್ತು ಪೋಡಿ, ಹಕ್ಕು ಪತ್ರ ವಿತರಣೆ, ಕಂದಾಯ ಗ್ರಾಮ ಘೋಷಣೆಯಂತಹ ಅನೇಕ ಜನರ ಮನೆ ಬಾಗಿಲಿಗೆ ಸೇವೆ ನೀಡುವ ಯೋಜನೆಗಳನ್ನು ಅಭಿಯಾನ ರೂಪದಲ್ಲಿ ಜಾರಿಗೆ ತರುವ ಮೂಲಕ ಬಡವರ ನೆಮ್ಮದಿ ಬದುಕಿಗೆ ನೀವೆಲ್ಲ ಕಾರಣರಾಗಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಿ.ಎಂ. ನಿರ್ದೇಶನ ನೀಡಿದರು.

ಗ್ರಾಮೀಣಾವೃದ್ಧಿ ಚರ್ಚೆ ವೇಳೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 1,000 ಕೊಟಿ ರೂ. ವೆಚ್ಚದಲ್ಲಿ 1,025 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುತ್ತಿದ್ದು, ಮಾರ್ಚ್ 2027ಕ್ಕೆ ಮುಗಿಯಲಿದೆ. ಇನ್ನು ಪ್ರಗತಿ ಪಥ ಯೋಜನೆಯಡಿ ಪ್ರತಿ ವಿಧಾನಸಭಾ ಕೇತ್ರಕ್ಕೆ 30 ಕಿ.ಮೀ. ಗಳಂತೆ ಒಟ್ಟು 7,110 ಕಿ.ಮೀ ನಾಡಿನಾದ್ಯಂತ ಹಳ್ಳಿ ರಸ್ತೆ ಸುಧಾರಣೆಗೆ ಎ.ಡಿ.ಬಿ. ಬ್ಯಾಂಕಿನಿಙದ 5,000 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದು, ಟೆಂಡರ್ ಪ್ರಕ್ರಿಯೆ ನಡೆದಿದೆ. ಕೇಂದ್ರ ಸರ್ಕಾರವು ನರೇಗಾ ಯೋಜನೆ ಬದಲಾಯಿಸಿ ವಿಬಿ-ಜಿ-ರಾಮ್ ಜಿ ಅನುಷ್ಠಾನಕ್ಕೆ ತಂದಿದು, ಇತ್ತೀಚೆಗೆ ಮಾರ್ಗಸೂಚಿ ನೀಡಿದ್ದರಿಂದ ಹಳೆ ಅನುಮೋದಿತ ಕ್ರಿಯಾ ಯೋಜನೆ ಕಾಮಗಾರಿಗಳನ್ನೆ ಕೈಗೆತ್ತಿಕೊಳ್ಳಲಾಗಿದೆ. ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ಸಹ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Navasamaja