ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಚುನಾವಣೆಯನ್ನು 2027ರ ಜನವರಿ 31ರವರೆಗೆ ಮುಂದೂಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ (Election commission) ಸುಪ್ರೀಂ ಕೋರ್ಟ್ (Supreme court) ಮೊರೆ ಹೋಗಿದೆ. ಈ ಹಿಂದೆ 2026ರ ಡಿಸೆಂಬರ್ 31ರೊಳಗೆ ಚುನಾವಣೆ ಮುಗಿಸುವಂತೆ ನ್ಯಾಯಾಲಯ ಗಡುವು ವಿಧಿಸಿತ್ತು.
ಆದರೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟು ಆಯೋಗ ಹೆಚ್ಚುವರಿಯಾಗಿ ಒಂದು ತಿಂಗಳ ಅವಕಾಶ ಕೇಳಿದೆ. ಇದರಿಂದ ಬೆಂಗಳೂರಿನ ಜನರಿಗೆ ಮತ್ತೊಮ್ಮೆ ನಿರಾಶೆಯಾಗಿದೆ.
ಬಿಬಿಎಂಪಿ ಅಧಿಕಾರಾವಧಿ 2020ರಲ್ಲೇ ಮುಗಿದಿದ್ದರೂ ಅಂದಿನಿಂದ ಯಾವುದೇ ವಾರ್ಡ್‌ಗೂ ಚುನಾಯಿತ ಸದಸ್ಯರಿಲ್ಲ. ನೀರು, ರಸ್ತೆ, ಚರಂಡಿ, ಕಸದಂತಹ ಸಣ್ಣ ಸಮಸ್ಯೆಗಳಿಗೂ ಜನರು ಶಾಸಕರ ಬಳಿ ಹೋಗಬೇಕಾದ ಸ್ಥಿತಿ ಇದೆ. ಆದರೆ ಬಹುತೇಕ ಶಾಸಕರು ಸಚಿವರಾಗಿರುವುದರಿಂದ ಅವರನ್ನು ಭೇಟಿಯಾಗುವುದೇ ಕಷ್ಟವಾಗಿದೆ. ಇತ್ತ ಜಿಬಿಎ ಮತ್ತು ಐದು ಹೊಸ ಪಾಲಿಕೆಗಳ ಅಧಿಕಾರಿಗಳೇ ನಿರ್ಧಾರ ಕೈಗೊಳ್ಳುತ್ತಿರುವುದರಿಂದ ಸ್ಥಳೀಯ ಆಡಳಿತ ಹಳಿ ತಪ್ಪಿದೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.
ಆಯೋಗವು ತನ್ನ ಅರ್ಜಿಯಲ್ಲಿ 12 ಕಾರಣಗಳನ್ನು ನೀಡಿದ್ದು, ಹಳೆಯ ಮತದಾರರ ಪಟ್ಟಿಯ ಆಧಾರದಲ್ಲೇ ಚುನಾವಣೆ ನಡೆಸಲು ಅನುಮತಿ ಕೇಳಿದೆ. 2026ರ ಏಪ್ರಿಲ್ 18ರ ಅಂತಿಮ ಪಟ್ಟಿಯನ್ನು ಜಿಬಿಎ ಚುನಾವಣೆಗೆ ಬಳಸಲು ಅವಕಾಶ ನೀಡಬೇಕು ಎಂದೂ ಮನವಿ ಮಾಡಿದೆ. ಹಿಂದೆ ಕೋವಿಡ್, ವಾರ್ಡ್ ವಿಂಗಡಣೆ ಕಾರಣಕ್ಕೆ ಚುನಾವಣೆ ತಡವಾಗಿತ್ತು. ನಂತರ ಬಿಬಿಎಂಪಿ ವಿಸರ್ಜಿಸಿ ಜಿಬಿಎ ರಚಿಸಿದರೂ ಚುನಾವಣೆ ನಡೆದಿಲ್ಲ. ಈಗ ಸುಪ್ರೀಂ ಕೋರ್ಟ್ ಏನು ಆದೇಶ ನೀಡುತ್ತದೆ ಎಂಬುದರ ಮೇಲೆ ಬೆಂಗಳೂರಿನ ಜನಪ್ರತಿನಿಧಿಗಳ ಆಯ್ಕೆ ನಿರ್ಧಾರವಾಗಲಿದೆ.

