ಬೆಂಗಳೂರು: ಮಧ್ಯರಾತ್ರಿ ಅನುಮಾನಾಸ್ಪದವಾಗಿ ಮಾರಕಾಸ್ತ್ರ ಹಿಡಿದು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಹಿಡಿಯಲು ಮುಂದಾದ ಪೊಲೀಸರ ಮೇಲೆಯೇ ಆತ ದಾಳಿ ನಡೆಸಿದ ಘಟನೆ ಬೆಂಗಳೂರಿನ (Bengaluru) ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗುಂಡು (Gun Firing) ಹಾರಿಸಿದ್ದು, ಜಿಶಾನ್ ಎಂಬ ಆರೋಪಿ ಕಾಲಿಗೆ ಗುಂಡೇಟು ತಗುಲಿದೆ. ಸೋಮಸುಂದ್ರಪಾಳ್ಯದಲ್ಲಿ ವ್ಯಕ್ತಿಯೊಬ್ಬ ಮಾರಕಾಸ್ತ್ರದೊಂದಿಗೆ ಬೈಕ್‌ನಲ್ಲಿ ಸುತ್ತಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಆಧರಿಸಿ ಬಂಡೆಪಾಳ್ಯ ಠಾಣೆಯ ಪಿಎಸ್‌ಐ ಸಚಿನ್ ಹಾಗೂ ಸಿಬ್ಬಂದಿ ಸಂದೀಪ್ ಕಾಂಬ್ಳೆ ಕಾರ್ಯಾಚರಣೆಗೆ ತೆರಳಿದ್ದರು. ಮಧ್ಯರಾತ್ರಿ 12.50ರ ಸುಮಾರಿಗೆ ಜಿಶಾನ್ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಆತನನ್ನು ತಡೆದು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗುತ್ತಿದ್ದಂತೆ ಆತ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನ್ನ ಬಳಿಯಿದ್ದ ಮಾರಕಾಸ್ತ್ರದಿಂದ ಪೊಲೀಸ್ ಸಿಬ್ಬಂದಿ ಸಂದೀಪ್ ಕಾಂಬ್ಳೆ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪಿಎಸ್‌ಐ ಸಚಿನ್ ಅವರ ಮೇಲೂ ದಾಳಿ ಮಾಡಲು ಮುಂದಾದಾಗ ಪರಿಸ್ಥಿತಿ ಗಂಭೀರವಾಗಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್‌ಐ ಸಚಿನ್ ಅವರು ಜಿಶಾನ್‌ನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನ ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಸಂದೀಪ್ ಕಾಂಬ್ಳೆ ಹಾಗೂ ಗುಂಡೇಟಿನಿಂದ ಗಾಯಗೊಂಡ ಜಿಶಾನ್ ಇಬ್ಬರನ್ನೂ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಬಳಿ ಇದ್ದ ಮಾರಕಾಸ್ತ್ರ, ಆತನ ಚಲನವಲನ ಹಾಗೂ ಹಿಂದಿನ ಅಪರಾಧ ಹಿನ್ನೆಲೆ ಸೇರಿದಂತೆ ಪ್ರಕರಣದ ವಿವಿಧ ಆಯಾಮಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಯ ವೇಳೆ ಆರೋಪಿ ಪೊಲೀಸರ ಮೇಲೆ ದಾಳಿ ನಡೆಸಿರುವ ಕುರಿತು ಹೆಚ್ಚಿನ ಮಾಹಿತಿಯನ್ನೂ ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.

