Dailyhunt Logo
  • Light mode
    Follow system
    Dark mode
    • Play Story
    • App Story
HIGH COURT: 'ಅಧಿಕಾರಸ್ಥರೇ ಭೂಮಿ ನುಂಗಿದರೆ ಹೇಗೆ? ರಾಜ್ಯದ ಮಾಜಿ ಸಚಿವನ ಕೇಸ್​ ತನಿಖೆಗೆ ಹೈಕೋರ್ಟ್‌ ಗ್ರೀನ್ ಸಿಗ್ನಲ್

HIGH COURT: 'ಅಧಿಕಾರಸ್ಥರೇ ಭೂಮಿ ನುಂಗಿದರೆ ಹೇಗೆ? ರಾಜ್ಯದ ಮಾಜಿ ಸಚಿವನ ಕೇಸ್​ ತನಿಖೆಗೆ ಹೈಕೋರ್ಟ್‌ ಗ್ರೀನ್ ಸಿಗ್ನಲ್

Navasamaja.com 3 months ago

ಬೆಂಗಳೂರು: ಸಾಮಾನ್ಯ ನಾಗರಿಕರು ಭೂ ಕಬಳಿಕೆ ಮಾಡುವುದಕ್ಕೂ, ರಾಜಕೀಯ ಅಧಿಕಾರ ಹೊಂದಿದ ವ್ಯಕ್ತಿಗಳು ಮಾಡುವುದಕ್ಕೂ ಗಂಭೀರ ವ್ಯತ್ಯಾಸಗಳಿವೆ. ರಾಜಕೀಯ ಅಧಿಕಾರಸ್ಥರು ಭೂ ಕಬಳಿಕೆಗೆ (LAND GRAB CASE) ಕೈಹಾಕಿದರೆ ಅದು ಇಡೀ ಆಡಳಿತ ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನೇ ಸರ್ವನಾಶ ಮಾಡುತ್ತದೆ ಎಂದು ಕರ್ನಾಟಕ ಹೈಕೋರ್ಟ್ (HIGH COURT) ತೀವ್ರ ಕಳವಳ ವ್ಯಕ್ತಪಡಿಸಿದೆ.

ಚಿಂತಾಮಣಿ ಕ್ಷೇತ್ರದ ಮಾಜಿ ಸಚಿವ ಚೌಡರೆಡ್ಡಿ ಬಿನ್ ಎಂ.ಸಿ. ಆಂಜನೇಯ ರೆಡ್ಡಿ (ಹಾಲಿ ಶಾಸಕ ಹಾಗೂ ಸಚಿವ ಎಂ.ಸಿ. ಸುಧಾಕರ್ ಅವರ ತಂದೆ) ಮತ್ತು ಚಿಂತಾಮಣಿಯ ಮಾಜಿ ಪೌರಾಯುಕ್ತ ಬಿ.ಎಚ್. ನಾರಾಯಣಪ್ಪ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಮಹತ್ವದ ಆದೇಶ ನೀಡಿದೆ. ತಮ್ಮ ವಿರುದ್ಧದ ಲೋಕಾಯುಕ್ತ ಎಫ್‌ಐಆರ್ (FIR) ರದ್ದು ಕೋರಿ ಇಬ್ಬರೂ ಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ತನಿಖೆಗೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್, "ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. ಸಾರ್ವಜನಿಕ ನಂಬಿಕೆಯನ್ನು ಪೋಷಿಸಬೇಕಾದವರೇ ಇಂತಹ ಸಾರ್ವಜನಿಕ ತಪ್ಪುಗಳ ಫಲಾನುಭವಿಗಳಾಗಿರುವುದು ಆಘಾತಕಾರಿ ಸಂಗತಿ. ಈ ಹಂತದಲ್ಲಿ ತನಿಖೆಯನ್ನು ತಡೆಯುವುದು 'ಸತ್ಯವು ಕೋಣೆಯನ್ನು ಪ್ರವೇಶಿಸುವ ಮೊದಲೇ ಬಾಗಿಲು ಮುಚ್ಚಿದಂತಾಗುತ್ತದೆ'" ಎಂದು ತೀಕ್ಷ್ಣವಾಗಿ ಹೇಳಿದೆ.

ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ಕೂಲಂಕಷ ತನಿಖೆ ಅನಿವಾರ್ಯವಾಗಿದೆ. ಹೀಗಾಗಿ ಆದೇಶದ ಪ್ರತಿ ಸಿಕ್ಕ ದಿನಾಂಕದಿಂದ ಗರಿಷ್ಠ 6 ತಿಂಗಳ ಒಳಗೆ ತನಿಖೆ ಮುಗಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಪ್ರಕರಣದಲ್ಲಿ ಲೋಕಾಯುಕ್ತ ಪರವಾಗಿ ವಕೀಲ ವೆಂಕಟೇಶ ಅರಬಟ್ಟಿ ವಾದ ಮಂಡಿಸಿದ್ದರು.

ಏನಿದು ಗೋಮಾಳ ಜಮೀನು ಹಗರಣ?

ಚಿಂತಾಮಣಿ ತಾಲ್ಲೂಕಿನ ಕನ್ನಂಪಲಿ ಗ್ರಾಮದ ಸರ್ವೇ ನಂಬರ್ 11ರಲ್ಲಿನ 1.19 ಗುಂಟೆ ಹುಲ್ಲುಬನ್ನಿ (ಹುಲ್ಲುಗಾವಲು ಅಥವಾ ಗೋಮಾಳ) ಖರಾಬು ಜಮೀನನ್ನು ಮಾಜಿ ಸಚಿವ ಚೌಡರೆಡ್ಡಿ ಹಾಗೂ ಬಾಲಾಜಿ ರೆಡ್ಡಿ ಅವರಿಗೆ ನಿಯಮಬಾಹಿರವಾಗಿ ಖಾತೆ ಮಾಡಿಸಿಕೊಡಲಾಗಿದೆ. ತದನಂತರ ಒತ್ತುವರಿ ಮಾಡಲಾದ ಈ ಸರ್ಕಾರಿ ಜಮೀನನ್ನು ನಿವೇಶನಗಳಾಗಿ (ಸೈಟ್‌ಗಳು) ವಿಂಗಡಿಸಿ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ.

ಈ ಅಕ್ರಮದ ಕುರಿತಂತೆ ಸೊನ್ನಶೆಟ್ಟಿಹಳ್ಳಿಯ ಆರ್. ವೆಂಕಟರಮಣ ಎಂಬುವವರು ಚೌಡರೆಡ್ಡಿ, ಪೌರಾಯುಕ್ತ ನಾರಾಯಣಪ್ಪ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ 2016ರ ಏಪ್ರಿಲ್ 24ರಂದು ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ದೂರು ನೀಡಿದ್ದರು. ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಈ ಒತ್ತುವರಿಗೆ ಸಾಥ್ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಇದರ ಆಧಾರದ ಮೇಲೆ ಪ್ರಾಥಮಿಕ ವಿಚಾರಣೆ ನಡೆಸಿ 2017ರ ಮಾರ್ಚ್ 11ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ಎಸಿಬಿ ರದ್ದಾದ ಬಳಿಕ ಈ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿತ್ತು. ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 13(1)(ಸಿ)(ಡಿ) ಹಾಗೂ ಐಪಿಸಿ ಕಲಂ 447, 34ರ ಅಡಿಯಲ್ಲಿ ತನಿಖೆ ಮುಂದುವರಿಸಿದ್ದಾರೆ.

ಅಧಿಕಾರದಲ್ಲಿದ್ದಾಗ ನಡೆದ ಅಕ್ರಮ: ವಿವಾದಿತ ಸರ್ಕಾರಿ ಜಮೀನನ್ನು ಚೌಡರೆಡ್ಡಿ ಮತ್ತು ಅವರ ಮಕ್ಕಳಿಗೆ ಕಾನೂನುಬಾಹಿರವಾಗಿ ನೋಂದಣಿ ಮಾಡಿಸಿಕೊಟ್ಟ ಆರೋಪ ಎದುರಿಸುತ್ತಿರುವ ಬಿ.ಎಚ್. ನಾರಾಯಣಪ್ಪ ಅವರು 1998ರಿಂದ 2000ರವರೆಗೆ ಚಿಂತಾಮಣಿ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಇತ್ತ ಆರೋಪಿ ಚೌಡರೆಡ್ಡಿ ಅವರು 1989ರಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರಭಾವ ಬಳಸಿ ಸರ್ಕಾರಿ ಜಮೀನು ನುಂಗಿದ ಆರೋಪಕ್ಕೆ ಈಗ ಹೈಕೋರ್ಟ್ ತನಿಖೆಯ ಬಿಸಿ ಮುಟ್ಟಿಸಿದೆ.

ಇದನ್ನೂ ಓದಿ: DK SHIVAKUMAR: ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪ್ರಥಮಾಧ್ಯತೆಯಾಗಲಿ: ಸಿಎಂ

Dailyhunt
Disclaimer: This content has not been generated, created or edited by Dailyhunt. Publisher: Navasamaja