Dailyhunt Logo
  • Light mode
    Follow system
    Dark mode
    • Play Story
    • App Story
GOLD MINE: ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಆಂಧ್ರಪ್ರದೇಶದಲ್ಲಿ ಆರಂಭ

GOLD MINE: ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಆಂಧ್ರಪ್ರದೇಶದಲ್ಲಿ ಆರಂಭ

Navasamaja.com 7 hrs ago

ಮರಾವತಿ: ಆಂಧ್ರಪ್ರದೇಶವು (Andra Pradesh) ಬುಧವಾರ ಗಣಿ ವಲಯದಲ್ಲಿ (Gold Mine) ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಭಾರತದ ಸ್ವಾತಂತ್ರ್ಯಾನಂತರದ ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಅತಿ ದೊಡ್ಡ ಖಾಸಗಿ ಪ್ರಾಥಮಿಕ ಚಿನ್ನದ ಗಣಿಗಾರಿಕೆ ಯೋಜನೆಗೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ.

ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ವಾಣಿಜ್ಯ ಚಿನ್ನದ ಗಣಿಗಾರಿಕೆಯನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿದ್ದಾರೆ. ಈ ಮಹತ್ವದ ಘಟನೆಗೂ ಮುನ್ನ ಆಂಧ್ರಪ್ರದೇಶ ಸಚಿವ ಸಂಪುಟವು ಜೂನ್ ತಿಂಗಳ ಸಭೆಯಲ್ಲಿ ಗಣಿಗಾರಿಕೆ ನಡೆಯುತ್ತಿರುವ 'ಜೊನ್ನಗಿರಿ' ಗ್ರಾಮವನ್ನು ಅಧಿಕೃತವಾಗಿ 'ಸ್ವರ್ಣಗಿರಿ' ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿದೆ.

598 ಹೆಕ್ಟೇರ್ ಪ್ರದೇಶದಲ್ಲಿದೆ ಈ ಗಣಿ
'ಜಿಯೋಮೈಸೂರು ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್' (GMSI) ಸಂಸ್ಥೆಯು ಸುಮಾರು 405 ಕೋಟಿ ರೂಪಾಯಿಗಳ ಬೃಹತ್ ಬಂಡವಾಳ ಹೂಡಿಕೆಯೊಂದಿಗೆ ಈ ಚಿನ್ನದ ಗಣಿಯನ್ನು ಅಭಿವೃದ್ಧಿಪಡಿಸಿದೆ. ಕರ್ನೂಲು ಜಿಲ್ಲೆಯ ತುಗ್ಗಲಿ ಮಂಡಲದಲ್ಲಿ ಸುಮಾರು 598 ಹೆಕ್ಟೇರ್ ಪ್ರದೇಶದಲ್ಲಿ ಈ ಗಣಿ ವ್ಯಾಪಿಸಿದೆ. ಈ ಯೋಜನೆಯಿಂದಾಗಿ ಸ್ಥಳೀಯವಾಗಿ ಸುಮಾರು 700 ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಈ ಪೈಕಿ ಶೇಕಡಾ 80 ರಷ್ಟು ಉದ್ಯೋಗಗಳನ್ನು ಸ್ಥಳೀಯ ಗ್ರಾಮೀಣ ಜನರಿಗೇ ನೀಡಲಾಗುತ್ತಿದೆ. ಚಿನ್ನದ ಉತ್ಪಾದನೆಯಿಂದಾಗಿ ಆಂಧ್ರಪ್ರದೇಶ ಸರ್ಕಾರಕ್ಕೆ ರಾಯಲ್ಟಿ ರೂಪದಲ್ಲಿ ಭಾರಿ ಆದಾಯ ಹರಿದುಬರಲಿದೆ. ಆರಂಭಿಕ ಹಂತದಲ್ಲಿ ವರ್ಷಕ್ಕೆ 400 ಕೆಜಿ ಚಿನ್ನ ಉತ್ಪಾದನೆಯಾದರೆ ರಾಜ್ಯ ಸರ್ಕಾರಕ್ಕೆ ವಾರ್ಷಿಕ 57 ಕೋಟಿ ರೂಪಾಯಿ ಆದಾಯ ಸಿಗಲಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನೆ 900 ಕೆಜಿಗೆ ತಲುಪಿದರೆ ವಾರ್ಷಿಕ 144 ಕೋಟಿ ರೂಪಾಯಿವರೆಗೂ ರಾಜಸ್ವ ಗಳಿಕೆಯಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

400 ಕೆಜಿ ಚಿನ್ನವನ್ನು ಹೊರತೆಗೆಯುವ ಗುರಿ
ಕಳೆದ ಮೇ ತಿಂಗಳಿನಲ್ಲೇ ಈ ಗಣಿಯಲ್ಲಿ ಪ್ರಾಯೋಗಿಕವಾಗಿ (Trial) ಚಿನ್ನದ ಉತ್ಪಾದನೆಯನ್ನು ಯಶಸ್ವಿಯಾಗಿ ಆರಂಭಿಸಲಾಗಿತ್ತು. ಸಿಎಂ ಚಂದ್ರಬಾಬು ನಾಯ್ಡು ಅವರ ಉದ್ಘಾಟನೆಯ ಬೆನ್ನಲ್ಲೇ ಪೂರ್ಣ ಪ್ರಮಾಣದ ವಾಣಿಜ್ಯ ಉತ್ಪಾದನೆ ಚುರುಕುಗೊಳ್ಳಲಿದೆ. ಪ್ರಸಕ್ತ 2026-27ರ ಹಣಕಾಸು ವರ್ಷದಲ್ಲಿ ಸುಮಾರು 400 ಕೆಜಿ ಚಿನ್ನವನ್ನು ಹೊರತೆಗೆಯುವ ಗುರಿ ಹೊಂದಲಾಗಿದ್ದು, ಮುಂಬರುವ ವರ್ಷಗಳಲ್ಲಿ ಗಣಿಯನ್ನು ಮತ್ತಷ್ಟು ವಿಸ್ತರಿಸಿ ವಾರ್ಷಿಕ ಉತ್ಪಾದನೆಯನ್ನು ಬರೋಬ್ಬರಿ ಒಂದು ಟನ್‌ಗೆ ಹೆಚ್ಚಿಸಲು ಕಂಪನಿಯು ಬೃಹತ್ ಯೋಜನೆ ರೂಪಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja