Dailyhunt Logo
  • Light mode
    Follow system
    Dark mode
    • Play Story
    • App Story
HD DEVE GOWDA: ಕನ್ನಡಿಗನ ಪ್ರಧಾನಿ ಪಟ್ಟಕ್ಕೆ 30 ವರ್ಷಗಳ ಸಂಭ್ರಮ, 'ಮಣ್ಣಿನ ಮಗ' ದೇವೇಗೌಡರ ಐತಿಹಾಸಿಕ ರಾಜಕೀಯ ಹಾದಿ ಹೇಗಿತ್ತು?

HD DEVE GOWDA: ಕನ್ನಡಿಗನ ಪ್ರಧಾನಿ ಪಟ್ಟಕ್ಕೆ 30 ವರ್ಷಗಳ ಸಂಭ್ರಮ, 'ಮಣ್ಣಿನ ಮಗ' ದೇವೇಗೌಡರ ಐತಿಹಾಸಿಕ ರಾಜಕೀಯ ಹಾದಿ ಹೇಗಿತ್ತು?

Navasamaja.com 1 week ago

ಬೆಂಗಳೂರು: ಪ್ರಧಾನಮಂತ್ರಿ (Prime Minister) ಹುದ್ದೆಯನ್ನು ಅಲಂಕರಿಸಿದ ಏಕೈಕ ಕನ್ನಡಿಗ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು (H.D Deve Gowda) ದೇಶದ ಪ್ರಧಾನಿಯಾಗಿ ಮೇ 31ಕ್ಕೆ ಭರ್ತಿ 30 ವರ್ಷಗಳು ಪೂರ್ಣಗೊಳ್ಳಲಿವೆ.

ಪ್ರಸ್ತುತ 93 ವಸಂತಗಳನ್ನು ಪೂರ್ಣಗೊಳಿಸಿ 94ನೇ ವಸಂತಕ್ಕೆ ಪಾದಾರ್ಪಣೆ ಮಾಡಿರುವ ಗೌಡರು, ಇಂದಿಗೂ ಸಕ್ರಿಯ ರಾಜಕಾರಣದಲ್ಲಿ(Politics) ತೊಡಗಿಸಿಕೊಂಡಿರುವುದು ಅವರ ಅದಮ್ಯ ಇಚ್ಛಾಶಕ್ತಿಗೆ ಸಾಕ್ಷಿಯಾಗಿದೆ.

1996ರ ಮೇ 31ರ ವೇಳೆಗೆ ದೇಶದ ರಾಜಕೀಯ ಇತಿಹಾಸದಲ್ಲೇ ಅತಿ ದೊಡ್ಡ ತಿರುವು ಪಡೆದುಕೊಂಡಿತ್ತು. ಜೂನ್ 1ರಂದು ಭಾರತದ 11ನೇ ಪ್ರಧಾನಮಂತ್ರಿಯಾಗಿ ದೇವೇಗೌಡರು ಪ್ರಮಾಣ ವಚನ ಸ್ವೀಕರಿಸಿದ್ದರು. ತಾವೊಬ್ಬ ಮಣ್ಣಿನ ಮಗ ಎಂಬುದನ್ನು ದೆಹಲಿಯ ದರ್ಬಾರ್‌ನಲ್ಲೂ ಸಾಬೀತುಪಡಿಸಿದ ಅವರು 11 ತಿಂಗಳುಗಳ ಕಾಲ ಕಳಂಕರಹಿತ ಆಡಳಿತ ನಡೆಸಿದ್ದರು. ಆದರೆ, ತೃತೀಯ ರಂಗಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ಪಕ್ಷ ದಿಢೀರ್ ಆಗಿ ವಾಪಸ್ ಪಡೆದ ಕಾರಣ, ಲೋಕಸಭೆಯಲ್ಲಿ ಬಹುಮತ ಸಾಬೀತಾಗದೆ 1997ರ ಏಪ್ರಿಲ್ 21ರಂದು ಅವರು ಪ್ರಧಾನಿ ಹುದ್ದೆಯಿಂದ ನಿರ್ಗಮಿಸಬೇಕಾಯಿತು.

ಬಯಸದೇ ಬಂದ ಪ್ರಧಾನಿ ಭಾಗ್ಯ
1996ರ ಮೇ ತಿಂಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ದೇವೇಗೌಡರು ತಾವಾಗಿಯೇ ಪ್ರಧಾನಿ ಹುದ್ದೆಯನ್ನು ಬಯಸಿರಲಿಲ್ಲ. ಆದರೆ, ಕೇಂದ್ರದಲ್ಲಿ ಉಂಟಾದ ರಾಜಕೀಯ ಅಸ್ಥಿರತೆಯ ನಡುವೆ ತೃತೀಯ ರಂಗದ ನಾಯಕತ್ವ ವಹಿಸುವ ಮತ್ತು ಪ್ರಧಾನಿಯಾಗುವ ಅಪರೂಪದ ಅವಕಾಶ ಅವರಿಗೆ ಒದಗಿಬಂತು. ಈ ಜವಾಬ್ದಾರಿ ವಹಿಸಿಕೊಳ್ಳಲು ಅವರು 1996ರ ಮೇ 30ರಂದು ತಮ್ಮ ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದರು.

ಪ್ರಧಾನಿಯಾಗಿದ್ದ ಅಲ್ಪಾವಧಿಯಲ್ಲೇ ಅವರು ದೇಶದ ರೈತ ಸಮುದಾಯಕ್ಕೆ ನೀಡಿದ ತ್ವರಿತ ನೀರಾವರಿ ಯೋಜನೆ ಭಾರಿ ಜನಪ್ರಿಯತೆ ತಂದುಕೊಟ್ಟಿತು. ಅದಕ್ಕೂ ಮುನ್ನ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಅವರು ಜಾರಿಗೆ ತಂದಿದ್ದ ಮಹಿಳಾ ಮೀಸಲಾತಿ ಇಡೀ ದೇಶಕ್ಕೇ ಮಾದರಿಯಾಯಿತು ಮತ್ತು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಬಿಲ್ ತರಲು ಅಡಿಪಾಯ ಹಾಕಿತು.

ಹಳ್ಳಿಯ ಹಿನ್ನೆಲೆಯಿಂದ ದಿಲ್ಲಿಯವರೆಗೆ
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಮಧ್ಯಮ ವರ್ಗದ ಕೃಷಿಕ ಕುಟುಂಬದಲ್ಲಿ 1933ರ ಮೇ 18ರಂದು ಜನಿಸಿದ ದೇವೇಗೌಡರು ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಪದವೀಧರರು. ಕೇವಲ 20ನೇ ವಯಸ್ಸಿನಲ್ಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿದ ಅವರು, 1953 ರಿಂದ 1962ರವರೆಗೆ ಕಾಂಗ್ರೆಸ್‌ನಲ್ಲಿದ್ದರು. ರೈತರ ಕಷ್ಟಗಳನ್ನು ಹತ್ತಿರದಿಂದ ಕಂಡಿದ್ದ ಗೌಡರು ಬಡವರು, ವಂಚಿತರು ಹಾಗೂ ದುರ್ಬಲ ವರ್ಗದವರ ಪರವಾಗಿ ಹೋರಾಟಗಾರನಾಗುವುದಾಗಿ ಘೋಷಿಸಿಕೊಂಡಿದ್ದರು. ಆಂಜನೇಯ ಸಹಕಾರ ಸಂಘದ ಅಧ್ಯಕ್ಷರಾಗಿ, ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ತಳಮಟ್ಟದಿಂದ ಬೆಳೆದ ಅವರು, ಕೇವಲ 28ನೇ ವಯಸ್ಸಿನಲ್ಲಿ (1962) ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ತಮ್ಮ ಚುರುಕಿನ ಮತ್ತು ತರ್ಕಬದ್ಧ ಭಾಷಣಗಳಿಂದ ಸದನದಲ್ಲಿ ಎಲ್ಲರ ಗಮನ ಸೆಳೆದ ಅವರು ಹೊಳೆನರಸೀಪುರ ಕ್ಷೇತ್ರದಿಂದ ಸತತ 3 ಬಾರಿ ಶಾಸಕರಾಗಿ ಆಯ್ಕೆಯಾದರು.

ವಿರೋಧ ಪಕ್ಷದ ನಾಯಕನಾಗಿ, ಜೈಲು ವಾಸದ ದಿನಗಳು
1972 ರಿಂದ 1977ರ ಅವಧಿಯಲ್ಲಿ ಎರಡು ಬಾರಿ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಕಲಾಪದ ಘನತೆಯನ್ನು ಎತ್ತಿಹಿಡಿದರು. ತದನಂತರ ನೀರಾವರಿ ಸಚಿವರಾಗಿದ್ದಾಗ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದರಾದರೂ, ನೀರಾವರಿ ಕ್ಷೇತ್ರಕ್ಕೆ ಸರ್ಕಾರ ಸಾಕಷ್ಟು ಹಣ ಮಂಜೂರು ಮಾಡದಿದ್ದನ್ನು ಪ್ರತಿಭಟಿಸಿ 1987ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ ಸಿದ್ಧಾಂತವನ್ನು ಎತ್ತಿಹಿಡಿದರು. 1975-76ರ ತುರ್ತು ಪರಿಸ್ಥಿತಿಯ (Emergency) ದಿನಗಳಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಜೈಲು ವಾಸ ಅನುಭವಿಸಿದರು. ಕಾರಾಗೃಹದಲ್ಲಿದ್ದಾಗ ಅವರು ನಿರಂತರವಾಗಿ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಸಮೃದ್ಧಗೊಳಿಸಿಕೊಂಡರು. ಅಲ್ಲಿ ದೇಶದ ಇತರ ಮುತ್ಸದ್ದಿ ರಾಜಕಾರಣಿಗಳ ಒಡನಾಟ ಸಿಕ್ಕಿದ್ದರಿಂದ ಅವರು ಮತ್ತಷ್ಟು ಸದೃಢ ನಾಯಕನಾಗಿ ಹೊರಹೊಮ್ಮಿದರು.

ಕರ್ನಾಟಕದ 14ನೇ ಸಿಎಂ
1991ರಲ್ಲಿ ಹಾಸನ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದ ಗೌಡರು, ಸಂಸತ್ ಭವನದಲ್ಲಿ ದೇಶದ ಕೃಷಿಕರ ಬವಣೆ ಮತ್ತು ಸಂಕಷ್ಟಗಳ ಮೇಲೆ ಬೆಳಕು ಚೆಲ್ಲಿ ರೈತರ ಧ್ವನಿಯಾಗಿ ಗುರುತಿಸಿಕೊಂಡರು. ತದನಂತರ 1994ರಲ್ಲಿ ರಾಜ್ಯ ಜನತಾದಳದ ಅಧ್ಯಕ್ಷರಾಗಿ ಇಡೀ ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸಿ, 115 ಸ್ಥಾನಗಳ ಭರ್ಜರಿ ಬಹುಮತದೊಂದಿಗೆ ಜನತಾದಳ ಅಧಿಕಾರಕ್ಕೆ ಬರಲು ಕಾರಣರಾದರು. 1994ರ ಡಿಸೆಂಬರ್ 11ರಂದು ರಾಮನಗರ ಕ್ಷೇತ್ರದಿಂದ ಗೆದ್ದು ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿದ್ದಾಗ ಇಡೀ ದೇಶವೇ ಬೆಚ್ಚಿಬಿದ್ದಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದಕ್ಕೆ ಅತ್ಯಂತ ಶಾಂತಿಯುತವಾಗಿ ಪರಿಹಾರ ಕಂಡುಕೊಂಡಿದ್ದು ಅವರ ಆಡಳಿತ ಚಾಣಾಕ್ಷತೆಗೆ ಸಾಕ್ಷಿ.

1995ರಲ್ಲಿ ಸ್ವಿಟ್ಜರ್ಲೆಂಡ್‌ಗೆ ಪ್ರವಾಸ ಕೈಗೊಂಡು ಅಂತರರಾಷ್ಟ್ರೀಯ ಆರ್ಥಿಕ ತಜ್ಞರ ಸಮಾವೇಶದಲ್ಲಿ ಭಾಗವಹಿಸಿದ್ದರು. ಅಲ್ಲದೆ, ಯುರೋಪ್, ಮಧ್ಯಪ್ರಾಚ್ಯ ಹಾಗೂ ಸಿಂಗಾಪುರ ರಾಷ್ಟ್ರಗಳಿಗೆ ಭೇಟಿ ನೀಡಿ ಜಾಗತಿಕ ಉದ್ಯಮಿಗಳ ಮನವೊಲಿಸುವ ಮೂಲಕ ಕರ್ನಾಟಕಕ್ಕೆ ಅಗತ್ಯವಿದ್ದ ಕೋಟ್ಯಂತರ ರೂಪಾಯಿಗಳ ವಿದೇಶಿ ಬಂಡವಾಳವನ್ನು ಹರಿಸುವಲ್ಲಿ ಯಶಸ್ವಿಯಾಗಿದ್ದರು. 1989ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಪರಾಭವಗೊಂಡು ತಮ್ಮ ಜೀವನದ ಮೊದಲ ಸೋಲಿನ ರುಚಿ ಕಂಡಿದ್ದ ಗೌಡರು, ಅದಕ್ಕೆ ಎದೆಗುಂದದೆ ಶಾಸನಸಭೆಯ ಗ್ರಂಥಾಲಯದಲ್ಲಿ ದಿನಗಟ್ಟಲೆ ಕುಳಿತು ಪುಸ್ತಕಗಳನ್ನು ತಿರುವಿ ಹಾಕುತ್ತಿದ್ದರು. 1971ರಲ್ಲಿ ಇಂದಿರಾ ಗಾಂಧಿ ಅವರ ದೇಶಾದ್ಯಂತ ಇದ್ದ ಭಾರಿ ಅಲೆಯನ್ನು ಎದುರಿಸಿ ಪ್ರತಿಪಕ್ಷದ ಪ್ರಬಲ ನಾಯಕನಾಗಿ ಹೊರಹೊಮ್ಮಿದ ಗೌಡರು, ರಾಜಕೀಯದಲ್ಲಿ ಏಳುಬೀಳುಗಳನ್ನು ಸಮಾನವಾಗಿ ಸ್ವೀಕರಿಸಿದ ಮಹಾನ್ ಮುತ್ಸದ್ದಿ. ಇಂದು ಅವರು ಪ್ರಧಾನಿಯಾಗಿ 30 ವರ್ಷಗಳು ಕಳೆಯುತ್ತಿದ್ದರೂ, ಅವರ ಜನಪರ ಯೋಜನೆಗಳು ಇಂದಿಗೂ ಹಸಿರಾಗಿವೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja