ಬೆಂಗಳೂರು: ರಾಜ್ಯ ಸರ್ಕಾರದ (Karnataka Government) ಮಹತ್ವಾಕಾಂಕ್ಷಿಯ 'ಗೃಹಲಕ್ಷ್ಮಿ'(gruha lakshmi) ಯೋಜನೆ ಜಾರಿಯಾಗಿ ಯಶಸ್ವಿಯಾಗಿ ಮೂರು ವರ್ಷ ಪೂರ್ಣಗೊಂಡಿದೆ. ಇದೇ ಸಂದರ್ಭದಲ್ಲಿ ಯೋಜನೆಯಲ್ಲಿ ಆಗುತ್ತಿರುವ ಸೋರಿಕೆ ತಡೆಯಲು ಹಾಗೂ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಲು ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಇಂದಿನಿಂದ ಮನೆ ಮನೆ ಬಯೋಮೆಟ್ರಿಕ್ ಸರ್ವೇ ಆರಂಭಿಸಲಿದೆ.
ಒಂದು ತಿಂಗಳ ಕಾಲ ನಡೆಯಲಿದೆ 'ಫೇಸ್ ಅಥೆಂಟಿಕೇಷನ್' ಸರ್ವೇ 32 ಕಂತುಗಳಲ್ಲಿ 76,951.13 ಕೋಟಿ ರೂ. ಪಾವತಿ 20 ಕೋಟಿ ವೆಚ್ಚದಲ್ಲಿ ಮರು ಪರಿಶೀಲನಾ ಅಭಿಯಾನ
ಯೋಜನೆಯ ಪಾರದರ್ಶಕತೆ ಕಾಯ್ದುಕೊಳ್ಳಲು ಫಲಾನುಭವಿಗಳ ಬಯೋಮೆಟ್ರಿಕ್ ಮತ್ತು ಫೇಶಿಯಲ್ ಅಥೆಂಟಿಕೇಶನ್ (ಮುಖ ಗುರುತಿಸುವಿಕೆ) ಮೂಲಕ ಮರುಪರಿಶೀಲನೆ ನಡೆಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇಂದಿನಿಂದ ಆರಂಭವಾಗಲಿರುವ ಈ ಸಮೀಕ್ಷೆ ಮುಂದಿನ ಒಂದು ತಿಂಗಳ ಕಾಲ ರಾಜ್ಯಾದ್ಯಂತ ಸಾಗಲಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ತಂತ್ರಜ್ಞಾನದ ನೆರವಿನಿಂದ ನೈಜ ಫಲಾನುಭವಿಗಳನ್ನು ಧೃಡೀಕರಿಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, 2023ರ ಆಗಸ್ಟ್‌ನಿಂದ ಇದುವರೆಗೆ 1.24 ಕೋಟಿ ಫಲಾನುಭವಿ ಮಹಿಳೆಯರಿಗೆ ಒಟ್ಟು 32 ಕಂತುಗಳಲ್ಲಿ 76,951.13 ಕೋಟಿ ರೂಪಾಯಿ ನೇರ ನಗದು ವರ್ಗಾವಣೆ ಮಾಡಲಾಗಿದೆ. ಪ್ರತಿ ತಿಂಗಳು ನೀಡುವ 2,000 ರೂಪಾಯಿ ಹಣವು ಮಹಿಳೆಯರಿಗೆ ಆರ್ಥಿಕ ಬಲ ತಂದಿದೆ ಎಂದು ತಿಳಿಸಿದ್ದಾರೆ.
ಯೋಜನೆ ಆರಂಭವಾದಾಗಿನಿಂದ ಇದುವರೆಗೆ ಹಲವು ಫಲಾನುಭವಿಗಳು ಮರಣ ಹೊಂದಿದ್ದಾರೆ, ಕೆಲವರು ಬೇರೆಡೆಗೆ ವಲಸೆ ಹೋಗಿದ್ದಾರೆ. ಇದರ ಜೊತೆಗೆ ತೆರಿಗೆ ಪಾವತಿದಾರರು ಹಾಗೂ ಅನರ್ಹರು ಸಹ ಪ್ರತಿ ತಿಂಗಳು ಸೌಲಭ್ಯ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಅಕ್ರಮಗಳಿಗೆ ತಡೆಹಾಕಿ, ಕೇವಲ ಅರ್ಹರಿಗೆ ಮಾತ್ರ ಯೋಜನೆಯ ಲಾಭ ಸಿಗುವಂತೆ ಮಾಡಲು 20 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮರು ಪರಿಶೀಲನಾ ಕಾರ್ಯಾಚರಣೆ ರೂಪಿಸಲಾಗಿದೆ.

