Dailyhunt Logo
  • Light mode
    Follow system
    Dark mode
    • Play Story
    • App Story
FRAUD CASE: ವಾಟ್ಸಪ್ ಗ್ರೂಪ್ ನಂಬಿ ₹9.91 ಲಕ್ಷ ಕಳೆದುಕೊಂಡ ರೈತ..!

FRAUD CASE: ವಾಟ್ಸಪ್ ಗ್ರೂಪ್ ನಂಬಿ ₹9.91 ಲಕ್ಷ ಕಳೆದುಕೊಂಡ ರೈತ..!

Navasamaja.com 2 weeks ago

ಶಿವಮೊಗ್ಗ: ಷೇರು ಮಾರುಕಟ್ಟೆ (Share Market Trading) ಹಾಗೂ ಆನ್‌ಲೈನ್ ಟ್ರೇಡಿಂಗ್‌ನಲ್ಲಿ (Online Trading) ಹಣ ಹೂಡಿಕೆ ಮಾಡಿದರೆ ಕೈತುಂಬಾ ಲಾಭ ಗಳಿಸಬಹುದು ಎಂಬ ವಂಚಕರ (Fraud) ಆಮಿಷಕ್ಕೆ ಶಿವಮೊಗ್ಗದ (Shivamogga) ರೈತರೊಬ್ಬರು (Farmer) ಬಲಿಯಾಗಿದ್ದಾರೆ.

ನಕಲಿ ಟ್ರೇಡಿಂಗ್ ಗ್ರೂಪ್ ನಂಬಿ ಹಂತ ಹಂತವಾಗಿ ಬರೋಬ್ಬರಿ ₹9,91,081 ಹಣವನ್ನು ವರ್ಗಾಯಿಸಿ ರೈತರೊಬ್ಬರು ವಂಚನೆಗೊಳಗಾದ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ವಿಐಪಿ ವಾಟ್ಸಪ್ ಗ್ರೂಪ್ ಮೂಲಕ ವಂಚನೆಗೆ ಸ್ಕೆಚ್

ಕಳೆದ ಮಾರ್ಚ್ ತಿಂಗಳಲ್ಲಿ ಸಂತ್ರಸ್ತ ಕೃಷಿಕರು ತಮ್ಮ ಮೊಬೈಲ್‌ನಲ್ಲಿ ವಾಟ್ಸಪ್ ವೀಕ್ಷಿಸುತ್ತಿದ್ದಾಗ, ಅಪರಿಚಿತ ಸೈಬರ್ ಖದೀಮರು ಇವರ ಮೊಬೈಲ್ ಸಂಖ್ಯೆಯನ್ನು 'ವಿಐಪಿ' ಹೆಸರಿನ ವಾಟ್ಸಪ್ ಗ್ರೂಪ್‌ವೊಂದಕ್ಕೆ ಸೇರಿಸಿದ್ದರು. ಈ ಗ್ರೂಪ್‌ನಲ್ಲಿ ಬೆಂಗಳೂರು ಮೂಲದ ಪ್ರಸಿದ್ಧ ಅಧಿಕೃತ ಟ್ರೇಡಿಂಗ್ ಕಂಪನಿಯೊಂದರ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಿರಂತರವಾಗಿ ಮೆಸೇಜ್‌ಗಳನ್ನು ಕಳುಹಿಸಲಾಗುತ್ತಿತ್ತು. ಕಂಪನಿಯ ಪ್ರತಿನಿಧಿಗಳ ಸೋಗಿನಲ್ಲಿ ಮಾತನಾಡಿದ ವಂಚಕರು, ತಮ್ಮಲ್ಲಿ ಹಣ ಹೂಡಿದರೆ ಅತಿ ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಲಾಭ ಗಳಿಸಿಕೊಡುವುದಾಗಿ ನಂಬಿಸಿದ್ದರು.

ನಾಲ್ಕು ಹಂತಗಳಲ್ಲಿ ಲಕ್ಷಾಂತರ ರೂಪಾಯಿ ವರ್ಗಾವಣೆ:

ಖದೀಮರ ಮಾತುಗಳನ್ನು ನಿಜವೆಂದು ನಂಬಿದ ರೈತ, ಹೆಚ್ಚಿನ ಲಾಭದ ಆಸೆಗೆ ಬಿದ್ದು ಕಳೆದ ಮಾರ್ಚ್ 20ರಿಂದ ಮೇ 15ರ ಅವಧಿಯಲ್ಲಿ ವಂಚಕರು ನೀಡಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ನಾಲ್ಕು ಹಂತಗಳಲ್ಲಿ ಒಟ್ಟು ₹9,91,081 ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು.

ಕೆಲ ದಿನಗಳ ಬಳಿಕ ತಮಗೆ ಬಂದ ಲಾಭಾಂಶ ಸೇರಿದಂತೆ ಒಟ್ಟು ಮೊತ್ತವನ್ನು ಬ್ಯಾಂಕ್ ಖಾತೆಗೆ ಹಿಂಪಡೆಯಲು (Withdraw) ರೈತ ಪ್ರಯತ್ನಿಸಿದ್ದಾರೆ. ಈ ವೇಳೆ ವಂಚಕರು, ಒಟ್ಟು ಮೊತ್ತದ ಶೇ.20ರಷ್ಟು ಹಣವನ್ನು ಮುಂಚಿತವಾಗಿ ಕಮಿಷನ್ ರೂಪದಲ್ಲಿ ಪಾವತಿಸಬೇಕು ಎಂಬ ಹೊಸ ಷರತ್ತು ವಿಧಿಸಿದ್ದಾರೆ. ರೈತರು ಇದಕ್ಕೆ ಒಪ್ಪದಿದ್ದಾಗ ವಂಚಕರು ತಾವು ಸೃಷ್ಟಿಸಿದ್ದ ನಕಲಿ ವೆಬ್ ಪೇಜ್ ಅನ್ನೇ ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ.

ತಮಗೆ ಮೋಸ ಹೋಗಿರುವುದು ತಡವಾಗಿ ಅರಿವಾದ ತಕ್ಷಣ, ರೈತ ಬೆಂಗಳೂರಿನಲ್ಲಿರುವ ಟ್ರೇಡಿಂಗ್ ಕಂಪನಿಯ ಅಧಿಕೃತ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಸೈಬರ್ ಕಳ್ಳರು ತಮ್ಮ ಕಂಪನಿಯ ಹೆಸರನ್ನು ದುರುಪಯೋಗಪಡಿಸಿಕೊಂಡು ಈ ವಂಚನೆ ಎಸಗಿರುವುದು ದೃಢಪಟ್ಟಿದೆ.

ಈ ಸೈಬರ್ ದೋಖಾ ಕುರಿತಂತೆ ಸಂತ್ರಸ್ತ ಕೃಷಿಕ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja