ಬೆಂಗಳೂರು : ಜೆಡಿಎಸ್ (Jds ) ವರಿಷ್ಠ ಎಚ್.ಡಿ. ದೇವೇಗೌಡರನ್ನು (Hd devegowda ) ಮತ್ತೊಂದು ಅವಧಿಗೆ ರಾಜ್ಯಸಭೆಗೆ (Rajyasabha ) ಕಳುಹಿಸುವ ವಿಚಾರದಲ್ಲಿ ಮಿತ್ರಪಕ್ಷ ಬಿಜೆಪಿ (Bjp ) ತೀವ್ರ ಇಕ್ಕಟ್ಟಿಗೆ ಸಿಲುಕಿದೆ.
ವಿಧಾನಸಭೆಯ ಸದ್ಯದ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿಗೆ ಕೇವಲ ಒಂದು ಸ್ಥಾನ ಮಾತ್ರ ಸಿಗಲಿದ್ದು, ಈ ಏಕೈಕ ಸೀಟನ್ನು ದೇವೇಗೌಡರಿಗೆ ಬಿಟ್ಟುಕೊಡಬೇಕೇ ಎಂಬ ಗೊಂದಲ ಸೃಷ್ಟಿಯಾಗಿದೆ.
94 ವರ್ಷದ ಇಳಿ ವಯಸ್ಸಿನಲ್ಲಿರುವ ಗೌಡರನ್ನು ಕರ್ನಾಟಕದಿಂದ ಆಯ್ಕೆ ಮಾಡಿದರೆ, ಭವಿಷ್ಯದಲ್ಲಿ ಆ ಸ್ಥಾನ ತೆರವಾದಾಗ ಮರುಚುನಾವಣೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಸೀಟು ಕೈತಪ್ಪಬಹುದು ಎಂಬ ಆತಂಕ ಕಮಲ ನಾಯಕರನ್ನು ಕಾಡುತ್ತಿದೆ.
ಮತ್ತೊಂದೆಡೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, "ಬಿಜೆಪಿಯವರಿಗೆ ಬೇಕಿದ್ದರೆ ದೇವೇಗೌಡರನ್ನು ಆಯ್ಕೆ ಮಾಡಲಿ" ಎಂದು ಚೆಂಡನ್ನು ಅವರ ಅಂಗಳಕ್ಕೆ ತಳ್ಳಿದ್ದಾರೆ. ಒಂದು ವೇಳೆ ರಾಜ್ಯದಿಂದ ಸ್ಥಾನ ಬಿಟ್ಟುಕೊಡುವುದು ಸಾಧ್ಯವಾಗದಿದ್ದರೆ, ಮಹಾರಾಷ್ಟ್ರದಂತಹ ಬಿಜೆಪಿ ಆಡಳಿತವಿರುವ ಬೇರೆ ರಾಜ್ಯದಿಂದ ಗೌಡರನ್ನು ಕಳುಹಿಸುವ ಪರ್ಯಾಯ ಯೋಜನೆಯೂ ಕೇಳಿಬರುತ್ತಿದೆ. ಸದ್ಯ ಬಿಜೆಪಿಯಿಂದ ಡಿ.ವಿ. ಸದಾನಂದಗೌಡ ಮತ್ತು ಸುಮಲತಾ ಅಂಬರೀಶ್ ರೇಸ್‌ನಲ್ಲಿದ್ದು, ಅಂತಿಮ ತೀರ್ಪನ್ನು ಹೈಕಮಾಂಡ್ ವರಿಷ್ಠರಿಗೆ ಬಿಡಲಾಗಿದೆ.
ದೇವೇಗೌಡರನ್ನು ಇಳಿ ವಯಸ್ಸಿನಲ್ಲಿ ಮತ್ತೆ ಆಯ್ಕೆ ಮಾಡಲು ರಾಜ್ಯ ಮಟ್ಟದ ಕೆಲವು ನಾಯಕರಿಗೆ ಒಲವಿಲ್ಲದಿದ್ದರೂ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಂತಿಮ ನಿರ್ಧಾರ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಸ್ತುತ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಶಾಸಕ ನಿರ್ಮಲಕುಮಾರ್ ಸುರಾನ ಅವರ ಹೆಸರುಗಳು ರಾಜ್ಯಸಭಾ ರೇಸ್‌ನಲ್ಲಿ ಬಲವಾಗಿ ಕೇಳಿಬರುತ್ತಿವೆ. ಇವೆಲ್ಲದರ ನಡುವೆ, ಮಿತ್ರಧರ್ಮ ಕಾಯ್ದುಕೊಳ್ಳುವ ಮತ್ತು ಸ್ವಪಕ್ಷೀಯರನ್ನು ಸಮಾಧಾನಪಡಿಸುವ ಗೊಂದಲದಲ್ಲಿರುವ ರಾಜ್ಯ ನಾಯಕರು, ಅಂತಿಮ ತೀರ್ಪನ್ನು ಹೈಕಮಾಂಡ್ ವರಿಷ್ಠರ ಅಂಗಳಕ್ಕೆ ತಳ್ಳಿದ್ದು ಮುಂದಿನ ಎರಡು ದಿನಗಳಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆಯಿದೆ.

