Dailyhunt Logo
  • Light mode
    Follow system
    Dark mode
    • Play Story
    • App Story
DK SHIVAKUMAR: ರಾಜ್ಯದ ಜನ ಈ ಬದಲಾವಣೆಗಾಗಿ ಬಹಳ ದಿನದಿಂದ ಕಾಯ್ತಿದ್ರು! ದೆಹಲಿಯಲ್ಲಿ ಡಿಕೆಶಿ ಆಡಿದ ಈ ಮಾತಿನ ಮರ್ಮ ಏನು?

DK SHIVAKUMAR: ರಾಜ್ಯದ ಜನ ಈ ಬದಲಾವಣೆಗಾಗಿ ಬಹಳ ದಿನದಿಂದ ಕಾಯ್ತಿದ್ರು! ದೆಹಲಿಯಲ್ಲಿ ಡಿಕೆಶಿ ಆಡಿದ ಈ ಮಾತಿನ ಮರ್ಮ ಏನು?

Navasamaja.com 4 days ago

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರಿ ಕುತೂಹಲ ಮೂಡಿಸಿದ್ದ ಸೌಹಾರ್ದಯುತ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಕೊನೆಗೂ ಮುಕ್ತಾಯದ ಹಂತ ತಲುಪಿದೆ. ಕಳೆದ ಗುರುವಾರ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಗೌರವಯುತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಶನಿವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ.

ಶಿವಕುಮಾರ್ ಅವರನ್ನು ನೂತನ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ದೆಹಲಿಗೆ ಭೇಟಿ ನೀಡಿರುವ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪತ್ರಕರ್ತರ ಮುಂದೆ ಆಡಿರುವ ಒಂದು ಮಾತು ಇಡೀ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.

ವರಿಷ್ಠರಿಗೆ ಆಹ್ವಾನ ನೀಡಿದೆ ನಿಯೋಜಿತ ಸಿಎಂ
ಜೂನ್ 3ರ ಬುಧವಾರದಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರು ಇಂದು ಸೋಮವಾರ ದೆಹಲಿಗೆ ಭೇಟಿ ನೀಡಿ ಕಾಂಗ್ರೆಸ್ ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಬರುವಂತೆ ವರಿಷ್ಠ ನಾಯಕರಿಗೆ ಆಹ್ವಾನ ನೀಡಲು ಅವರು ದೆಹಲಿಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ದೆಹಲಿಯಲ್ಲಿ ಪತ್ರಕರ್ತರು ನಿಯೋಜಿತ ಸಿಎಂ ಆಗಿ ಆಯ್ಕೆಯಾಗಿರುವ ಕುರಿತು ಪ್ರತಿಕ್ರಿಯೆ ಕೇಳಿದಾಗ, ಕರ್ನಾಟಕಕ್ಕೆ ನನ್ನ ಶುಭಾಶಯಗಳು. ಅವರೆಲ್ಲರೂ ಈ ಕ್ಷಣಕ್ಕಾಗಿ, ಅಂದರೆ ಈ ನಾಯಕತ್ವ ಬದಲಾವಣೆಗಾಗಿ ಬಹಳ ಸಮಯದಿಂದ ಕಾಯುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ. ರಾಜ್ಯದ ಜನರೇ ಈ ಬದಲಾವಣೆಯನ್ನು ಬಯಸಿದ್ದರು ಎಂಬ ಅರ್ಥ ಕೊಡುವ ಡಿಕೆಶಿಯವರ ಈ ನೇರ ನುಡಿ ಈಗ ಚರ್ಚೆಗೆ ಗ್ರಾಸವಾಗಿದೆ.

ಇನ್ನೊಂದೆಡೆ, ರಾಜ್ಯ ರಾಜಕಾರಣದಲ್ಲಿ ಹೊಸ ಸರ್ಕಾರದ ರಚನೆಯ ಚಟುವಟಿಕೆಗಳು ಗರಿಗೆದರಿವೆ. ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭದ ಸಿದ್ಧತೆಗಳು ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಹೊಸ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಸಚಿವಾಕಾಂಕ್ಷಿಗಳು ರಾಜ್ಯ ಮತ್ತು ಕೇಂದ್ರ ಮಟ್ಟದ ನಾಯಕರ ಮೇಲೆ ತೀವ್ರ ಪ್ರಭಾವ ಬೀರುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೈಕಮಾಂಡ್ ಮೂಲಗಳ ಪ್ರಕಾರ, ಬುಧವಾರ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ಅವರ ಜೊತೆಗೆ ಒಟ್ಟು 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ, ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಕಂಡುಬಂದ ಹಿನ್ನೆಲೆಯಲ್ಲಿ ಸದ್ಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯನ್ನು ಮುಂದೂಡಲು ಹೈಕಮಾಂಡ್‌ ತೀರ್ಮಾನಿಸಿದೆ. ಅಂದರೆ, ಬುಧವಾರ ಡಿಕೆಶಿ ಜೊತೆಗೆ ಬೇರೆ ಯಾರೂ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುತ್ತಿಲ್ಲ.

ಡಿಕೆ ಶಿವಕುಮಾರ್‌ಗೆ ಸಿದ್ದರಾಮಯ್ಯ ಶುಭ ಹಾರೈಕೆ
ರಾಜಕೀಯದ ಈ ಜಿದ್ದಾಜಿದ್ದಿನ ನಡುವೆಯೂ ಇಬ್ಬರು ನಾಯಕರು ಸೌಹಾರ್ದತೆ ಮೆರೆದಿರುವುದು ವಿಶೇಷ. ಸಿಎಂ ಪದವಿಯಿಂದ ಕೆಳಗಿಳಿದ ಸಿದ್ದರಾಮಯ್ಯ ಅವರಿಗೆ ಭಾವುಕ ಸಾಮಾಜಿಕ ಜಾಲತಾಣ ಪೋಸ್ಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ನೀಡಿದ ಜನಪರ ಯೋಜನೆಗಳನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ. ಅಲ್ಲದೆ ಪಕ್ಷ ಸಂಘಟನೆಯಲ್ಲಿ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದನ್ನು ಸ್ಮರಿಸಿದ್ದಾರೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಡಿ.ಕೆ. ಶಿವಕುಮಾರ್ ಅವರನ್ನು ಅಭಿನಂದಿಸಿ, ಡಿಕೆಶಿ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯ ಹೊಸ ದಾಖಲೆಗಳನ್ನು ಬರೆಯಲಿ ಎಂದು ಹಾರೈಸಿ ಸುದೀರ್ಘ ಪೋಸ್ಟ್ ಮಾಡಿದ್ದಾರೆ.

ಜೂನ್‌ 3ರ ಬುಧವಾರ ಸಂಜೆ ಲೋಕಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ. ಪ್ರಸ್ತುತ ದೆಹಲಿ ಪ್ರವಾಸದಲ್ಲಿರುವ ಅವರು ಇಂದು ಅಥವಾ ನಾಳೆ ಬೆಂಗಳೂರಿಗೆ ಮರಳಲಿದ್ದು, ನೂತನ ಸರ್ಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja