ಬೆಂಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಪ್ರಧಾನಿ ನರೇಂದ್ರ ಮೋದಿ (PM MODI) ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಹಲವು ಮಹತ್ವದ ರಾಜಕೀಯ ವಿಚಾರಗಳ ಕುರಿತು ಚರ್ಚಿಸಿರುವುದು ಹೊಸ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯ ರಾಜಕಾರಣಕ್ಕೆ (Karnataka Politics) ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮರಳುವ ಸಾಧ್ಯತೆ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಕುರಿತು ಪ್ರಧಾನಿ ಮೋದಿ ಅವರೊಂದಿಗೆ ಕುಮಾರಸ್ವಾಮಿ ಚರ್ಚಿಸಿದ್ದಾರೆ ಎನ್ನಲಾಗಿದೆ. ರಾಜ್ಯ ರಾಜಕಾರಣಕ್ಕೆ ಮರುಪ್ರವೇಶಿಸುವ ವಿಚಾರ ಪ್ರಸ್ತಾಪಿಸಿದ ಸಂದರ್ಭದಲ್ಲಿ, ಸೂಕ್ತ ಸಮಯ ಬಂದಾಗ ಈ ಕುರಿತು ನಿರ್ಧಾರ ಕೈಗೊಳ್ಳೋಣ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ನೈಸ್ ಯೋಜನೆ, ಬಿಡದಿ ಟೌನ್ಶಿಪ್ ಹಾಗೂ ನಾಗೇಂದ್ರ ವಿರುದ್ಧದ ಹೋರಾಟ ಸೇರಿ ಹಲವು ವಿಚಾರಗಳ ಬಗ್ಗೆ ಕುಮಾರಸ್ವಾಮಿ ಪ್ರಧಾನಿ ಎದುರು ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಎನ್ಡಿಎ ಬಲವರ್ಧನೆ ಜೊತೆಗೆ ಉಭಯ ಪಕ್ಷಗಳ ನಾಯಕರ ನಡುವೆ ಸಮನ್ವಯ ಹೆಚ್ಚಿಸಲು ಜಂಟಿ ಹೋರಾಟಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೈತ್ರಿಯತ್ತ ಯುವಕರನ್ನು ಸೆಳೆಯಲು ಕಾರ್ಯತಂತ್ರ ದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ಕುಮಾರಸ್ವಾಮಿ ಅವರ ಪ್ರಧಾನಿ ಮೋದಿ ಭೇಟಿ ರಾಜ್ಯ ರಾಜಕಾರಣದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಅವರು ಮತ್ತೆ ಕರ್ನಾಟಕ ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.

