Dailyhunt Logo
  • Light mode
    Follow system
    Dark mode
    • Play Story
    • App Story
DRUGS : ಡ್ರಗ್ಸ್ ಮಾರಾಟ ಶಂಕೆ; ಶಾಲಾ-ಕಾಲೇಜುಗಳ ಬಳಿ ಪೊಲೀಸರ ಮಿಂಚಿನ ಮುಫ್ತಿ ಕಾರ್ಯಾಚರಣೆ

DRUGS : ಡ್ರಗ್ಸ್ ಮಾರಾಟ ಶಂಕೆ; ಶಾಲಾ-ಕಾಲೇಜುಗಳ ಬಳಿ ಪೊಲೀಸರ ಮಿಂಚಿನ ಮುಫ್ತಿ ಕಾರ್ಯಾಚರಣೆ

Navasamaja.com 3 weeks ago

ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru ) ಶಾಲಾ-ಕಾಲೇಜುಗಳ ಬಳಿ ಮಾದಕ ವಸ್ತು (Drugs) ಮಾರಾಟ ನಡೆಯುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಉತ್ತರ ವಿಭಾಗದ ಪೊಲೀಸರು ಶನಿವಾರ ಬೃಹತ್ ಮುಫ್ತಿ ಕಾರ್ಯಾಚರಣೆ ನಡೆಸಿದ್ದಾರೆ.

ಒಟ್ಟು 132 ಶಾಲಾ-ಕಾಲೇಜುಗಳ ಬಳಿ ಈ ಹಠಾತ್ ತಪಾಸಣೆ ನಡೆಸಲಾಗಿದ್ದು, ದಾಳಿ ವೇಳೆ ಯಾವುದೇ ಡ್ರಗ್ಸ್ ಅಥವಾ ಡ್ರಗ್ ಪೆಡ್ಲರ್‌ಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಶಾಲಾ-ಕಾಲೇಜು ಆವರಣದ ಸುತ್ತಮುತ್ತ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳ ಮಾರಾಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ನಿರಂತರ ದೂರುಗಳು ಕೇಳಿಬರುತ್ತಿದ್ದವು. ಈ ದೂರುಗಳನ್ನಾಧರಿಸಿ ಉತ್ತರ ವಿಭಾಗದ 13 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ವಿಶೇಷ ಶೋಧ ಕಾರ್ಯವನ್ನು ಕೈಗೊಳ್ಳಲಾಗಿತ್ತು.

ಈ ವಿಶೇಷ ಕಾರ್ಯಾಚರಣೆಯಲ್ಲಿ ಪೊಲೀಸರು 80 ಶಾಲೆಗಳು ಹಾಗೂ ಪಿಯುಸಿ ಮತ್ತು ಪದವಿ ಸೇರಿದಂತೆ 52 ಕಾಲೇಜುಗಳ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ಹಠಾತ್ ದಾಳಿಯಿಂದಾಗಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಕಿಡಿಗೇಡಿಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಪೊಲೀಸರ ಈ ಹೆಜ್ಜೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಯಾವುದೇ ಅಕ್ರಮ ವಸ್ತುಗಳು ಸಿಗದಿದ್ದರೂ, ಕಿಡಿಗೇಡಿಗಳಲ್ಲಿ ಭಯ ಹುಟ್ಟಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಸೇವನೆ ಮತ್ತು ಮಾರಾಟದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಈ ದಾಳಿಯ ಮುಖ್ಯ ಉದ್ದೇಶವಾಗಿತ್ತು ಎಂದು ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮೇಗೌಡ ಅವರು ಮಾಹಿತಿ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja