Dailyhunt Logo
  • Light mode
    Follow system
    Dark mode
    • Play Story
    • App Story
H VISHWANATH: 'ನೊಂದ ಗಂಡಸರಿಗೆ ನ್ಯಾಯ..' ಪುರುಷ ಆಯೋಗ ರಚನೆಯಾಗಲಿ ಎಂದ ವಿಶ್ವನಾಥ್

H VISHWANATH: 'ನೊಂದ ಗಂಡಸರಿಗೆ ನ್ಯಾಯ..' ಪುರುಷ ಆಯೋಗ ರಚನೆಯಾಗಲಿ ಎಂದ ವಿಶ್ವನಾಥ್

ಮೈಸೂರು: ಸಮಾಜದಲ್ಲಿ ಮಹಿಳೆಯರಂತೆ ಪುರುಷರೂ ಸಹ ಹಲವು ರೀತಿಯ ದೌರ್ಜನ್ಯ ಹಾಗೂ ಶೋಷಣೆಗಳಿಗೆ ಒಳಗಾಗುತ್ತಿದ್ದಾರೆ. ಗಂಡು ಮಕ್ಕಳ ಹಿತ ಕಾಯಲು ಮತ್ತು ಅವರಿಗೆ ಸಮಾನ ನ್ಯಾಯ ಒದಗಿಸಲು ರಾಜ್ಯದಲ್ಲಿ ತಕ್ಷಣವೇ ಕಾನೂನುಬದ್ಧ ಪುರುಷ ಆಯೋಗ (Menʼs Commission) ರಚನೆಯಾಗಬೇಕು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H Vishwanath) ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿವಿಧ ಪದಾಧಿಕಾರಿಗಳು, ಪುರುಷರ ರಕ್ಷಣೆಗಾಗಿ ಕೈಗೊಂಡಿರುವ ಹೊಸ ಸಂಘಟನಾತ್ಮಕ ನಿರ್ಧಾರಗಳ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ.

'ಮಹಿಳಾ ಠಾಣೆಯಲ್ಲೂ ಪುರುಷರ ಶೋಷಣೆ ನಡೆಯುತ್ತದೆ'
ಪುರುಷರ ಸದ್ಯದ ಸಾಮಾಜಿಕ ಸ್ಥಿತಿಗತಿಯನ್ನು ಉಲ್ಲೇಖಿಸಿದ ಹೆಚ್.ವಿಶ್ವನಾಥ್, ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಂದ ಗಂಡು ಮಕ್ಕಳು ಶೋಷಣೆಗೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ. ಮಹಿಳಾ ಪೊಲೀಸ್ ಠಾಣೆಗಳಲ್ಲೇ ಪುರುಷರ ಮೇಲೆ ದೌರ್ಜನ್ಯ ಹಾಗೂ ಶೋಷಣೆ ನಡೆಯುವ ಉದಾಹರಣೆಗಳು ಉಂಟು. ಸದ್ಯ ಪೊಲೀಸ್ ಠಾಣೆಗಳಲ್ಲಿ ಪುರುಷರು ನೀಡುವ ದೂರುಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷರಿಗೂ ಕಾನೂನಾತ್ಮಕ ಸಂಸ್ಥೆಯ ಅಗತ್ಯವಿದ್ದು, ಇದಕ್ಕಾಗಿ ಸರ್ಕಾರ ಕಾನೂನಿಗೆ ಅಗತ್ಯ ತಿದ್ದುಪಡಿ ತಂದು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ಪುರುಷರ ಮೇಲಿನ ದೌರ್ಜನ್ಯ ತಡೆಯುವ ಉದ್ದೇಶದಿಂದಲೇ ತಾವು ಪುರುಷ ರಕ್ಷಣಾ ವೇದಿಕೆಯನ್ನು ಸ್ಥಾಪಿಸಿರುವುದಾಗಿ ತಿಳಿಸಿದರು.

ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಟ್ರಸ್ಟ್ ಸ್ಥಾಪನೆ
ಮಹಿಳೆಯರಿಂದ ಸುಳ್ಳು ದೂರು ಹಾಗೂ ಕಾನೂನು ದುರ್ಬಳಕೆಯ ಮೂಲಕ ನೊಂದಿರುವ ಪುರುಷರ ನೆರವಿಗಾಗಿಯೇ ಪ್ರತ್ಯೇಕವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ ಎಂದು ಹೆಚ್.ವಿಶ್ವನಾಥ್ ಪ್ರಕಟಿಸಿದರು. ಈ ನೂತನ ಟ್ರಸ್ಟ್‌ನ ಅಧಿಕೃತ ಉದ್ಘಾಟನಾ ಸಮಾರಂಭವು ಕೆಲವೇ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬೃಹತ್ ಮಟ್ಟದಲ್ಲಿ ನಡೆಯಲಿದೆ.

ಟ್ರಸ್ಟ್‌ನ ಪದಾಧಿಕಾರಿಗಳ ನೇಮಕ ಮತ್ತು ಉದ್ದೇಶ
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷೆ ರಜನಿ ರಾಜ್ ಮಾತನಾಡಿ, ಈ ನೂತನ ಟ್ರಸ್ಟ್‌ನ ಗೌರವಾಧ್ಯಕ್ಷರಾಗಿ ಎಂಎಲ್‌ಸಿ ಎ.ಹೆಚ್. ವಿಶ್ವನಾಥ್ ಹಾಗೂ ರಾಷ್ಟ್ರೀಯ ಅಧ್ಯಕ್ಷರಾಗಿ ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರನ್ನು ಸರ್ವಾನುಮತದಿಂದ ನೇಮಕ ಮಾಡಲಾಗಿದೆ. ಮಹಿಳೆಯರಿಂದ ವಿವಿಧ ಆಯಾಮಗಳಲ್ಲಿ ಬಾಧಿತರಾಗುವ, ಸುಳ್ಳು ಕೇಸುಗಳಿಗೆ ಸಿಲುಕುವ ಪುರುಷರಿಗೆ ನ್ಯಾಯ ಕೊಡಿಸಲು ನಮ್ಮ ಟ್ರಸ್ಟ್ ನಿರಂತರವಾಗಿ ಹೋರಾಡಲಿದೆ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ನಮ್ಮ ಟ್ರಸ್ಟ್‌ನಲ್ಲಿ ಹಲವು ಹಾಲಿ ಸರ್ಕಾರಿ ಅಧಿಕಾರಿಗಳು, ನಿವೃತ್ತ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಟ್ರಸ್ಟ್ ನೋಂದಣಿಯಾಗಿ ಪ್ರಚಾರ ಸಿಗುತ್ತಿದ್ದಂತೆ ನಮಗೆ ರಾಜ್ಯದ ವಿವಿಧೆಡೆಗಳಿಂದ ಸಾಕಷ್ಟು ದೂರುಗಳು ಹರಿದು ಬರುತ್ತಿವೆ. ಪುರುಷರಿಗೂ ಸಮಾಜದಲ್ಲಿ ಸಮಾನ ನ್ಯಾಯ ಸಿಗಬೇಕು ಎಂಬುದೇ ನಮ್ಮ ಅಂತಿಮ ಧ್ಯೇಯ ಎಂದು ರಜನಿ ರಾಜ್ ತಿಳಿಸಿದರು.

ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಟ್ರಸ್ಟ್ ಕಚೇರಿ ಆರಂಭ
ಟ್ರಸ್ಟ್‌ನ ಇಲಾಖಾವಾರು ಗುರಿಗಳ ಕುರಿತು ಮಾತನಾಡಿದ ನಿವೃತ್ತ ಅಧಿಕಾರಿ ಎಂ.ಎನ್. ನಟರಾಜ್, ಪುರುಷರ ಮೇಲಿನ ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಮೊದಲ ಹಂತದಲ್ಲಿ ಮಾತುಕತೆಯ ಮೂಲಕ ಮತ್ತು ಎರಡನೇ ಹಂತದಲ್ಲಿ ಸೂಕ್ತ ಕಾನೂನಿನ ನೆರವಿನ ಮೂಲಕ ಬಗೆಹರಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಟ್ರಸ್ಟ್‌ನ ಅಧಿಕೃತ ಕಚೇರಿಗಳನ್ನು ಸ್ಥಾಪಿಸಲಾಗುವುದು. ಪುರುಷರ ವಿರುದ್ಧ ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸಂಪೂರ್ಣವಾಗಿ ನಿಲ್ಲಬೇಕಾಗಿದ್ದು, ಎಲ್ಲೇ ದೌರ್ಜನ್ಯ ನಡೆದರೂ ನಮ್ಮ ಸಂಘಟನೆ ಬೀದಿಗಿಳಿದು ಪ್ರತಿಭಟಿಸಲಿದೆ ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Navasamaja