ಮುಜಾಫರ್‌ಪುರ: ಬಿಹಾರದ (Bihar) ಖಾಸಗಿ ಆಸ್ಪತ್ರೆಯೊಂದರಲ್ಲಿ (Private Hospital) ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Fire Mishap) ಕನಿಷ್ಠ ಮೂವರು ರೋಗಿಗಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮುಜಾಫರ್‌ಪುರ ಜಿಲ್ಲೆಯಲ್ಲಿರುವ ಪ್ರಸಿದ್ಧ 'ಪ್ರಸಾದ್ ಆಸ್ಪತ್ರೆ'ಯ ಐದನೇ ಮಹಡಿಯಲ್ಲಿರುವ ತುರ್ತು ನಿಗಾ ಘಟಕದಲ್ಲಿ (ICU) ಈ ದಾರುಣ ಘಟನೆ ಸಂಭವಿಸಿದೆ.
ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ. ಮುಂಜಾನೆ ಸುಮಾರು 3:55 ರ ಸುಮಾರಿಗೆ ಆಸ್ಪತ್ರೆಯ ಐಸಿಯುನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಅಗ್ನಿಶಾಮಕ ದಳಕ್ಕೆ ತುರ್ತು ಕರೆ ಮಾಡಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದರು. ಐಸಿಯುನಲ್ಲಿದ್ದ ಸುಮಾರು 20 ರೋಗಿಗಳನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದ್ದು, ಉಳಿದ ರೋಗಿಗಳನ್ನು ಚಿಕಿತ್ಸೆಗಾಗಿ ಹತ್ತಿರದ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಮುಜಾಫರ್‌ಪುರ ಅಗ್ನಿಶಾಮಕ ಇಲಾಖೆಯ ಅಧಿಕಾರಿ ರಾಮ್ ನಿವಾಸ್ ಪಾಂಡೆ ಅವರು, "ನಾವು ಐಸಿಯುನಿಂದ 15 ರಿಂದ 20 ರೋಗಿಗಳನ್ನು ರಕ್ಷಿಸಿದ್ದೇವೆ, ಆದರೆ ದುರದೃಷ್ಟವಶಾತ್ ಇವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದ ರೋಗಿಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಸದ್ಯಕ್ಕೆ ಅವರ ಆರೋಗ್ಯದ ಸ್ಥಿತಿಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ" ಎಂದು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮುಜಾಫರ್‌ಪುರ ಜಿಲ್ಲಾಧಿಕಾರಿ ಸುಬ್ರತ್ ಕುಮಾರ್ ಸೇನ್ ಅವರು, "ಅವಘಡದ ಸಮಯದಲ್ಲಿ ಐಸಿಯುನಲ್ಲಿ ಸುಮಾರು 13 ರೋಗಿಗಳು ಹಾಗೂ ಸಿಸಿಯು (CCU) ವಿಭಾಗದಲ್ಲಿ ಕೆಲವು ರೋಗಿಗಳಿದ್ದರು. ಸದ್ಯಕ್ಕೆ ಮೂವರು ಸಾವನ್ನಪ್ಪಿರುವುದು ಖಚಿತಪಟ್ಟಿದೆ. ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ. ದೆಹಲಿ ಹೋಟೆಲ್ ಬೆಂಕಿ ದುರಂತದ ಬೆನ್ನಲ್ಲೇ ಮತ್ತೊಂದು ಕರಾಳ ರಾತ್ರಿ ವಿಷಾದದ ಸಂಗತಿಯೆಂದರೆ, ದಕ್ಷಿಣ ದೆಹಲಿಯ ಮಾಳವೀಯ ನಗರದ ಹೋಟೆಲ್‌ವೊಂದರಲ್ಲಿ ಭೀಕರ ಅಗ್ನಿ ಅವಘಡ ನಡೆದು 21 ಜನರು ಸಜೀವ ದಹನವಾಗಿ, 26 ಜನರು ಗಂಭೀರವಾಗಿ ಗಾಯಗೊಂಡ ಕೇವಲ ಒಂದು ದಿನದ ಬೆನ್ನಲ್ಲೇ ಬಿಹಾರದ ಈ ಘಟನೆ ಸಂಭವಿಸಿದೆ. ದೆಹಲಿಯ ಹೌಜ್ ರಾಣಿ ಪ್ರದೇಶದಲ್ಲಿರುವ 'ಫ್ಲೋರಿಶ್ ಸ್ಟೇ' ಎಂಬ ಬೆಡ್ ಆಂಡ್ ಬ್ರೇಕ್‌ಫಾಸ್ಟ್ ಹೋಟೆಲ್‌ನಲ್ಲಿ ಬೆಳಗ್ಗೆ 8:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಹೋಟೆಲ್‌ನಲ್ಲಿ ಸುಮಾರು 40 ಗ್ರಾಹಕರಿದ್ದು, ಹೆಚ್ಚಿನವರು ನಿದ್ದೆಯಲ್ಲಿದ್ದ ಕಾರಣ ದುರಂತದ ತೀವ್ರತೆ ಹೆಚ್ಚಾಗಿತ್ತು. ದೆಹಲಿ ಪೊಲೀಸರ ತನಿಖೆಯ ಪ್ರಕಾರ, ಆ ಹೋಟೆಲ್ ಕಟ್ಟಡಕ್ಕೆ ಕೇವಲ ಒಂದೇ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರವಿತ್ತು. ಕಟ್ಟಡದ ಕಿಟಕಿಗಳನ್ನು ಶಾಶ್ವತವಾಗಿ ಸೀಲ್ ಮಾಡಲಾಗಿತ್ತು ಮತ್ತು ಮುಖ್ಯ ಬಾಗಿಲು ಸೆನ್ಸರ್ ಮೂಲಕ ಕೆಲಸ ಮಾಡುತ್ತಿತ್ತು. ಹೀಗಾಗಿ ಬೆಂಕಿ ವೇಗವಾಗಿ ಹರಡುತ್ತಿದ್ದಂತೆ ಗ್ರಾಹಕರು ಹೊರಗೆ ಓಡಿ ಬರಲು ಯಾವುದೇ ದಾರಿ ಇಲ್ಲದೆ ಅಲ್ಲಿಯೇ ಸಿಲುಕಿಕೊಳ್ಳಬೇಕಾಯಿತು. ದೇಶದಲ್ಲಿ ಬ್ಯಾಕ್ ಟು ಬ್ಯಾಕ್ ನಡೆಯುತ್ತಿರುವ ಈ ಅಗ್ನಿ ದುರಂತಗಳು ಸಾರ್ವಜನಿಕ ಕಟ್ಟಡಗಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿವೆ.

