Dailyhunt Logo
  • Light mode
    Follow system
    Dark mode
    • Play Story
    • App Story
ETHANOL : ಇ20 ಎಥನಾಲ್ ಮಿಶ್ರಣದ ಕುರಿತ ಸುಳ್ಳು ಸುದ್ದಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ: ಕಾರು, ಬೈಕ್ ಸವಾರರು ಆತಂಕ ಪಡುವ ಅಗತ್ಯವಿಲ್ಲ!

ETHANOL : ಇ20 ಎಥನಾಲ್ ಮಿಶ್ರಣದ ಕುರಿತ ಸುಳ್ಳು ಸುದ್ದಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ: ಕಾರು, ಬೈಕ್ ಸವಾರರು ಆತಂಕ ಪಡುವ ಅಗತ್ಯವಿಲ್ಲ!

Navasamaja.com 6 days ago

ವದೆಹಲಿ: ಭಾರತ ಸರ್ಕಾರದ (Central Govt) ಮಹತ್ವಾಕಾಂಕ್ಷೆಯ 'ಇ20' (ಶೇಕಡಾ 20 ರಷ್ಟು ಎಥನಾಲ್ (Ethanol) ಮಿಶ್ರಿತ) ಪೆಟ್ರೋಲ್ ಕಾರ್ಯಕ್ರಮದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ಹಾಗೂ ಅಪಪ್ರಚಾರಗಳಿಗೆ ಕೇಂದ್ರ ಪೆಟ್ರೋಲಿಯಂ (petroleum) ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಅಧಿಕೃತವಾಗಿ ತೆರೆ ಎಳೆದಿದೆ.

ವಾಹನಗಳ ಇಂಜಿನ್ ಹಾಳಾಗುವುದು, ಮೈಲೇಜ್ ಕಡಿಮೆಯಾಗುವುದು ಸೇರಿದಂತೆ ಹರಡುತ್ತಿರುವ ಹತ್ತಾರು ವದಂತಿಗಳಿಗೆ ವೈಜ್ಞಾನಿಕ ಪುರಾವೆಗಳೊಂದಿಗೆ ಸರ್ಕಾರವು ವಿವರವಾದ ಸ್ಪಷ್ಟನೆ ನೀಡಿದೆ.

ಇ20 ಪೆಟ್ರೋಲ್ ಬಳಕೆಯು ಯಾವುದೇ ಪ್ರಾಯೋಗಿಕ ಕ್ರಮವಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವಾಲಯವು, ಅಮೆರಿಕ, ಬ್ರೆಜಿಲ್, ಕೆನಡಾ ಮತ್ತು ಜಪಾನ್ನಂತಹ ಮುಂದುವರಿದ ದೇಶಗಳಲ್ಲಿ ದಶಕಗಳಿಂದಲೂ ಇಂತಹ ಇಂಧನ ಬಳಕೆಯಲ್ಲಿದೆ ಎಂದು ತಿಳಿಸಿದೆ. ಭಾರತದಲ್ಲೂ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳು ಸಾವಿರಾರು ಕಿಲೋಮೀಟರ್ಗಳವರೆಗೆ ವಾಹನಗಳನ್ನು ಚಲಾಯಿಸಿ ಪರೀಕ್ಷೆ ನಡೆಸಿವೆ.

ಈ ಸಂಶೋಧನೆಗಳಲ್ಲಿ ವಾಹನಗಳ ದಕ್ಷತೆ ಅಥವಾ ಕಾರ್ಯಕ್ಷಮತೆಯ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರದಿರುವುದು ದೃಢಪಟ್ಟಿದೆ. ಮೈಲೇಜ್ನಲ್ಲಿ ಅತ್ಯಂತ ಸಣ್ಣ ಮಟ್ಟದ ಬದಲಾವಣೆಯಾಗಬಹುದೇ ಹೊರತು ಇಂಜಿನ್ ಸಾಮರ್ಥ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ಪ್ರಮುಖ ಆತಂಕವೆಂದರೆ ಇಂಜಿನ್ ತುಕ್ಕು ಹಿಡಿಯುವುದು ಅಥವಾ ಹಾಳಾಗುವುದು. ಆದರೆ, ಈ ಇಂಧನವು ವಾಹನದ ಲೋಹ ಹಾಗೂ ಪ್ಲಾಸ್ಟಿಕ್ ಭಾಗಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹಳೆಯ ವಾಹನಗಳಲ್ಲಿರುವ ಕೆಲವು ರಬ್ಬರ್ ಭಾಗಗಳನ್ನು ಮಾತ್ರ ಸ್ವಲ್ಪ ಬೇಗನೆ ಬದಲಾಯಿಸಬೇಕಾಗಬಹುದು. ಇದರೊಂದಿಗೆ, ಇ20 ಇಂಧನ ಬಳಸುವುದರಿಂದ ವಾಹನಗಳ ವಾರಂಟಿ ಅಥವಾ ಇನ್ಶೂರೆನ್ಸ್ (ವಿಮೆ) ರದ್ದಾಗುವುದಿಲ್ಲ ಎಂದು ವಾಹನ ತಯಾರಕರು ಮತ್ತು ವಿಮಾ ಕಂಪನಿಗಳು ಈಗಾಗಲೇ ಖಚಿತಪಡಿಸಿವೆ.

ಮತ್ತೊಂದು ವಿಚಿತ್ರ ವದಂತಿಯೆಂದರೆ, ಎಥನಾಲ್ನಲ್ಲಿ ಸಕ್ಕರೆ ಅಂಶ ಇರುವುದರಿಂದ ಇಂಜಿನ್ಗೆ ಇರುವೆ ಮತ್ತು ಜೇನುನೊಣಗಳು ಆಕರ್ಷಿತವಾಗುತ್ತವೆ ಎಂಬುದು. ಇದನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಸಚಿವಾಲಯವು, ಇಂಧನ ದರ್ಜೆಯ ಎಥನಾಲ್ ತಯಾರಿಕೆಯಲ್ಲಿ ಸಕ್ಕರೆಯ ಸಂಪೂರ್ಣ ಅಂಶವನ್ನು ತೆಗೆದುಹಾಕಲಾಗುತ್ತದೆ ಮತ್ತು ಕೀಟಗಳನ್ನು ವಿಕರ್ಷಿಸುವ ರಾಸಾಯನಿಕಗಳನ್ನು ಬಳಸಲಾಗುತ್ತದೆ ಎಂದು ಹೇಳಿದೆ. ಅಲ್ಲದೆ ಇದರಲ್ಲಿ ಪೆಟ್ರೋಲ್ ವಾಸನೆಯೇ ಪ್ರಧಾನವಾಗಿರುತ್ತದೆ. ಕಬ್ಬಿನ ರಸವನ್ನು ನೇರವಾಗಿ ಪೆಟ್ರೋಲ್ಗೆ ಮಿಶ್ರಣ ಮಾಡಲಾಗುತ್ತಿದೆ ಎಂದು ತೋರಿಸುವ ವೈರಲ್ ವೀಡಿಯೊಗಳು ಸಂಪೂರ್ಣವಾಗಿ ನಕಲಿ ಮತ್ತು ಸುಳ್ಳು ಎಂದು ಸರ್ಕಾರ ಎಚ್ಚರಿಸಿದೆ.

ಪರಿಸರ ಮತ್ತು ನೀರಿನ ಬಳಕೆಯ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೂ ಸರ್ಕಾರ ಉತ್ತರ ನೀಡಿದೆ. ಒಂದು ಲೀಟರ್ ಎಥನಾಲ್ ಉತ್ಪಾದನೆಗೆ ಹತ್ತು ಸಾವಿರ ಲೀಟರ್ ನೀರು ಬೇಕಾಗುತ್ತದೆ ಎಂಬುದು ಸುಳ್ಳು. ಎಥನಾಲ್ ತಯಾರಿಕೆಗೆ ದೇಶದ ಆಹಾರ ಭದ್ರತೆಗೆ ಬೇಕಾದ ಪ್ರಮಾಣವನ್ನು ಹೊರತುಪಡಿಸಿ ಉಳಿಯುವ ಹೆಚ್ಚುವರಿ ಅಕ್ಕಿ ಮತ್ತು ಜೋಳವನ್ನು ಮಾತ್ರ ಬಳಸಲಾಗುತ್ತಿದೆ. ಜೋಳಕ್ಕೆ ಹೆಚ್ಚಿನ ಬೆಂಬಲ ಬೆಲೆ ನೀಡುವ ಮೂಲಕ ಅದರ ಬೆಳೆ ಉತ್ತೇಜಿಸಲಾಗುತ್ತಿದೆ. ಇದು ಭತ್ತಕ್ಕಿಂತ ಕಡಿಮೆ ನೀರನ್ನು ಬಳಸುತ್ತದೆ. ಅಲ್ಲದೆ, ಎಥನಾಲ್ ಕಾರ್ಖಾನೆಗಳು ನೀರನ್ನು ಮರುಬಳಕೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿವೆ.

ಕಳೆದ 2013-14ರಲ್ಲಿ ಕೇವಲ ಶೇಕಡಾ 1.5 ರಷ್ಟಿದ್ದ ಎಥನಾಲ್ ಮಿಶ್ರಣದ ಪ್ರಮಾಣವು, ಇದೀಗ ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಶೇಕಡಾ 20 ರ ಗುರಿಯನ್ನು ತಲುಪಿದೆ. ಈ ಯೋಜನೆಯಿಂದಾಗಿ ದೇಶಕ್ಕೆ ಬರೋಬ್ಬರಿ 1.9 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಅಧಿಕ ವಿದೇಶಿ ವಿನಿಮಯ ಉಳಿತಾಯವಾಗಿದೆ. ಅಷ್ಟೇ ಅಲ್ಲದೆ, ದೇಶದ ರೈತರಿಗೆ 1.6 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಸಂದಾಯವಾಗಿದ್ದು, ಕಚ್ಚಾ ತೈಲ ಆಮದು ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಇದು ಪರಿಸರ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಹಾಗೂ ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ದೂಗಾಡುತ್ತಿದ್ದ ದೊಡ್ಡ ಆತಂಕಗಳಿಗೆ ಪೂರ್ಣವಿರಾಮ ಇಟ್ಟಿದೆ. ಮುಂಬರುವ ದಿನಗಳಲ್ಲಿ ದೇಶದ ಎಥನಾಲ್ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja