Dailyhunt Logo
  • Light mode
    Follow system
    Dark mode
    • Play Story
    • App Story
GOVERNMENT SCHOOL: ಶಾಲಾ ಅವಧಿಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳ ಅಲೆದಾಟಕ್ಕೆ ಬ್ರೇಕ್; ಶಿಕ್ಷಣ ಇಲಾಖೆಯಿಂದ  ಸುತ್ತೋಲೆ

GOVERNMENT SCHOOL: ಶಾಲಾ ಅವಧಿಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳ ಅಲೆದಾಟಕ್ಕೆ ಬ್ರೇಕ್; ಶಿಕ್ಷಣ ಇಲಾಖೆಯಿಂದ ಸುತ್ತೋಲೆ

Navasamaja.com 4 months ago

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ(Government school) ಮಕ್ಕಳ ಕಲಿಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ತಡೆಯಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(Department of School Education) ಅತ್ಯಂತ ಮಹತ್ವದ ಕ್ರಮ ಕೈಗೊಂಡಿದೆ. ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರಣವಿಲ್ಲದೆ ಶಾಲೆ ಬಿಟ್ಟು ಹೊರಗೆ ಹೋಗಬಾರದು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್(V. Rashmi Mahesh) ಕಠಿಣ ಸುತ್ತೋಲೆ ಹೊರಡಿಸಿದ್ದಾರೆ.

ಶಾಲಾ ಸಮಯದಲ್ಲಿ ತರಬೇತಿ, ಸಭೆಗಳಿಗೆ ಕಡ್ಡಾಯ ನಿಷೇಧ!
ಶಾಲೆಗಳಲ್ಲಿ ಪಾಠ ಪ್ರವಚನಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇನ್ನು ಮುಂದೆ ಶಾಲಾ ಅವಧಿಯಲ್ಲಿ ಶಿಕ್ಷಕರನ್ನು ಅಥವಾ ಮುಖ್ಯ ಶಿಕ್ಷಕರನ್ನು ಯಾವುದೇ ತರಬೇತಿ, ಕಾರ್ಯಾಗಾರ, ಸಭೆ ಅಥವಾ ಇತರೆ ಚಟುವಟಿಕೆಗಳಿಗೆ ಒಒಡಿ (OOD) ಅಥವಾ ಲಿಖಿತ ಆದೇಶಗಳ ಮೂಲಕ ಕಳುಹಿಸುವಂತಿಲ್ಲ. ಕೇವಲ ಶಿಕ್ಷಣ ಇಲಾಖೆ ಮಾತ್ರವಲ್ಲದೆ, ಜಿಲ್ಲೆಯ ಜಿಲ್ಲಾಧಿಕಾರಿಗಳು (DC) ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳು (CEO) ಕೂಡ ಶಾಲಾ ಅವಧಿಯಲ್ಲಿ ಇಂತಹ ಯಾವುದೇ ನಿರ್ದೇಶನಗಳನ್ನು ನೀಡಬಾರದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಅಲ್ಲದೆ, ಶಾಲಾ ಸಮಯದಲ್ಲಿ ಇಲಾಖೆಯ ಯಾವುದೇ ಸಭೆಗಳು ಅಥವಾ ವಿಡಿಯೊ ಕಾನ್ಫರೆನ್ಸ್‌ಗಳನ್ನು ನಡೆಸಬಾರದು. ಒಂದು ವೇಳೆ ಹಿರಿಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡುವುದಿದ್ದರೂ, ತರಗತಿಗಳ ಕಲಿಕಾ ಪ್ರಕ್ರಿಯೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.

ಹೊರಗಿನ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದೊಯ್ಯುವಂತಿಲ್ಲ
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪ್ರೇಕ್ಷಕರನ್ನಾಗಿ ಕರೆದೊಯ್ಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದಕ್ಕೆ ಇಲಾಖೆ ಸಂಪೂರ್ಣ ಬ್ರೇಕ್ ಹಾಕಿದೆ. ಶಾಲೆಯ ಹೊರಗಡೆ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ಪ್ರೇಕ್ಷಕರಾಗಿ ಭಾಗಿಯಾಗಲು ಅನುಮತಿ ನೀಡಬಾರದು ಎಂದು ತಿಳಿಸಲಾಗಿದೆ. ಇದರೊಂದಿಗೆ, ಶಾಲಾ ದಿನಗಳಲ್ಲಿ ಯಾವುದೇ ರೀತಿಯ ಹೊರಗಿನ ಪರೀಕ್ಷೆಗಳನ್ನು ನಡೆಸುವಂತಿಲ್ಲ ಎಂದು ಸೂಚಿಸಲಾಗಿದೆ.

ಡೇಟಾ ಎಂಟ್ರಿ ಕೆಲಸಕ್ಕೂ ಶಿಕ್ಷಕರನ್ನು ಬಳಸುವಂತಿಲ್ಲ: ಉಲ್ಲಂಘಿಸಿದರೆ ಕಠಿಣ ಕ್ರಮ
ಜಿಲ್ಲಾ ಉಪನಿರ್ದೇಶಕರು (DDPI), ಡಯಟ್ ಪ್ರಾಂಶುಪಾಲರು ಅಥವಾ ಶಾಲಾ ಮುಖ್ಯ ಶಿಕ್ಷಕರು, ಇಲಾಖೆಯ ಯಾವುದೇ ಮಟ್ಟದ ಅಧಿಕಾರಿಗಳು ಇಲ್ಲವೇ ಖಾಸಗಿ ಸಂಸ್ಥೆಯ ಪಾಲುದಾರರ ಕೆಲಸಗಳಿಗಾಗಿ ಶಿಕ್ಷಕರಿಗೆ ಡೇಟಾ ಎಂಟ್ರಿ ಮಾಡುವಂತೆ ಮೌಖಿಕ ಅಥವಾ ಲಿಖಿತ ಆದೇಶ ನೀಡುವಂತಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಶಿಕ್ಷಕರು ಕೇವಲ ಬೋಧನೆಗೆ ಮಾತ್ರ ಗಮನ ಹರಿಸಬೇಕು ಎಂಬ ಉದ್ದೇಶದಿಂದ ಈ ನಿಯಮಗಳನ್ನು ತರಲಾಗಿದ್ದು, ಈ ಅಧಿಕೃತ ಆದೇಶವನ್ನು ಉಲ್ಲಂಘಿಸುವ ಅಧಿಕಾರಿಗಳು ಅಥವಾ ಸಿಬ್ಬಂದಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನ ಕಾರ್ಯದರ್ಶಿಯವರು ಕಡಕ್ ಎಚ್ಚರಿಕೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja