ಗದಗ: ಗದಗ (Gadag) ನಗರದ ಸೂರ್ಯ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ (Hostel) ಲಕ್ಷಾಂತರ ರೂಪಾಯಿ ಮೌಲ್ಯದ ಸರ್ಕಾರಿ ಸ್ವತ್ತುಗಳು ಗಾಯಬ್ (Theft) ಆಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಬಡ ಮತ್ತು ದಲಿತ ವಿದ್ಯಾರ್ಥಿಗಳ ಡಿಜಿಟಲ್ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಹೈಟೆಕ್ ಕಂಪ್ಯೂಟರ್ ಲ್ಯಾಬ್ ನಿರ್ಮಿಸಿತ್ತು. ಆದರೆ, ಇದೀಗ ಲ್ಯಾಬ್‌ನಲ್ಲಿದ್ದ 20ಕ್ಕೂ ಹೆಚ್ಚು ಸುಸ್ಥಿತಿಯಲ್ಲಿದ್ದ ಕಂಪ್ಯೂಟರ್‌ಗಳು ಹಾಗೂ 6 ಏರ್ ಕಂಡೀಷನರ್‌ಗಳು (AC) ಏಕಾಏಕಿ ಮಾಯವಾಗಿವೆ. ವಸತಿ ನಿಲಯದ ಅಧಿಕಾರಿಗಳೇ ಈ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಿಂದ ಖರೀದಿಸಿದ ವಸ್ತುಗಳನ್ನು ಸ್ವತಃ ಅಧಿಕಾರಿಗಳೇ ತೆಗೆದುಕೊಂಡು ಹೋಗಿದ್ದು, ಇಲಾಖೆಯಲ್ಲಿ ಯಾರೂ ಕೇಳುವವರಿಲ್ಲದಂತಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಕಂಪ್ಯೂಟರ್‌ಗಳು ಇಲ್ಲದಿರುವುದರಿಂದ ಅಭ್ಯಾಸ ಮಾಡಲು ಹಾಗೂ ಆನ್‌ಲೈನ್ ಕಲಿಕೆಗೆ ಬಡ ವಿದ್ಯಾರ್ಥಿಗಳು ತೀವ್ರ ಪರದಾಟ ನಡೆಸುವಂತಾಗಿದೆ. ಅಧಿಕಾರಿಗಳ ಈ ನಡವಳಿಕೆಗೆ ಸಾರ್ವಜನಿಕ ವಲಯದಲ್ಲೂ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ತಕ್ಷಣವೇ ತನಿಖೆ ನಡೆಸಿ, ನಾಪತ್ತೆಯಾಗಿರುವ ಕಂಪ್ಯೂಟರ್ ಹಾಗೂ ಎಸಿಗಳನ್ನು ಮರಳಿ ಹಾಸ್ಟೆಲ್‌ಗೆ ತಂದುಕೊಡಬೇಕು ಎಂದು ವಿದ್ಯಾರ್ಥಿಗಳು ಹಾಗೂ ದಲಿತ ಸಂಘಟನೆಗಳು ಆಗ್ರಹಿಸಿವೆ.

