Dailyhunt Logo
  • Light mode
    Follow system
    Dark mode
    • Play Story
    • App Story
GBA : ಜೆಸಿಬಿ ಹೋದ ಬೆನ್ನಲ್ಲೇ ಫುಟ್‌ಪಾತಿಗೆ ಮರಳಿದ ವ್ಯಾಪಾರಿಗಳು - ಜಿಬಿಎಗೆ ಮತ್ತೆ ತಲೆನೋವು!

GBA : ಜೆಸಿಬಿ ಹೋದ ಬೆನ್ನಲ್ಲೇ ಫುಟ್‌ಪಾತಿಗೆ ಮರಳಿದ ವ್ಯಾಪಾರಿಗಳು - ಜಿಬಿಎಗೆ ಮತ್ತೆ ತಲೆನೋವು!

Navasamaja.com 2 weeks ago

ಬೆಂಗಳೂರು: ರಾಜಧಾನಿಯ (Bengaluru) ಪಾದಚಾರಿಗಳ ಹಿತರಕ್ಷಣೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಂಡಿರುವ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಕೇವಲ 48 ಗಂಟೆಗಳಲ್ಲೇ ಮರುಒತ್ತುವರಿಯ ಬಿಸಿ ತಟ್ಟಿದೆ.

ಜಿಬಿಎ ಅಧಿಕಾರಿಗಳು ಜೆಸಿಬಿಗಳೊಂದಿಗೆ ಬಂದು ಫುಟ್‌ಪಾತ್‌ಗಳನ್ನು (Footpath) ಮುಕ್ತಗೊಳಿಸಿ ಹೋದ ಬೆನ್ನಲ್ಲೇ, ಬೀದಿ ಬದಿ ವ್ಯಾಪಾರಿಗಳು ಮತ್ತೆ ಅದೇ ಜಾಗಕ್ಕೆ ಲಗ್ಗೆ ಇಟ್ಟು ವ್ಯಾಪಾರ ಆರಂಭಿಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇದಕ್ಕೆ ಜೀವಂತ ಸಾಕ್ಷಿ ಎಂಬಂತೆ, ಎರಡು ದಿನಗಳ ಹಿಂದೆಯಷ್ಟೇ ಜಿಬಿಎ ಮಾರ್ಷಲ್‌ಗಳು ಜಿದ್ದಿಗೆ ಬಿದ್ದು ಒತ್ತುವರಿ ಮುಕ್ತಗೊಳಿಸಿದ್ದ ಜೆ.ಸಿ ನಗರದ ಮುನಿರೆಡ್ಡಿ ಪಾಳ್ಯ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಮತ್ತೆ ರಸ್ತೆಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದಾರೆ. ಫುಟ್‌ಪಾತ್ ಮೇಲೆ ತರಕಾರಿ ಬುಟ್ಟಿಗಳನ್ನು ಇಟ್ಟುಕೊಂಡು, ತಳ್ಳುಗಾಡಿಗಳನ್ನು ಸಾಲಾಗಿ ನಿಲ್ಲಿಸಿಕೊಂಡು ರಾಜಾರೋಷವಾಗಿ ವ್ಯಾಪಾರ ಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ.

ಸ್ಥಳೀಯ ನಿವಾಸಿಯೊಬ್ಬರು ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, "ಅಧಿಕಾರಿಗಳು ಬಂದು ಹೋದ ಎರಡೇ ದಿನಕ್ಕೆ ವ್ಯಾಪಾರಿಗಳು ಮತ್ತೆ ಫುಟ್‌ಪಾತಿಗೆ ಬಂದಿದ್ದಾರೆ. ಹಾಗಾದರೆ ಇಷ್ಟೆಲ್ಲಾ ಸದ್ದು ಗದ್ದಲದ ಕಾರ್ಯಾಚರಣೆ ಮಾಡಿದ್ದಕ್ಕೆ ಏನು ಪ್ರಯೋಜನ? ಇದಕ್ಕೆ ಶಾಶ್ವತ ಪರಿಹಾರವೇ ಇಲ್ವಾ?" ಎಂದು ಜಿಬಿಎ ಕಟುವಾಗಿ ಪ್ರಶ್ನಿಸಿದ್ದಾರೆ.

ಜೆ.ಸಿ ನಗರ ಮಾತ್ರವಲ್ಲದೆ ನಗರದ ಕೆ.ಜಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ ಸೇರಿದಂತೆ ಹಲವು ಭಾಗಗಳಲ್ಲಿ ಅಧಿಕಾರಿಗಳು ಕಣ್ಣು ತಪ್ಪಿಸಿದ ತಕ್ಷಣ ವ್ಯಾಪಾರಿಗಳು ವಾಪಸ್ ಬರುತ್ತಿರುವ ದೂರುಗಳು ಕೇಳಿಬಂದಿವೆ.

ಇನ್ನು ಮೂರನೇ ದಿನವೂ ಮುಂದುವರಿದ ಈ ಕಾರ್ಯಾಚರಣೆಯಲ್ಲಿ ಜಿಬಿಎ ದಂಡದ ಅಸ್ತ್ರವನ್ನು ತೀವ್ರಗೊಳಿಸಿದೆ. ಪಾದಚಾರಿ ಮಾರ್ಗಗಳ ಮೇಲೆ ಕಟ್ಟಡದ ಕಲ್ಲು, ಮಣ್ಣು ಹಾಗೂ ಕಸ ಸುರಿದು ಸಾರ್ವಜನಿಕರ ಓಡಾಟಕ್ಕೆ ಕಂಟಕವಾಗಿದ್ದ ಜಯನಗರ 1ನೇ ಬ್ಲಾಕ್‌ನ ಕಟ್ಟಡ ಮಾಲೀಕನಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ಭಾರಿ ಪೆನಾಲ್ಟಿ ವಿಧಿಸಲಾಗಿದೆ.

ಇದೇ ತಪ್ಪು ಮಾಡಿದ ಮತ್ತಿಬ್ಬರು ಮಾಲೀಕರಿಗೆ ತಲಾ 20,000 ರೂಪಾಯಿ ಹಾಗೂ ರಸ್ತೆ ಪಕ್ಕದ ಮರದ ಸುತ್ತ ಕಾಂಕ್ರೀಟ್ ಬೆಂಚ್ ಅಳವಡಿಸಿದ್ದ ಹೋಟೆಲ್ ಮಾಲೀಕನಿಗೆ 5,000 ರೂಪಾಯಿ ದಂಡ ಹಾಕಲಾಗಿದೆ. ದಕ್ಷಿಣ ವಲಯದಲ್ಲಿ 11.35 ಕಿ.ಮೀ, ಪಶ್ಚಿಮ ವಲಯದಲ್ಲಿ 16.5 ಕಿ.ಮೀ ಹಾಗೂ ಕೇಂದ್ರ ವಲಯದ 12 ಮುಖ್ಯ ರಸ್ತೆಗಳಲ್ಲಿ 10.95 ಕಿ.ಮೀ ಉದ್ದದ ಪಾದಚಾರಿ ಮಾರ್ಗವನ್ನು ಧ್ವಂಸಗೊಳಿಸಿ ಟನ್‌ಗಟ್ಟಲೆ ತ್ಯಾಜ್ಯವನ್ನು ಟಿಪ್ಪರ್‌ಗಳ ಮೂಲಕ ಜಪ್ತಿ ಮಾಡಲಾಗಿದೆ.

ಈ ಮೆಗಾ ಡ್ರೈವ್ ನಗರದ ಹಲವೆಡೆ ಬೀದಿ ವ್ಯಾಪಾರಿಗಳ ಕಣ್ಣೀರು ಮತ್ತು ತೀವ್ರ ಪ್ರತಿರೋಧಕ್ಕೆ ಕಾರಣವಾಯಿತು. ಕೆ.ಜಿ ರಸ್ತೆಯಲ್ಲಿ ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ವಿಕಲಚೇತನ ವ್ಯಾಪಾರಿಯೊಬ್ಬರು, "ಯಾರಿಗೂ ತೊಂದರೆ ಕೊಡದೆ ಬದುಕುತ್ತಿದ್ದೆವು, ಈಗ ಏಕಾಏಕಿ ನಮ್ಮ ಹೊಟ್ಟೆಯ ಮೇಲೆ ಹೊಡೆದರೆ ಎಲ್ಲಿಗೆ ಹೋಗಬೇಕು" ಎಂದು ಕಣ್ಣೀರಿಟ್ಟರು.

ಇತ್ತ ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ಇದ್ದ ನಂದಿನಿ ಹಾಲಿನ ಬೂತ್ ಅನ್ನು ಜೆಸಿಬಿ ಮುಖಾಂತರ ಪುಡಿಪುಡಿ ಮಾಡಿದ್ದಕ್ಕೆ ಮಾಲೀಕ ಸುಮಿತ್ರಾ ಭಾವುಕರಾಗಿ, "ವಸ್ತುಗಳನ್ನು ಸರಿಸಲು ಅಧಿಕಾರಿಗಳು ಸ್ವಲ್ಪವೂ ಸಮಯ ಕೊಡಲಿಲ್ಲ. ನಂದಿನಿ ಮಳಿಗೆ ತೆರವು ಮಾಡದಂತೆ ರಾಜಕೀಯ ನಾಯಕರ ಸೂಚನೆ ಇದ್ದರೂ ಬಿಡಲಿಲ್ಲ. ಇಲ್ಲಿನ ವ್ಯಾಪಾರಿಗಳಿಂದ ಪೊಲೀಸರು ನಿರಂತರ ಲಂಚ ಪಡೆಯುತ್ತಾರೆ" ಎಂದು ಗಂಭೀರ ಆರೋಪ ಮಾಡಿದರು.

ಅಧಿಕಾರಿಗಳ ಅಬ್ಬರಕ್ಕೆ ಸದ್ಯಕ್ಕೆ ಫುಟ್‌ಪಾತ್‌ಗಳು ತೆರವಾಗುತ್ತಿದ್ದರೂ, ಕಣ್ಗಾವಲು ಇಲ್ಲದ ಕಾರಣ ವ್ಯಾಪಾರಿಗಳು ಪುನಃ ಅತಿ ಶೀಘ್ರದಲ್ಲೇ ಸ್ಥಳ ಆಕ್ರಮಿಸಿಕೊಳ್ಳುತ್ತಿರುವುದು ಜಿಬಿಎಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja