Dailyhunt
ELECTION: ಯಾರಾಗಲಿದ್ದಾರೆ ತಮಿಳುನಾಡಿನ ಹೊಸ ತಲೈವಾ, ಸಮೀಕ್ಷೆ ಕೊಟ್ಟ ಉತ್ತರ ಇದು..

ELECTION: ಯಾರಾಗಲಿದ್ದಾರೆ ತಮಿಳುನಾಡಿನ ಹೊಸ ತಲೈವಾ, ಸಮೀಕ್ಷೆ ಕೊಟ್ಟ ಉತ್ತರ ಇದು..

Navasamaja.com 2 weeks ago

ಚೆನ್ನೈ: 2026ರ ತಮಿಳುನಾಡು ವಿಧಾನಸಭಾ ಚುನಾವಣೆ (Tamilnadu Election) ರಂಗೇರಿದೆ. ಆಡಳಿತಾರೂಢ ಡಿಎಂಕೆ (DMK), ಪ್ರತಿಪಕ್ಷ ಎಐಎಡಿಎಂಕೆ, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ದಳಪತಿ ವಿಜಯ್ ಅವರ ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ನಡುವಿನ ಜಿದ್ದಾ ಜಿದ್ದಿ ಪೈಪೋಟಿ ಏರ್ಪಟ್ಟಿದೆ.

ಈ ಗುದ್ದಾಟದಲ್ಲಿ ಯಾರು ಗೆಲ್ಲಬಹುದು ಅನ್ನೋ ಭವಿಷ್ಯವನ್ನು ಸಮೀಕ್ಷೆಗಳು ಹೊರ ಹಾಕಿವೆ.

ಡಿಎಂಕೆಗೆ ಮುನ್ನಡೆ
ಸಮೀಕ್ಷೆಗಳ ಪ್ರಕಾರ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟವು ಸದ್ಯಕ್ಕೆ ಮುನ್ನಡೆಯಲ್ಲಿದೆ. ಸರ್ಕಾರದ ಜನಪ್ರಿಯ ಯೋಜನೆಗಳು ಮತ್ತು ಬಲವಾದ ಮೈತ್ರಿಕೂಟವು ಡಿಎಂಕೆಗೆ ಪ್ಲಸ್ ಪಾಯಿಂಟ್ ಆಗಿದೆ. ಆದರೆ, ಆಡಳಿತ ವಿರೋಧಿ ಅಲೆ ಮತ್ತು ಭ್ರಷ್ಟಾಚಾರದ ಆರೋಪಗಳು ಚುನಾವಣಾ ಸಮಯದಲ್ಲಿ ಸವಾಲಾಗಬಹುದು ಎಂದು ಸಮೀಕ್ಷೆ ಎಚ್ಚರಿಸಿದೆ.

ನಟ ವಿಜಯ್ ಅವರ ರಾಜಕೀಯ ಪ್ರವೇಶವು ತಮಿಳುನಾಡು ರಾಜಕಾರಣದ ಸಮೀಕರಣವನ್ನೇ ಬದಲಿಸಿದೆ. ಸಮೀಕ್ಷೆಯ ಪ್ರಕಾರ, ಟಿವಿಕೆ ಪಕ್ಷವು ಯುವ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ವಿಜಯ್ ಅವರ ಪಕ್ಷವು ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳ ಮತ ಬ್ಯಾಂಕ್‌ಗೆ ಕನ್ನ ಹಾಕುವ ಸಾಧ್ಯತೆಯಿದೆ. ವಿಶೇಷವಾಗಿ ತಟಸ್ಥ ಮತದಾರರು ವಿಜಯ್ ಅವರತ್ತ ಒಲವು ತೋರುತ್ತಿರುವುದು ಸಾಂಪ್ರದಾಯಿಕ ಪಕ್ಷಗಳಿಗೆ ಆತಂಕ ತಂದಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ. ಅಣ್ಣಾಮಲೈ ಅವರ ನೇತೃತ್ವದಲ್ಲಿ ಬಿಜೆಪಿ ಮತ ಪ್ರಮಾಣ ಹೆಚ್ಚಿಸಿಕೊಳ್ಳುವ ಲಕ್ಷಣಗಳಿವೆ. ಇನ್ನೊಂದೆಡೆ, ಎಐಎಡಿಎಂಕೆ ತನ್ನ ಹಳೆಯ ವೈಭವವನ್ನು ಮರಳಿ ಪಡೆಯಲು ಹೋರಾಡುತ್ತಿದ್ದು, ಮೈತ್ರಿಕೂಟಗಳ ಬದಲಾವಣೆಯು ಅದರ ಭವಿಷ್ಯವನ್ನು ನಿರ್ಧರಿಸಲಿದೆ.

ಲೋಕ್ ಪೋಲ್ (Lok Poll) ಸಮೀಕ್ಷೆ

ಲೋಕ್ ಪೋಲ್ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಮೈತ್ರಿಕೂಟವು ಒಟ್ಟು 234 ಕ್ಷೇತ್ರಗಳ ಪೈಕಿ 181 ರಿಂದ 189 ಸ್ಥಾನಗಳನ್ನು ಗೆಲ್ಲುವ ಮೂಲಕ ಶೇಕಡಾ 40.1 ರಷ್ಟು ಮತಗಳನ್ನು ಪಡೆಯಲಿದೆಯಂತೆ.

ಎಐಎಡಿಎಂಕೆ ನೇತೃತ್ವದ ಎನ್‌ಡಿಎ: 38 ರಿಂದ 42 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದು, ಶೇಕಡಾ 29 ರಷ್ಟು ಮತಗಳನ್ನು ಪಡೆಯಬಹುದು.

ವಿಜಯ್ ಅವರ ಟಿವಿ ಕೆ (TVK): ರಾಜಕೀಯಕ್ಕೆ ಪದಾರ್ಪಣೆ ಮಾಡುತ್ತಿರುವ ನಟ ವಿಜಯ್ ಅವರ ಪಕ್ಷವು ಶೇಕಡಾ 23.9 ರಷ್ಟು ಮತ ಹಂಚಿಕೆಯೊಂದಿಗೆ 8 ರಿಂದ 10 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ಎನ್-ಟಿ-ಕೆ (NTK) ಶೇಕಡಾ. 4.9 ಮತ್ತು ಇತರ ಪಕ್ಷಗಳು ಶೇಕಡಾ. 2.1 ರಷ್ಟು ಮತಗಳನ್ನು ಪಡೆಯಲಿದ್ದು, ಯಾವುದೇ ದೊಡ್ಡ ಪ್ರಭಾವ ಬೀರಲಾರವು ಅಂತಾ ಸಮೀಕ್ಷೆ ಹೇಳಿದೆ,

ಕಲೈಜ್ಞರ್ ಮಗಳೀರ್ ಉರಿಮೈ ತೊಗೈ (ಮಹಿಳಾ ಮಾಸಿಕ ನೆರವು), ಉಚಿತ ಬಸ್ ಪ್ರಯಾಣ ಮತ್ತು ಉಪಹಾರ ಯೋಜನೆಯಂತಹ ಬಲವಾದ ಕಲ್ಯಾಣ ಯೋಜನೆಗಳು ಡಿಎಂಕೆಗೆ ವರದಾನವಾಗಿವೆ. ವಿಶೇಷವಾಗಿ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳ ಮಹಿಳೆಯರು ಡಿಎಂಕೆ ಪರ ಒಲವು ಹೊಂದಿದ್ದಾರೆ," ಎಂದು ಲೋಕ್ ಪೋಲ್ ವಿಶ್ಲೇಷಿಸಿದೆ. ವಿರೋಧ ಪಕ್ಷಗಳ ಮತಗಳು ಎನ್‌ಡಿಎ ಮತ್ತು ಟಿವಿ ಕೆ ನಡುವೆ ವಿಭಜನೆಯಾಗುತ್ತಿರುವುದು ಡಿಎಂಕೆಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja