Dailyhunt Logo
  • Light mode
    Follow system
    Dark mode
    • Play Story
    • App Story
HD DEVE GOWDA: ದೇಶದ ಪ್ರಧಾನಿ ಪಟ್ಟ ಅಲಂಕರಿಸಿದ ಮೊದಲ ಕನ್ನಡಿಗ- ಎಚ್.ಡಿ. ದೇವೇಗೌಡರ ಐತಿಹಾಸಿಕ ಪಯಣಕ್ಕೆ 30ರ ಸಂಭ್ರಮ

HD DEVE GOWDA: ದೇಶದ ಪ್ರಧಾನಿ ಪಟ್ಟ ಅಲಂಕರಿಸಿದ ಮೊದಲ ಕನ್ನಡಿಗ- ಎಚ್.ಡಿ. ದೇವೇಗೌಡರ ಐತಿಹಾಸಿಕ ಪಯಣಕ್ಕೆ 30ರ ಸಂಭ್ರಮ

Navasamaja.com 2 weeks ago

ಬೆಂಗಳೂರು: ದೇಶದ ರಾಜಕಾರಣದಲ್ಲಿ (Indian Politics) 'ಮಣ್ಣಿನ ಮಗ' ಎಂದೇ ಖ್ಯಾತರಾದ ಹರದನಹಳ್ಳಿ ದೊಡ್ಡಗೌಡ ದೇವೇಗೌಡರು (HD Deve Gowda) ಭಾರತದ ಪ್ರಧಾನಮಂತ್ರಿಯಾಗಿ (PM) ಅಧಿಕಾರ ಸ್ವೀಕರಿಸಿ ಇಂದಿಗೆ (2026ರ ಜೂನ್ 1, ಸೋಮವಾರ) ಸರಿಯಾಗಿ 30 ವರ್ಷಗಳು ತುಂಬಿವೆ.

ಹಾಸನ (Hassan) ಜಿಲ್ಲೆಯ ಹರದನಹಳ್ಳಿಯ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ, ಗ್ರಾಮ ಪಂಚಾಯಿತಿ ಮಟ್ಟದ ರಾಜಕಾರಣದಿಂದ ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯವರೆಗೆ ಬೆಳೆದ ಅವರ ರಾಜಕೀಯ ಪಯಣ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಅಪರೂಪದ ಮೈಲಿಗಲ್ಲಾಗಿದೆ.

ಅದು 1996ರ ಲೋಕಸಭಾ ಚುನಾವಣೆಯ ಸಮಯ. ದೇಶದ ರಾಜಕೀಯದಲ್ಲಿ ತೀವ್ರ ಅನಿಶ್ಚಿತತೆ ನಿರ್ಮಾಣವಾಗಿತ್ತು. ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ಎದುರಾಗಿತ್ತು. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಪರವಾಗಿ ಅಟಲ್ ಬಿಹಾರಿ ವಾಜಪೇಯಿ ಅವರು ಸರ್ಕಾರ ರಚಿಸಿದರಾದರೂ, ಬಹುಮತ ಸಾಬೀತುಪಡಿಸಲಾಗದೆ ಕೇವಲ 13 ದಿನಗಳಲ್ಲಿ ಆ ಸರ್ಕಾರ ಪತನಗೊಂಡಿತು.

ದೇಶ ಮತ್ತೊಮ್ಮೆ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದ ಈ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳು ಒಂದಾಗಿ 'ಯುನೈಟೆಡ್ ಫ್ರಂಟ್' (ಸಂಯುಕ್ತ ರಂಗ) ಮೈತ್ರಿಕೂಟವನ್ನು ರಚಿಸಿಕೊಂಡವು. ಈ ಮೈತ್ರಿಕೂಟಕ್ಕೆ ಕಾಂಗ್ರೆಸ್ ಪಕ್ಷವು ಹೊರಗಿನಿಂದ ಬೆಂಬಲ ನೀಡಲು ಮುಂದೆ ಬಂದಾಗ, ದೇಶವನ್ನು ಮುನ್ನಡೆಸಬಲ್ಲ ಸರ್ವಾನುಮತದ ನಾಯಕ ಯಾರು ಎಂಬ ಚರ್ಚೆ ಆರಂಭವಾಯಿತು. ಆಗ ಎಲ್ಲರ ಕಣ್ಣು ಬಿದ್ದಿದ್ದು ಅಂದಿನ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರ ಮೇಲೆ.

ಪ್ರಾದೇಶಿಕ ನಾಯಕರ ಒಮ್ಮತದ ಅಭ್ಯರ್ಥಿಯಾಗಿ ಪ್ರಧಾನಿ ಪಟ್ಟ ಅನಿರೀಕ್ಷಿತವಾಗಿ ಒಲಿದುಬರುತ್ತಿದ್ದಂತೆ, ದೇವೇಗೌಡರು 1996ರ ಮೇ 30ರಂದು ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ದಿಲ್ಲಿಗೆ ಪಯಣ ಬೆಳೆಸಿದರು. ತದನಂತರ, ಜೂನ್ 1ರಂದು ಅವರು ಭಾರತದ 11ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆ ಮೂಲಕ ದಕ್ಷಿಣ ಭಾರತದಿಂದ, ಅದೂ ಕರ್ನಾಟಕದಿಂದ ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 1997ರ ಏಪ್ರಿಲ್ 21ರವರೆಗೆ ಸುಮಾರು 10 ತಿಂಗಳ ಕಾಲ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.

ತಮ್ಮ ಅಲ್ಪಾವಧಿಯ ಆಡಳಿತದಲ್ಲೂ ದೇವೇಗೌಡರು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿ, ಕಾಶ್ಮೀರ ಸಮಸ್ಯೆ ನಿವಾರಣೆಗೆ ಶ್ರಮಿಸಿದ ಹಾಗೂ ಇಂದಿನ ದೆಹಲಿ ಮೆಟ್ರೋ ಯೋಜನೆಗೆ ಹಸಿರು ನಿಶಾನೆ ತೋರಿದ ಕೀರ್ತಿ ಗೌಡರಿಗೆ ಸಲ್ಲುತ್ತದೆ. ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರವೂ ಅವರು ರಾಜಕೀಯವಾಗಿ ಅನೇಕ ಏಳುಬೀಳುಗಳನ್ನು, ಸವಾಲುಗಳನ್ನು ಎದುರಿಸಿದ್ದಾರೆ. ಇಂದು 94ರ ಇಳಿವಯಸ್ಸಿನಲ್ಲೂ ಧೃತಿಗೆಡದೆ, ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವುದು ಅವರ ರಾಜಕೀಯ ಚಾಣಾಕ್ಷತೆ ಮತ್ತು ದಣಿವರಿಯದ ಜನಸೇವೆಯ ಮನೋಭಾವಕ್ಕೆ ಸಾಕ್ಷಿಯಾಗಿದೆ. ದೇಶದ ಪ್ರಧಾನಿಯಾಗಿ ಕನ್ನಡಿಗನೊಬ್ಬ ಇತಿಹಾಸ ಬರೆದ ಈ ದಿನವನ್ನು ರಾಜ್ಯದ ಜನತೆ ಇಂದಿಗೂ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja