Dailyhunt Logo
  • Light mode
    Follow system
    Dark mode
    • Play Story
    • App Story
EBOLA: ಕಾಂಗೋದಲ್ಲಿ ಎಬೋಲಾ ಭೀತಿ - ಶವ ಸಂಸ್ಕಾರದ ತಂಡದ ಮೇಲೆ ಸ್ಥಳೀಯರ ದಾಳಿ, 11 ರೋಗಿಗಳು ಪರಾರಿ!

EBOLA: ಕಾಂಗೋದಲ್ಲಿ ಎಬೋಲಾ ಭೀತಿ - ಶವ ಸಂಸ್ಕಾರದ ತಂಡದ ಮೇಲೆ ಸ್ಥಳೀಯರ ದಾಳಿ, 11 ರೋಗಿಗಳು ಪರಾರಿ!

Navasamaja.com 2 days ago

ಕಾಂಗೋ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (Congo) ಎಬೋಲಾ ವೈರಸ್ (Ebola Virus) ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಕೈಮೀರುತ್ತಿದೆ. ಇತ್ತೀಚೆಗೆ ಕಾಂಗೋದ ದಕ್ಷಿಣ ಕಿವು ಪ್ರಾಂತ್ಯದ ಕಟಾನಾ ಎಂಬ ಪಟ್ಟಣದಲ್ಲಿ ಎಬೋಲಾದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ (Bury) ಮಾಡಲು ಹೋದ ಆರೋಗ್ಯ ಕಾರ್ಯಕರ್ತರ ತಂಡದ ಮೇಲೆ ಸ್ಥಳೀಯರು ಭೀಕರ ದಾಳಿ ನಡೆಸಿದ್ದಾರೆ.

ದಾಳಿಯಿಂದ ಹೆದರಿದ ಸಿಬ್ಬಂದಿ ಶವದ ಪೆಟ್ಟಿಗೆಯನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದಾರೆ. ಆ ಬಳಿಕ ಸ್ಥಳೀಯರೇ ನೇರವಾಗಿ ಮೃತದೇಹದ ವಿಧಿವಿಧಾನಗಳನ್ನು ನೆರವೇರಿಸಿದ್ದು, ಇದರಿಂದ ರೋಗವು ಮತ್ತಷ್ಟು ಜನರಿಗೆ ಹರಡುವ ದೊಡ್ಡ ಆತಂಕ ಎದುರಾಗಿದೆ.

ಮತ್ತೊಂದೆಡೆ, ಈ ಕಾಯಿಲೆಯ ಕೇಂದ್ರಬಿಂದುವಾಗಿರುವ ಇಟುರಿ ಪ್ರಾಂತ್ಯದ ಐಸೊಲೇಶನ್ ಕೇಂದ್ರಗಳಿಂದ 11 ಎಬೋಲಾ ರೋಗಿಗಳು ಅಧಿಕಾರಿಗಳ ಕಣ್ಣು ತಪ್ಪಿಸಿ ಓಡಿಹೋಗಿದ್ದಾರೆ. ಈ ಭಾಗದಲ್ಲಿ ಸಶಸ್ತ್ರ ಗುಂಪುಗಳ ಹಾವಳಿ ಹೆಚ್ಚಿರುವುದರಿಂದ ರಕ್ಷಣಾ ಸಿಬ್ಬಂದಿ ಮತ್ತು ವೈದ್ಯರಿಗೆ ರೋಗಿಗಳ ಪತ್ತೆ ಕಾರ್ಯ ಹಾಗೂ ಚಿಕಿತ್ಸೆ ನೀಡುವುದು ಭಾರಿ ಸವಾಲಾಗಿ ಪರಿಣಮಿಸಿದೆ. ಅಲ್ಲಿನ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಕಾಂಗೋದಲ್ಲಿ ಇದುವರೆಗೆ 363 ಜನರಿಗೆ ಎಬೋಲಾ ಸೋಂಕು ತಗುಲಿದ್ದು, 62 ಜನರು ಜೀವ ಕಳೆದುಕೊಂಡಿದ್ದಾರೆ. ಸದ್ಯ 4,200ಕ್ಕೂ ಹೆಚ್ಚು ಜನರನ್ನು ನಿಗಾದಲ್ಲಿ ಇಡಲಾಗಿದೆಯಾದರೂ, ಸೂಕ್ತ ಸಂಪರ್ಕ ಸಿಗದೆ ಅರ್ಧದಷ್ಟು ಜನರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸ್ಥಳೀಯ ಜನರ ಅಸಹಕಾರ ಮತ್ತು ಆರೋಗ್ಯ ಸಿಬ್ಬಂದಿಯ ಮೇಲಿನ ದಾಳಿಗಳೇ ಈ ರೋಗ ನಿಯಂತ್ರಣಕ್ಕೆ ಮುಖ್ಯ ಅಡ್ಡಿಯಾಗಿವೆ.

ಈ ಎಬೋಲಾ ಸಾಂಕ್ರಾಮಿಕ ರೋಗವು ಈಗ ಕಾಂಗೋದ ಗಡಿ ದಾಟಿ ನೆರೆಹೊರೆಯ ದೇಶಗಳಿಗೂ ವ್ಯಾಪಿಸುತ್ತಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಉಗಾಂಡಾದಲ್ಲಿ 15 ಎಬೋಲಾ ಪ್ರಕರಣಗಳು ವರದಿಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ, ಸೋಂಕಿತ ಪ್ರವಾಸಿಯೊಬ್ಬರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಉಗಾಂಡಾ ದೇಶಗಳಿಗೆ ಭೇಟಿ ನೀಡಿರುವುದು ಬೆಳಕಿಗೆ ಬಂದಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ಈ ಬಗ್ಗೆ ತೀವ್ರ ತನಿಖೆ ನಡೆಸುತ್ತಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ನೆರೆ ದೇಶಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾದ ಟೆಡ್ರೊಸ್ ಅಧಾನೊಮ್ ಅವರು ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಈ ಬಿಕ್ಕಟ್ಟನ್ನು ಎದುರಿಸಲು ಕೇವಲ ವೈದ್ಯಕೀಯ ಚಿಕಿತ್ಸೆ ಸಾಲದು, ಸ್ಥಳೀಯರ ನಾಯಕತ್ವ ಮತ್ತು ಪರಸ್ಪರ ನಂಬಿಕೆ ತೀರಾ ಅಗತ್ಯ ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja