ಬೆಂಗಳೂರು: ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮಾದರಿಯಲ್ಲಿಯೇ ಪೊಲೀಸರ ಸಂಕಷ್ಟ ಭತ್ಯೆಯ (police hardship allowance) ಪ್ರಮಾಣವನ್ನು ಶೇ.50ರಷ್ಟು ಹೆಚ್ಚಳಕ್ಕೆ ಸರ್ಕಾರದ ಸಮ್ಮತಿ ಇದೆ ಎಂದು ಸಿಎಂ ಡಿ ಕೆ ಶಿವಕುಮಾರ್ (cm dk shivakumar) ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸರಿಗಾಗಿ ಸಮಗ್ರ ಸಾಮರ್ಥ್ಯ ವೃದ್ದಿ ತರಬೇತಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿ ಅವರು, ಪೊಲೀಸರ ಆರ್ಥಿಕ ಅಗತ್ಯಗಳಿಗೆ ಮೊದಲು ಪ್ರಾಶಸ್ತ್ಯ ನೀಡಲಾಗುವುದು. ಗೃಹ ಇಲಾಖೆಯು ಪೊಲೀಸರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ಭರವಸೆ ನೀಡಿದರು. ಕರ್ನಾಟಕ ಪೊಲೀಸ್ ದೇಶದ ಹೆಮ್ಮೆ. ನಮ್ಮ ಪೊಲೀಸರು ದಕ್ಷತೆಗೆ, ಕಾರ್ಯಪರತೆಗೆ, ಕರ್ತವ್ಯ ನಿಷ್ಠೆಗೆ ಹೆಸರಾದವರು. ನಾವು ಹುಟ್ಟಿದ ಈ ಸಮಾಜಕ್ಕೆ ಋಣ ತೀರಿಸುವುದೇ ನಿಜವಾದ ಸೇವೆ. ಆ ಕೆಲಸವನ್ನು ನೀವು ಬಹಳ ಚೆನ್ನಾಗಿ ಮಾಡುತ್ತಿದ್ದೀರಿ. ಕಷ್ಟದ ಸಂದರ್ಭದಲ್ಲಿ ನೀವು ನಿಮ್ಮ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿ ನಾಡನ್ನು ರಕ್ಷಣೆ ಮಾಡುತ್ತಿದ್ದೀರಿ. ನೀವು ನಿಮ್ಮ ನಿಷ್ಠೆ, ಪ್ರಾಮಾಣಿಕತೆಯಲ್ಲಿ ದೇಶದ ಸಮಗ್ರತೆ, ಐಕ್ಯತೆ, ಶಾಂತಿ ಕಾಪಾಡುವುದು ಮುಖ್ಯ. ನಮ್ಮ ಆರಕ್ಷಕರು, ಕಾನೂನಿನ ಪಾಲಕರು, ಕಾನೂನಿನ ರಕ್ಷಕರು ಎಂದು ಶ್ಲಾಘಿಸಿದರು. ನಮ್ಮನ್ನು ರಕ್ಷಿಸಲು ನಮ್ಮ ಆರಕ್ಷಕರನ್ನು ಸಜ್ಜುಗೊಳಿಸುವ ಎನ್‌ಎಸ್ ಜಿ ಗೆ ಧನ್ಯವಾದಗಳು. ಸಮಾಜದಲ್ಲಿ ಅಶಾಂತಿ, ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ನೀವು ಶಿಷ್ಟರ ರಕ್ಷಣೆಗೆ ಬರುತ್ತೀರಿ. ರಾಷ್ಟ್ರೀಯ ಭದ್ರತಾ ಪಡೆ ತಮ್ಮ ಶಕ್ತಿಯನ್ನು ನಮ್ಮ ರಾಜ್ಯ ಪೊಲೀಸರಿಗೆ ಧಾರೆ ಎರೆಯುತ್ತಿದೆ. ಎನ್ ಎಸ್‌ಜಿಯಿಂದ ಪಡೆದ ತರಬೇತಿ ಸಾರ್ಥಕವಾಗಬೇಕು. ಅದನ್ನು ನಾಡಿನ, ಜನರ ರಕ್ಷಣೆಗೆ ಬಳಸಬೇಕು. ಎನ್ ಎಸ್ ಜಿ ತರಬೇತಿ ನಮ್ಮ ಪೊಲೀಸರ ಸಾಮರ್ಥ್ಯ ಹೆಚ್ಚಿಸುತ್ತದೆ ಕೌಶಲ್ಯವಂತರನ್ನಾಗಿ ಮಾಡುತ್ತದೆ ಎಂದರು.

