Dailyhunt Logo
  • Light mode
    Follow system
    Dark mode
    • Play Story
    • App Story
DK SHIVAKUMAR: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಮಧ್ಯಸ್ಥಿಕೆಗಾಗಿ ಸಿಎಂ ಮನವಿ

DK SHIVAKUMAR: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಮಧ್ಯಸ್ಥಿಕೆಗಾಗಿ ಸಿಎಂ ಮನವಿ

ಬೆಂಗಳೂರು: "ರಾಜ್ಯದ ಕುಡಿಯುವ ನೀರು (Drinking Water), ನೀರಾವರಿ ಮತ್ತು ಬರ ಪರಿಹಾರ (Drought) ಅಗತ್ಯತೆಗಳನ್ನು ಈಡೇರಿಸಲು ಹಾಗೂ ರಾಜ್ಯವು ತನ್ನ ನ್ಯಾಯಬದ್ಧ ನೀರಿನ ಪಾಲನ್ನು ಬಳಸಿಕೊಳ್ಳಲು ಪ್ರಮುಖ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಯೋಜನೆಗಳಿಗೆ ಬಾಕಿ ಇರುವ ಅನುಮತಿಗಳನ್ನು ನೀಡಬೇಕು" ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ಮನವಿ ಮಾಡಿದರು.

ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಸಿ ಆರ್ ಪಾಟೀಲ್ ಅವರನ್ನು ಸೋಮವಾರ ಭೇಟಿ ಮಾಡಿದ ಶಿವಕುಮಾರ್ ರಾಜ್ಯದ ಯೋಜನೆಗಳ ಮನವಿಯನ್ನು ಸಲ್ಲಿಸಿದರು.

ಕೇಂದ್ರ ಜಲ ಆಯೋಗದಿಂದ ಮೇಕೆದಾಟು ಡಿಪಿಆರ್ ಗೆ ಅನುಮೋದನೆ ಹಾಗೂ ಅನುಮತಿ ಕೊಡಿಸಿ

"ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ ಕರ್ನಾಟಕ ಸರ್ಕಾರ ರೂ. 16,745 ಕೋಟಿ ಮೊತ್ತದ ವಿಸ್ತೃತ ಯೋಜನಾ ವಿವರ (ಡಿಪಿಆರ್) ಸಲ್ಲಿಸಿದೆ. ಆದಷ್ಟು ಬೇಗ ಈ ಡಿಪಿಆರ್ ಶೀಘ್ರ ಮೌಲ್ಯಮಾಪನ ಮಾಡಿ, ಮಂಜೂರಾತಿಗಾಗಿ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಜೊತೆ ನಿರಂತರ ಸಂಪರ್ಕದಲ್ಲಿದೆ. ಈ ಯೋಜನೆಗೆ ಯಾವುದೇ ರೀತಿಯ ಕಾನೂನು ಅಥವಾ ಇತರ ಅಡೆತಡೆಗಳಿಲ್ಲ. ಹೀಗಾಗಿ ಆದ್ಯತೆ ಮೇರೆಗೆ ಡಿಪಿಆರ್ ಪರಿಶೀಲಿಸಿ, ಮಂಜೂರಾತಿ ನೀಡಬೇಕು ಎಂದು ಆಯೋಗಕ್ಕೆ ನಿರ್ದೇಶನ ನೀಡಬೇಕು" ಎಂದು ವಿನಂತಿಸಿದ್ದಾರೆ.

"ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II ತೀರ್ಪಿನ ಮೇಲೆ ಅಧಿಸೂಚನೆ ಬಾಕಿ ಇದೆ. ಇದರಿಂದಾಗಿ ರಾಜ್ಯದ ನೀರಾವರಿ ಯೋಜನೆಗಳ ಮೇಲೆ ಪರಿಣಾಮ ಬೀರಿದೆ. ಈ ಅಧಿಸೂಚನೆ ಸಂಬಂಧಿಸಿದ ವಿಷಯವು ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ಪರಿಶೀಲನೆಯಲ್ಲಿದೆ ಎಂದು ನಿಮ್ಮ ಪತ್ರದಲ್ಲಿ ತಿಳಿಸಲಾಗಿದ್ದು, ಮಾನ್ಯ ಉಚ್ಛ ನ್ಯಾಯಾಲಯವು 4 ನವೆಂಬರ್ 2026 ರಂದು ಬಾಕಿ ಇರುವ ಸಿವಿಲ್ ಮೇಲ್ಮನವಿಗಳನ್ನು ಕೈಗೆತ್ತಿಕೊಳ್ಳಲಿದೆ. ಹೀಗಾಗಿ ಜಲಶಕ್ತಿ ಸಚಿವಾಲಯವು ನ್ಯಾಯಾಲಯದ ಮುಂದೆ ತುರ್ತು ಅಧಿಸೂಚನೆ ಹೊರಡಿಸುವ ಬಗ್ಗೆ ಮಧ್ಯಂತರ ಅರ್ಜಿ ಸಲ್ಲಿಸಬೇಕು. ಅಧಿಸೂಚನೆ ಹೊರಡಿಸುವುದರಿಂದ ಕರ್ನಾಟಕ ರಾಜ್ಯವು ತನಗೆ ಹಂಚಿಕೆಯಾದ ನೀರಿನ ಪಾಲನ್ನು ಬಳಸಿಕೊಳ್ಳಲು ಮತ್ತು ಸಂಬಂಧಿತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ" ಎಂದು ಮನವಿ ಮಾಡಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆ ಪಿಎಂಕೆಎಸ್ ವೈ ಅಡಿಯಲ್ಲಿ ಸೇರಿಸಿ, ಘೋಷಿಸಿರುವ ಅನುದಾನ ಒದಗಿಸಿ

"ದಿನಾಂಕ 20.03.2026 ರಂದು ನಡೆದ ಜಲಶಕ್ತಿ ಸಚಿವಾಲಯದ ಸಲಹಾ ಸಮಿತಿ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 21,167.93 ಕೋಟಿ ವೆಚ್ಚದ ಪರಿಷ್ಕೃತ ಅಂದಾಜು ವೆಚ್ಚದ ಪ್ರಸ್ತಾಪವನ್ನು ಪರಿಶೀಲನೆ ಮಾಡಿದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಪಿಎಂಕೆಎಸ್ ವೈ (PMKSY) ಅಡಿಯಲ್ಲಿ ಸೇರಿಸಲು 16 ನೇ ಹಣಕಾಸು ಆಯೋಗಕ್ಕೆ ಶಿಫಾರಸು ಮಾಡಬೇಕು. ಜತೆಗೆ 2023-24 ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ ಅನುದಾನವನ್ನು ಆದಷ್ಟು ಬೇಗ ಒದಗಿಸಲು ಮಧ್ಯಸ್ಥಿಕೆ ವಹಿಸಿ" ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ನದಿ ಜೋಡಣೆ; ಬೇರೆ ರಾಜ್ಯಗಳ ಪಾಲನ್ನು ಹೋಲಿಕೆ ಮಾಡಿ, ನಮ್ಮ ರಾಜ್ಯಕ್ಕೆ ಸಮಪಾಲು ನೀಡಲು ನಿರ್ದೇಶಿಸಿ

"ರಾಜ್ಯ ಸರ್ಕಾರವು ಪಿಎಂಕೆಎಸ್‌ವೈ ಮತ್ತು ಪ್ರವಾಹ ನಿರ್ವಹಣೆ ಹಾಗೂ ಗಡಿ ಪ್ರದೇಶಗಳ ಯೋಜನೆ (FMBAP) ಅಡಿಯಲ್ಲಿ ನೀರಾವರಿ ಅಭಿವೃದ್ಧಿ, ಆಧುನೀಕರಣ, ಪ್ರವಾಹ ತಡೆ ಮತ್ತು ಸಂಬಂಧಿತ ಜಲ ನಿರ್ವಹಣೆ ಒಳಗೊಂಡ ವಿವಿಧ ಯೋಜನೆಗಳ ಪ್ರಸ್ತಾವನೆಗಳನ್ನು ಸಲ್ಲಿಸಿದೆ. ರಾಜ್ಯದಲ್ಲಿ ನೀರಾವರಿ ದಕ್ಷತೆ ಸುಧಾರಿಸಿ, ನೀರಾವರಿ ಸಾಮರ್ಥ್ಯ ಹೆಚ್ಚಿಸಲು, ಪ್ರವಾಹ ಬಾಧಿತ ಪ್ರದೇಶಗಳನ್ನು ರಕ್ಷಿಸಲು ಮತ್ತು ರಾಜ್ಯದಲ್ಲಿ ಜಲ ಮೂಲಸೌಕರ್ಯವನ್ನು ಬಲಪಡಿಸಲು ಈ ಪ್ರಸ್ತಾವನೆಗಳು ಪ್ರಮುಖವಾಗಿವೆ. ಈ ಪ್ರಸ್ತಾವನೆಗಳಿಗೆ ಆದಷ್ಟುಬೇಗ ಪರಿಶೀಲನೆ ಮಾಡಿ ಅಗತ್ಯ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗದ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಬೇಕು" ಎಂದು ಕೋರಲಾಗಿದೆ.

"ಕರ್ನಾಟಕ ಸರ್ಕಾರವು ದಿನಾಂಕ: 03.09.2026 ರ ಪತ್ರದ ಮೂಲಕ ಗೋದಾವರಿ-ಕಾವೇರಿ ಜೋಡಣೆ ಮತ್ತು ಬೇಡ್ತಿ-ವರದಾ (ಹಿರೆವಡ್ಡಟ್ಟಿ) ಜೋಡಣೆ ಯೋಜನೆಗೆ ಒಪ್ಪಂದದ ಜ್ಞಾಪಕ ಪತ್ರಕ್ಕೆ (MoA) ಸಹಿ ಹಾಕಲು ಎನ್‌ಡಬ್ಲ್ಯೂಡಿಎಗೆ (NWDA) "ತಾತ್ವಿಕ ಒಪ್ಪಿಗೆ" ನೀಡಿದೆ. ಫಲಾನುಭವಿ ರಾಜ್ಯಗಳಿಗೆ ಪ್ರಸ್ತಾಪಿಸಲಾದ ಹಂಚಿಕೆ ಜತೆಗೆ ಹೋಲಿಸಿ ರಾಜ್ಯದ ಪಾಲನ್ನು ಮರುಪರಿಶೀಲಿಸಬೇಕು. ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ರಾಜ್ಯದ ನ್ಯಾಯಬದ್ಧ ಅಗತ್ಯತೆಗಳು ಮತ್ತು ಹಿತಾಸಕ್ತಿಗಳನ್ನು ಪರಿಗಣಿಸಿ ಇತರ ಫಲಾನುಭವಿ ರಾಜ್ಯಗಳಿಗೆ ಸಮಾನವಾಗಿ ಕರ್ನಾಟಕಕ್ಕೂ ಸಮಾನವಾದ ನೀರಿನ ಹಂಚಿಕೆ ಮಾಡುವಂತೆ ಎನ್‌ಡಬ್ಲ್ಯೂಡಿಎಗೆ ನಿರ್ದೇಶನ ನೀಡಿ" ಎಂದು ಮನವಿ ಮಾಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja