Dailyhunt Logo
  • Light mode
    Follow system
    Dark mode
    • Play Story
    • App Story
GRUHA JYOTHI : ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್ - ಶುರುವಾಯ್ತು ತಪಾಸಣೆ, ಬಾಡಿಗೆದಾರರಿಗೆ ಉಚಿತ ಕರೆಂಟ್ ಕಟ್ ಭೀತಿ!

GRUHA JYOTHI : ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್ - ಶುರುವಾಯ್ತು ತಪಾಸಣೆ, ಬಾಡಿಗೆದಾರರಿಗೆ ಉಚಿತ ಕರೆಂಟ್ ಕಟ್ ಭೀತಿ!

Navasamaja.com 1 week ago

ಬೆಂಗಳೂರು: ರಾಜ್ಯ ಸರ್ಕಾರದ (State Govt) ಅತ್ಯಂತ ಜನಪ್ರಿಯ ಹಾಗೂ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಜ್ಯೋತಿ'ಗೆ (Gruha Jyothi) ಸರ್ಕಾರ ಕೊನೆಗೂ ದೊಡ್ಡ ಸರ್ಜರಿ ಮಾಡಲು ಮುಂದಾಗಿದೆ. ಉಚಿತ ವಿದ್ಯುತ್ ಸೌಲಭ್ಯದ ದುರುಪಯೋಗವನ್ನು ತಡೆಯಲು ಇಂಧನ ಇಲಾಖೆಯು ಜುಲೈ 1ರಿಂದ ಫಲಾನುಭವಿಗಳ ಮನೆ-ಮನೆಗೆ ಭೇಟಿ ನೀಡಿ ಕಟ್ಟುನಿಟ್ಟಿನ ದಾಖಲೆ ಪರಿಶೀಲನೆ ನಡೆಸುತ್ತಿದೆ.

ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಸಿಬ್ಬಂದಿ ಈ ಮಹತ್ವದ ಕಾರ್ಯಾಚರಣೆ ಆರಂಭಿಸಿದ್ದು, ಮುಂದಿನ ಎರಡು ತಿಂಗಳ ಕಾಲ ಈ ತಪಾಸಣೆ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ಸರ್ಕಾರದ ಈ ದಿಢೀರ್ ನಿರ್ಧಾರದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲಕ್ಷಾಂತರ ಬಾಡಿಗೆದಾರರಲ್ಲಿ ತಮಗೆ ಸಿಗುತ್ತಿದ್ದ ಉಚಿತ ವಿದ್ಯುತ್ ಎಲ್ಲಿ ಕೈತಪ್ಪಿ ಹೋಗುತ್ತದೋ ಎಂಬ ಭೀತಿ ಮತ್ತು ಆತಂಕ ಎದುರಾಗಿದೆ.

ಪ್ರತಿ ಮನೆಗೂ ಗರಿಷ್ಠ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಈ ಯೋಜನೆಯನ್ನು ಬಳಸಿಕೊಂಡು, ವಸತಿ ರಹಿತ ಅನೇಕರು ವಾಣಿಜ್ಯ ಕಟ್ಟಡಗಳಿಗೂ ಕಳ್ಳಮಾರ್ಗದಲ್ಲಿ ಫ್ರೀ ಕರೆಂಟ್ ಸೌಲಭ್ಯ ಪಡೆದಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಇಲಾಖೆಯು ಪರಿಷ್ಕರಣೆಗೆ ಇಳಿದಿದೆ. ಮನೆಗಳಿಗೆ ಬರುವ ಸಿಬ್ಬಂದಿಗೆ ಫಲಾನುಭವಿಗಳು ತಮ್ಮ ಮತದಾರರ ಗುರುತಿನ ಚೀಟಿ (Voter ID), ಆಧಾರ್ ಕಾರ್ಡ್ ಹಾಗೂ ಮನೆಗೆ ಸಂಬಂಧಿಸಿದ ಬಾಡಿಗೆ ಕರಾರು ಪತ್ರವನ್ನು (Rent Agreement) ಕಡ್ಡಾಯವಾಗಿ ತೋರಿಸಬೇಕಿದೆ.

ಒಂದು ವೇಳೆ ತಪಾಸಣೆ ವೇಳೆ ಸರಿಯಾದ ದಾಖಲೆಗಳು ಲಭ್ಯವಿಲ್ಲದಿದ್ದರೆ, ತಾಂತ್ರಿಕ ಕಾರಣಗಳನ್ನು ನೀಡಿ ಉಚಿತ ವಿದ್ಯುತ್ ಸೌಲಭ್ಯವನ್ನು ತಕ್ಷಣವೇ ಕಡಿತಗೊಳಿಸಲು ಇಲಾಖೆ ಸಜ್ಜಾಗಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ವಿಶೇಷವಾಗಿ, ಜುಲೈ 2023ರ ನಂತರ ಹೊಸದಾಗಿ ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಂಡಿರುವ ನಿವಾಸಿಗಳಿಗೆ ಈ ಪರಿಷ್ಕರಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೊಸದಾಗಿ ಬಂದಿರುವ ಅನೇಕ ಬಾಡಿಗೆದಾರರು ತಮಗಿಂತ ಮುಂಚೆ ಆ ಮನೆಯಲ್ಲಿದ್ದ ಹಳೆಯ ಬಾಡಿಗೆದಾರರ ಹೆಸರಿನಲ್ಲೇ ಗೃಹಜ್ಯೋತಿ ಸೌಲಭ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಳೆಯ ಬಾಡಿಗೆದಾರರು ತಮ್ಮ ಗೃಹಜ್ಯೋತಿ ಲಿಂಕ್ ಆಗಿದ್ದ ಆಧಾರ್ ಸಂಖ್ಯೆಯನ್ನು ರದ್ದು ಮಾಡಿಕೊಳ್ಳದ ಕಾರಣ, ಹೊಸದಾಗಿ ಬಂದವರಿಗೆ ತಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಲು ಪೋರ್ಟಲ್‌ನಲ್ಲಿ ಅವಕಾಶ ಸಿಗುತ್ತಿಲ್ಲ.

ಹಳಬರು ರದ್ದು ಮಾಡದ ಹೊರತು ಹೊಸಬರಿಗೆ ನೋಂದಾಯಿಸಲು ಸಾಧ್ಯವಿಲ್ಲ ಎಂದು ಬೆಸ್ಕಾಂ ಸಿಬ್ಬಂದಿ ಹೇಳುತ್ತಿರುವುದರಿಂದ, ಹೊಸ ಬಾಡಿಗೆದಾರರು ತಮಗೆ ಉಚಿತ ಕರೆಂಟ್ ಸಿಗುವುದಿಲ್ಲವೇ ಎಂದು ಕಂಗಾಲಾಗಿದ್ದಾರೆ. ಈ ಗೊಂದಲಕ್ಕೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಪ್ರಕಟಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಈ ಯೋಜನೆಯ ಬಿಸಿ ಕೇವಲ ಬಾಡಿಗೆದಾರರಿಗೆ ಮಾತ್ರವಲ್ಲದೆ, ಸ್ವಂತ ಮನೆ ಹೊಂದಿರುವವರಿಗೂ ತಟ್ಟಲಿದೆ. ಮನೆ ಮಾಲೀಕರು ಮೃತಪಟ್ಟಿದ್ದರೂ ಸಹ ಇನ್ನು ಅವರ ಹೆಸರಲ್ಲೇ ಗೃಹಜ್ಯೋತಿ ಸೌಲಭ್ಯ ಪಡೆಯುತ್ತಿದ್ದರೆ, ಅಂತಹ ಕನೆಕ್ಷನ್‌ಗಳ ಉಚಿತ ವಿದ್ಯುತ್ ಅನ್ನು ಕಟ್ ಮಾಡಲು ಇಲಾಖೆ ತೀರ್ಮಾನಿಸಿದೆ. ಇದರಿಂದಾಗಿ ಮೃತರ ಹೆಸರಿನಿಂದ ಕುಟುಂಬದ ಮತ್ತೊಬ್ಬರ ಹೆಸರಿಗೆ ಖಾತೆಯನ್ನು ಬದಲಾಯಿಸಿ ಆಧಾರ್ ಲಿಂಕ್ ಮಾಡಿಸುವುದು ಹೇಗೆ ಎಂಬ ಗೊಂದಲ ಸಾರ್ವಜನಿಕರಲ್ಲಿ ಸೃಷ್ಟಿಯಾಗಿದೆ.

ಮನೆ ಮನೆಗೆ ಬರುವ ಸಿಬ್ಬಂದಿ ಒಟ್ಟು 11 ಪ್ರಮುಖ ಪ್ರಶ್ನೆಗಳ ವಿವರಗಳನ್ನು ಕಲೆಹಾಕುತ್ತಿದ್ದಾರೆ. ಅದರಲ್ಲಿ ವಿದ್ಯುತ್ ಸರಬರಾಜು ಕಂಪನಿಯ ಹೆಸರು, ಆರ್ ಆರ್ ಸಂಖ್ಯೆ (ವಿದ್ಯುತ್ ಸಂಖ್ಯೆ), ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರು, ಫಲಾನುಭವಿಯ ಆಧಾರ್ ಸಂಖ್ಯೆ, ಗೃಹಜ್ಯೋತಿಗೆ ನೋಂದಾಯಿಸಿರುವ ಮೊಬೈಲ್ ಸಂಖ್ಯೆ, ಸ್ವಂತ ಮನೆ ಅಥವಾ ಬಾಡಿಗೆ ಮನೆಯ ವಿವರ, ಪಡಿತರ ಚೀಟಿ (ರೇಷನ್ ಕಾರ್ಡ್) ವಿವರ, ಫಲಾನುಭವಿಯ ವೋಟರ್ ಐಡಿ ಸಂಖ್ಯೆ, ಜಾತಿಯ ವಿವರ, ಆಸ್ತಿ ತೆರಿಗೆಯ ವಿವರ ಹಾಗೂ ಫಲಾನುಭವಿಯ ವೃತ್ತಿ ಏನು ಎಂಬ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ, ಲೋಪದೋಷಗಳನ್ನು ಸರಿಪಡಿಸುವ ನೆಪದಲ್ಲಿ ಸರ್ಕಾರ ಜನರಿಗೆ ನಾನಾ ರೀತಿಯ ಹೊಸ ನಿಯಮಗಳ ಟೆನ್ಷನ್ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಎಷ್ಟು ಜನರ ಉಚಿತ ಕರೆಂಟ್ ಕಟ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja