ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಗುಡುಗಿದ್ದಾರೆ.ಕುಟುಂಬ ರಾಜಕಾರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರೂ ಸಹ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ
ಮಂಡ್ಯ ತಾಲೂಕಿನ ಟಿ.ಎಸ್. ಛತ್ರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರುವ ಮೂಲಕ ಸಿದ್ದರಾಮಯ್ಯ ಅವರೂ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಹೀಗಿರುವಾಗ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಅವರು ಮೊದಲು ತಮ್ಮ ಹಿರಿಯ ಮಗನನ್ನು ರಾಜಕೀಯಕ್ಕೆ ತರಲು ಪ್ರಯತ್ನಿಸಿದರು, ಅವರ ನಿಧನದ ನಂತರ ವೈದ್ಯರಾಗಿದ್ದ ಎರಡನೇ ಮಗನನ್ನು ರಾಜಕಾರಣಕ್ಕೆ ತಂದಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಎರಡು-ಮೂರು ಶಾಸಕರು ಇರುವ ಕುಟುಂಬ ಇದೆ. ನಮ್ಮನ್ನ ದೇವೇಗೌಡರು ಜನರ ಸಮಸ್ಯೆಗಳಿಗೆ ಸ್ಪಂದಿಸಲು ರಾಜಕೀಯಕ್ಕೆ ತಂದರೇ ಹೊರತು ವಸೂಲಿಗಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಮಯದಲ್ಲಿ ಮಂಡ್ಯ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿ ಬಗ್ಗೆ ಮಾತನಾಡಿದ ಸಚಿವರು, ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ARAI ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸುವ ಗುರಿಯಿದೆ ಎಂದು ತಿಳಿಸಿದ್ದಾರೆ. ಈ ಯೋಜನೆಯಿಂದ ಮಂಡ್ಯದಲ್ಲಿ ದೊಡ್ಡ ಮಟ್ಟದ ಟೌನ್‌ಶಿಪ್ ಬೆಳೆಯಲಿದ್ದು, ರಾಜ್ಯ ಸರ್ಕಾರ ಶೀಘ್ರವೇ ಜಾಗವನ್ನು ಅಭಿವೃದ್ಧಿಪಡಿಸಿಕೊಡಬೇಕಿದೆ ಎಂದರು. ಸಿದ್ದರಾಮಯ್ಯ ವರಸೆ ಬದಲಿಸಿದ್ದಾರೆ ಇನ್ನು 2028ರವರೆಗೂ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ವ್ಯಂಗ್ಯವಾಡಿದ ಕುಮಾರಸ್ವಾಮಿ, ಅಧಿಕಾರದ ರುಚಿ ನೋಡಿದ ಮೇಲೆ ಸಿದ್ದರಾಮಯ್ಯ ಅವರು ಈಗ ವರಸೆ ಬದಲಿಸಿದ್ದಾರೆ. ಅವರ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ. ಜಾಗತಿಕ ಯುದ್ಧದ ಭೀತಿ ಮತ್ತು ಇಂಧನ ಬಿಕ್ಕಟ್ಟಿನ ಬಗ್ಗೆ ಸಹ ಈ ಸಮಯದಲ್ಲಿ ಕುಮಾರಸ್ವಾಮಿ ಅವರು ಮಾತನಾಡಿದ್ದು, ಭಾರತವು ಇತರ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಹಾಗಾಗಿ ಸಂಕಷ್ಟದ ಸಮಯದಲ್ಲಿ ಬಹಳ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇಂತಹ ಸ್ಥಿತಿಯಲ್ಲೂ ಕಾಂಗ್ರೆಸ್ ಕೇವಲ ರಾಜಕೀಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

