Dailyhunt
GOOD NEWS: ಏರ್‌ಪೋರ್ಟ್ ಶುಲ್ಕದಲ್ಲಿ ಶೇ. 25ರಷ್ಟು ಕಡಿತ, ಪ್ರಯಾಣಿಕರಿಗೆ ಆಗುತ್ತಾ ಲಾಭ?

GOOD NEWS: ಏರ್‌ಪೋರ್ಟ್ ಶುಲ್ಕದಲ್ಲಿ ಶೇ. 25ರಷ್ಟು ಕಡಿತ, ಪ್ರಯಾಣಿಕರಿಗೆ ಆಗುತ್ತಾ ಲಾಭ?

Navasamaja.com 5 days ago

ವದೆಹಲಿ: ಮಧ್ಯಪ್ರಾಚ್ಯ ನಡೆಯುತ್ತಿರುವ ಇರಾನ್ ಸಂಘರ್ಷ ಹಾಗೂ ಪಾಕಿಸ್ತಾನದ ವಾಯುಪ್ರದೇಶದ ಬಳಕೆಗೆ ಇರುವ ನಿಷೇಧದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನೆರವು ಘೋಷಿಸಿದೆ. ಭಾರತದ ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರವು (AERA) ಪ್ರಮುಖ ವಿಮಾನ ನಿಲ್ದಾಣಗಳಲ್ಲಿ (Good News) ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಶುಲ್ಕವನ್ನು ಶೇ.

25ರಷ್ಟು ಕಡಿತಗೊಳಿಸಿ ಆದೇಶ ಹೊರಡಿಸಿದೆ.

ಮೂರು ತಿಂಗಳ ತನಕ ಇರಲಿದೆ ಈ ಡಿಸ್ಕೌಂಟ್‌

ಈ ರಿಯಾಯಿತಿಯು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮುಂದಿನ ಮೂರು ತಿಂಗಳ ಅವಧಿಗೆ ಅನ್ವಯವಾಗಲಿದೆ. ಸರ್ಕಾರವು ನೀಡಿದ ಸೂಚನೆಯ ಮೇರೆಗೆ AERA ಈ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಶೇಷವಾಗಿ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಏರ್ ಇಂಡಿಯಾ ಈ ರೀತಿಯ ಆರ್ಥಿಕ ಬೆಂಬಲಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದ್ದವು.

ಪ್ರಸ್ತುತ ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಜಾಗತಿಕವಾಗಿ ವಿಮಾನಯಾನ ವೆಚ್ಚ ಹೆಚ್ಚಾಗಿದೆ. ಜೊತೆಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಸಾಧ್ಯವಾಗದ ಕಾರಣ ಭಾರತೀಯ ವಿಮಾನಗಳು ದೀರ್ಘ ಮಾರ್ಗಗಳಲ್ಲಿ ಸಂಚರಿಸಬೇಕಾಗಿದೆ. ಇದರಿಂದಾಗಿ ಇಂಧನ ಬಳಕೆಯೂ ಹೆಚ್ಚಾಗಿದ್ದು, ವಿಮಾನಯಾನ ಸಂಸ್ಥೆಗಳ ಬ್ಯಾಲೆನ್ಸ್ ಶೀಟ್ ಮೇಲೆ ಭಾರಿ ಒತ್ತಡ ಉಂಟಾಗಿತ್ತು. ಇಂಧನ ಮತ್ತು ಕಾರ್ಮಿಕ ವೆಚ್ಚದ ನಂತರ ವಿಮಾನ ನಿಲ್ದಾಣದ ಶುಲ್ಕವೇ ಸಂಸ್ಥೆಗಳಿಗೆ ಮೂರನೇ ಅತಿದೊಡ್ಡ ಹೊರೆಯಾಗಿದೆ.

ವಿಮಾನಯಾನ ಸಂಸ್ಥೆಗಳ ಷೇರಿನಲ್ಲಿ ಏರಿಕೆ

ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ವಿಮಾನಯಾನ ಸಂಸ್ಥೆಗಳ ಷೇರು ಮೌಲ್ಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇಂಡಿಗೋ ಷೇರುಗಳು ಶೇ. 10ರಷ್ಟು ಏರಿಕೆ ಕಂಡಿದೆ. ಏರ್ ಇಂಡಿಯಾ ಸೇರಿದಂತೆ ಇತರ ಏರ್‌ಲೈನ್ಸ್‌ ಷೇರುಗಳೂ ಚೇತರಿಸಿಕೊಂಡಿವೆ. ಇರಾನ್ ಸಂಘರ್ಷದಲ್ಲಿ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿರುವುದು ಮಾರುಕಟ್ಟೆಗೆ ಮತ್ತಷ್ಟು ಬಲ ನೀಡಿದೆ.

ಈ ಶುಲ್ಕ ಕಡಿತವು ನೇರವಾಗಿ ಪ್ರಯಾಣಿಕರಿಗೆ ತಲುಪುವುದಿಲ್ಲವಾದರೂ, ವಿಮಾನಯಾನ ಸಂಸ್ಥೆಗಳ ಮೇಲಿನ ಆರ್ಥಿಕ ಹೊರೆ ತಗ್ಗುವುದರಿಂದ ವಿಮಾನ ಟಿಕೆಟ್ ದರ ಏರಿಕೆಯಾಗುವುದನ್ನು ತಡೆಯಬಹುದು. ಮೂರು ತಿಂಗಳ ನಂತರ ವಿಮಾನ ನಿಲ್ದಾಣಗಳು ಈ ಆದಾಯದ ಕೊರತೆಯನ್ನು ಮುಂದಿನ ಸುಂಕ ಪರಿಷ್ಕರಣೆಯಲ್ಲಿ ಸರಿದೂಗಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಂಕಷ್ಟದ ಸಮಯದಲ್ಲಿ ವಿಮಾನಯಾನ ಕ್ಷೇತ್ರಕ್ಕೆ ಸರ್ಕಾರ ನೀಡಿರುವ ಈ ರಿಲೀಫ್‌, ವಿಮಾನಯಾನ ಸಂಸ್ಥೆಗಳು ಮತ್ತೆ ಹಳಿಗೆ ಮರಳಲು ಸಹಕಾರಿಯಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja