ದಾವಣಗೆರೆ : ಹುಬ್ಬಳ್ಳಿಯಲ್ಲಿ (Hubli) ಜಿಮ್ ಟ್ರೈನರ್ ಸಮೀರ್ ಎಂಬಾತನ ವಿರುದ್ಧ ಕೇಳಿಬಂದಿರುವ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ (Black Mail) ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗ ಗಂಭೀರವಾಗಿ ಪರಿಗಣಿಸಿದೆ.ಈ ಬಗ್ಗೆ ಗೃಹ ಸಚಿವ ಜಿ.
ಪರಮೇಶ್ವರ್ (G Parameshwar) ಅವರು, ತಪ್ಪಿತಸ್ಥರ ವಿರುದ್ಧ ಯಾವುದೇ ದಾಕ್ಷಿಣ್ಯವಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ತಕ್ಷಣವೇ ಒದಗಿಸುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ನಾನು ಈಗ ದಾವಣಗೆರೆಯಿಂದ ನೇರವಾಗಿ ಹುಬ್ಬಳ್ಳಿಗೆ ಹೊರಟಿದ್ದೇನೆ. ನಾನು ಅಲ್ಲಿಗೆ ತಲುಪುವಷ್ಟರಲ್ಲಿ ಈ ಪ್ರಕರಣದ ಕುರಿತು ಸಮಗ್ರ ವರದಿಯನ್ನು ಸಿದ್ಧಪಡಿಸಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು. ಸಂತ್ರಸ್ತ ಯುವತಿಯನ್ನು ಈಗಾಗಲೇ ಪೊಲೀಸರು ರಕ್ಷಿಸಿದ್ದು, ಆಕೆಗೆ ಅಗತ್ಯ ಭದ್ರತೆ ಒದಗಿಸಲಾಗಿದೆ. ಯಾರೇ ಕಾನೂನು ಕೈಗೆತ್ತಿಕೊಂಡರೂ ಅಥವಾ ಇಂತಹ ಅಮಾನವೀಯ ಕೃತ್ಯ ಎಸಗಿದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪರಂ ತಿಳಿಸಿದರು. ಜಿಮ್ ಟ್ರೈನರ್ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲು ಈಗಾಗಲೇ ಆದೇಶಿಸಿದ್ದೇನೆ. ಇಂತಹ ಪ್ರಕರಣಗಳಲ್ಲಿ ಸರ್ಕಾರವು ಯಾವುದೇ ರೀತಿಯ ರಾಜಿಯಾಗುವುದಿಲ್ಲ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.

