ಹಾಸನ: ಹಾಸನದ ಹಾಸನಾಂಬಾ ದೇವಾಲಯದಲ್ಲಿ (Hasanamba Temple) ನಡೆಯಲಿರುವ ಪ್ರಸಿದ್ಧ ಹಾಸನಾಂಬ ಜಾತ್ರಾ ಮಹೋತ್ಸವದ (Hasanamba Jatra Mahotsava) ಖರ್ಚು-ವೆಚ್ಚಗಳ ಬಗ್ಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ (HD Revanna) ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಹಾಸನಾಂಬ ಜಾತ್ರೆಯು ಅದ್ದೂರಿಯಾಗಿ ನಡೆಯಲಿದೆ. ಆದರೆ ಈ ಬಾರಿಯ ಜಾತ್ರೆಗೆ ಅತಿಹೆಚ್ಚು ಹಣ ಪೋಲು ಮಾಡಲಾಗುತ್ತಿದೆ ಎಂದು ರೇವಣ್ಣ ಕಿಡಿಕಾರಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಕೇವಲ ಹೂವಿನ ಅಲಂಕಾರಕ್ಕೇ ಬರೋಬ್ಬರಿ 90 ಲಕ್ಷ ರೂಪಾಯಿ ಖರ್ಚು ಮಾಡುತ್ತಿರುವುದನ್ನು ಅವರು ಪ್ರಶ್ನಿಸಿದ್ದು, ಭಕ್ತರಿಗೆ ಮೊದಲೇ ತಿಳಿಸಿದ್ದರೆ ಅವರೇ ಸ್ವಯಂಪ್ರೇರಿತರಾಗಿ ಅಲಂಕಾರ ಮಾಡಿಸುತ್ತಿದ್ದರು ಎಂದಿದ್ದಾರೆ. ಬರಗಾಲದ ಈ ಸಂಕಷ್ಟದ ಕಾಲದಲ್ಲಿ ದೇವಸ್ಥಾನದ ದುಡ್ಡನ್ನು ತೆಗೆದುಕೊಂಡು ಫಲಪುಷ್ಪ ಪ್ರದರ್ಶನ ಮಾಡುವ ಅಗತ್ಯವಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಕಂಟ್ರೋಲ್ ರೂಮ್ ನಿರ್ವಹಣೆಗೆ 50 ಲಕ್ಷ ರೂ. ಹಾಗೂ ಡಾನ್ಸ್ ಕಾರ್ಯಕ್ರಮವೊಂದಕ್ಕೆ ಬರೋಬ್ಬರಿ 80 ಲಕ್ಷ ರೂ. ಖರ್ಚು ಮಾಡುತ್ತಿರುವುದಕ್ಕೆ ಅವರು ತೀವ್ರ ಆಕ್ಷೇಪ ಸೂಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಹೊಗಳಿಕೊಳ್ಳಲು ಇಂತಹ ಅದ್ದೂರಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆಯೇ ಎಂದು ಪ್ರಶ್ನಿಸಿರುವ ಅವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಬಂದು ಹೋಗಲು ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜಿಲ್ಲಾಡಳಿತವು ಲ್ಯಾಂಡ್ ಮಾಫಿಯಾದವರ ಜೊತೆ ಶಾಮೀಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ರೇವಣ್ಣ, ರೈತರು ಸಂಕಷ್ಟದಲ್ಲಿದ್ದರೂ ಜಿಲ್ಲಾಡಳಿತಕ್ಕೆ ದುಂದುವೆಚ್ಚ ಮಾಡಲು ಮಾತ್ರ ಹಣವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

