Dailyhunt
DONALD TRUMP : ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ : ಇರಾನ್ ಜೊತೆಯೇ ಜಂಟಿ ಉದ್ಯಮದ ಪ್ಲಾನ್ ಹಾಕಿದ ಟ್ರಂಪ್!

DONALD TRUMP : ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ : ಇರಾನ್ ಜೊತೆಯೇ ಜಂಟಿ ಉದ್ಯಮದ ಪ್ಲಾನ್ ಹಾಕಿದ ಟ್ರಂಪ್!

Navasamaja.com 1 week ago

ವಾಷಿಂಗ್ಟನ್: ಕಳೆದ ಕೆಲವು ದಿನಗಳಿಂದ ಯುದ್ಧದ ಭೀತಿಯಲ್ಲಿದ್ದ ಮಧ್ಯ ಪ್ರಾಚ್ಯ ದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಲಾಭದಾಯಕವಾಗಿ ಬಳಸಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೊಸ ಪ್ರಸ್ತಾಪವನ್ನಿಟ್ಟಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯಲ್ಲಿ ಜಂಟಿ ಸುಂಕ ವಸೂಲಿ ಮಾಡುವ ಕುರಿತು ಮಹತ್ವದ ಸುಳಿವು ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಇರಾನ್ ಸುಂಕ ವಿಧಿಸುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಇದನ್ನು ಇರಾನ್ ಜೊತೆಗಿನ 'ಜಂಟಿ ಉದ್ಯಮ' (Joint Venture)ವಾಗಿ ಮಾಡುವ ಆಲೋಚನೆ ಇದೆ ಎಂದು ತಿಳಿಸಿದ್ದಾರೆ. ಈ ನಿರ್ಧಾರವು ಹಾರ್ಮುಜ್ ಜಲಸಂಧಿಯ ಸುರಕ್ಷತೆಯನ್ನು ಕಾಪಾಡಲು ಮತ್ತು ಇತರ ಬಾಹ್ಯ ಶಕ್ತಿಗಳಿಂದ ಈ ಪ್ರದೇಶವನ್ನು ರಕ್ಷಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.

ಈ ಯೋಜನೆಯನ್ನು 'ಒಂದು ಸುಂದರವಾದ ವಿಷಯ' ಎಂದು ಬಣ್ಣಿಸಿರುವ ಟ್ರಂಪ್, ಈ ಮೂಲಕ ಜಾಗತಿಕವಾಗಿ ಅತಿ ಹೆಚ್ಚು ತೈಲ ರಫ್ತಾಗುವ ಈ ಪ್ರಮುಖ ಜಲಮಾರ್ಗದ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕ ಮುಂದಾಗಿದೆ ಎಂಬ ಸುಳಿವು ನೀಡಿದ್ದಾರೆ. ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಇತ್ತೀಚಿನ ಕದನ ವಿರಾಮ ಒಪ್ಪಂದದ ನಂತರ ಈ ಬೆಳವಣಿಗೆ ನಡೆದಿರುವುದು ಜಾಗತಿಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ ಟೋಲ್ (ಸುಂಕ) ವಸೂಲಿ ಮಾಡುವ ವಿಚಾರದಲ್ಲಿ ಇರಾನ್‌ನೊಂದಿಗೆ ಜಂಟಿ ಉದ್ಯಮ ಆರಂಭಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾವು ಇದನ್ನು ಜಂಟಿ ಉದ್ಯಮವಾಗಿ ಮಾಡುವ ಬಗ್ಗೆ ಯೋಚಿಸುತ್ತಿದ್ದೇವೆ. ಇದು ಮಾರ್ಗವನ್ನು ಸುರಕ್ಷಿತವಾಗಿರಿಸುವ ಮತ್ತು ಇತರರಿಂದ ರಕ್ಷಿಸುವ ಒಂದು ಸುಂದರವಾದ ಮಾರ್ಗವಾಗಿದೆ, ಎಂದು ಅವರು ಬಣ್ಣಿಸಿದ್ದಾರೆ.

ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಎರಡು ವಾರಗಳ ಕಾಲ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಗೆ ದೊರೆತ ಬೆನ್ನಲ್ಲೇ, ಬುಧವಾರದಂದು ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಇರಾನ್ ಟೋಲ್ ವಿಧಿಸುವುದನ್ನು ನೀವು ಅನುಮೋದಿಸುತ್ತೀರಾ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಟ್ರಂಪ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕೂ ಮುನ್ನ ಮಂಗಳವಾರದಂದು ಮಾತನಾಡಿದ್ದ ಟ್ರಂಪ್, ಆಯಕಟ್ಟಿನ ಜಲಮಾರ್ಗಗಳಲ್ಲಿ ಸಂಚರಿಸುವ ಹಡಗುಗಳ ಮೇಲೆ ಅಮೆರಿಕ ಕೂಡ ಸುಂಕ ವಿಧಿಸುವ ಬಗ್ಗೆ ಆಲೋಚಿಸುತ್ತಿದೆ ಎಂದು ತಿಳಿಸಿದ್ದರು.

ಇರಾನ್‌ನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮತ್ತು ಸುರಕ್ಷಿತವಾಗಿ ತೆರೆಯಬೇಕೆಂಬ ಷರತ್ತಿನ ಮೇಲೆ ಈ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಪೂರೈಕೆಯ ಶೇ. 20ರಷ್ಟು ಭಾಗವನ್ನು ನಿಯಂತ್ರಿಸುತ್ತದೆ. ಈ ಮಾರ್ಗದಲ್ಲಿ ಟೋಲ್ ಸಂಗ್ರಹ ಮಾಡುವುದರಿಂದ ಅಮೆರಿಕಕ್ಕೆ ದಿನಕ್ಕೆ ಸುಮಾರು 240 ಮಿಲಿಯನ್ ಡಾಲರ್ ಆದಾಯ ಬರಬಹುದು ಎಂದು ಅಂದಾಜಿಸಲಾಗಿದೆ. ಇರಾನ್ ಕೂಡ ಇತ್ತೀಚೆಗೆ ಈ ಮಾರ್ಗದಲ್ಲಿ ಸಾಗುವ ಹಡಗುಗಳಿಂದ ಸುಂಕ ವಸೂಲಿ ಮಾಡುವ ಇಚ್ಛೆ ವ್ಯಕ್ತಪಡಿಸಿತ್ತು. ಟ್ರಂಪ್ ಅವರ ಈ ಬಿಸಿನೆಸ್ ಮೈಂಡೆಡ್ ಪ್ರಸ್ತಾಪವು ಜಾಗತಿಕ ವಾಣಿಜ್ಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕದನ ವಿರಾಮವು ಕೇವಲ ಎರಡು ವಾರಗಳವರೆಗೆ ಮಾತ್ರ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಶಾಶ್ವತ ಶಾಂತಿ ಒಪ್ಪಂದದ ಬಗ್ಗೆ ಚರ್ಚೆಗಳು ನಡೆಯಲಿವೆ. ಚೀನಾ ಕೂಡ ಈ ಸಂಘರ್ಷವನ್ನು ರಾಜಕೀಯವಾಗಿ ಬಗೆಹರಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಸಂವಹನ ನಡೆಸಲು ಸಹಾಯ ಮಾಡಿದೆ ಎಂದು ಟ್ರಂಪ್ ದೃಢಪಡಿಸಿದ್ದಾರೆ.

ಯುದ್ಧದ ಅಂಚಿನಲ್ಲಿದ್ದ ಎರಡು ರಾಷ್ಟ್ರಗಳ ನಡುವೆ ಈಗ ಆರ್ಥಿಕ ಸಹಭಾಗಿತ್ವದ ಮಾತುಕತೆ ಶುರುವಾಗಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja