Dailyhunt Logo
  • Light mode
    Follow system
    Dark mode
    • Play Story
    • App Story
HIGH COURT: ಭೂಮಿ ಕಳೆದುಕೊಂಡ ರೈತರಿಗೆ ಮಾನಸಿಕ ನಷ್ಟಕ್ಕೂ ಸಿಗಲಿದೆ ಹೆಚ್ಚುವರಿ ಪರಿಹಾರ: ಹೈಕೋರ್ಟ್

HIGH COURT: ಭೂಮಿ ಕಳೆದುಕೊಂಡ ರೈತರಿಗೆ ಮಾನಸಿಕ ನಷ್ಟಕ್ಕೂ ಸಿಗಲಿದೆ ಹೆಚ್ಚುವರಿ ಪರಿಹಾರ: ಹೈಕೋರ್ಟ್

Navasamaja.com 2 weeks ago

ಬೆಂಗಳೂರು: ಅಭಿವೃದ್ಧಿ ಯೋಜನೆಗಳಿಗಾಗಿ (development projects) ಜಮೀನು ಕಳೆದುಕೊಳ್ಳುವ ರೈತರಿಗೆ ಮೂಲ ಪರಿಹಾರದ ಜೊತೆಗೆ ಮಾನಸಿಕ ನಷ್ಟಕ್ಕಾಗಿ (ಸೊಲಾಟಿಯಂ) ಹೆಚ್ಚುವರಿ ಪರಿಹಾರ ಮತ್ತು ಬಡ್ಡಿ ಪಡೆದುಕೊಳ್ಳುವ ಪೂರ್ಣ ಕಾನೂನುಬದ್ಧ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ (High Court) ಸ್ಪಷ್ಟಪಡಿಸಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದ ಜಿ.ಸಿದ್ಧರಾಮಯ್ಯ ಅವರಿಗೆ ಸೇರಿದ ಜಮೀನನ್ನು 2009ರಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದೀಗ ಸಿದ್ದರಾಮಯ್ಯ ಮೃತಪಟ್ಟಿದ್ದು, ಅವರ ವಾರಸುದಾರರು ಕಾನೂನು ಪ್ರಕ್ರಿಯೆ ಮುಂದುವರೆಸಿದ್ದರು.

ಭೂಸ್ವಾಧೀನಕ್ಕಾಗಿ ಪರಿಹಾರ ನೀಡುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಧ್ಯಸ್ಥಗಾರರು ಹೊರಡಿಸಿದ ಆದೇಶ ರದ್ದು ಮಾಡಬೇಕು ಮತ್ತು ಮಾರುಕಟ್ಟೆ ಮೌಲ್ಯದ ಪರಿಹಾರದ ಹೊರತಾಗಿಯೂ ಭಾವನಾತ್ಮಕ ಪರಿಹಾರ ಹಾಗೂ ಸ್ವಾಧೀನದ ದಿನದಿಂದ ಬಡ್ಡಿ ಪಾವತಿ ಮಾಡಬೇಕೆಂದು ಕೋರಿ ಭೂ ಮಾಲೀಕರಾದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದ ದಿ.ಜಿ.ಸಿದ್ದರಾಮಯ್ಯ ಎಂಬವರ ವಾರಸುದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣ ಸಂಬಂಧ ಅರ್ಜಿದಾರರ ಪರವಾಗಿ ವಕೀಲ ಸಂಕೇತ್‌ ಶಂಕರಪ್ಪ ಅಂಬಲಿ ಅವರು ವಕಾಲತ್ತು ವಹಿಸಿದ್ದರು. ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಧಾರವಾಡದ ಹೈಕೋರ್ಟ್ ಪೀಠ ಈ ಅರ್ಜಿ ವಿಚಾರಣೆ ನಡೆಸಿತು.

ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಭೂಮಿ ಕಳೆದುಕೊಂಡವರಿಗೂ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 23(2)ರ ಅಡಿಯಲ್ಲಿ ಮಾನಸಿಕ ನಷ್ಟ ಅಥವಾ ಭಾವನಾತ್ಮಕ ಪರಿಹಾರ ಮತ್ತು ಸೆಕ್ಷನ್ 28ರ ಅಡಿಯಲ್ಲಿ ಬಡ್ಡಿ ಪಡೆಯುವ ಕಾನೂನುಬದ್ಧ ಹಕ್ಕಿದೆ. ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವ ಸಂಬಂಧದ ಆದೇಶಗಳಲ್ಲಿ ಮಾನಸಿಕ ನಷ್ಟಕ್ಕೆ ಪರಿಹಾರ ಹಾಗೂ ಬಡ್ಡಿ ನಮೂದಿಸಿಲ್ಲ ಎಂಬ ಕಾರಣಕ್ಕೆ ಅದನ್ನು ನಿರಾಕರಿಸುವುದು ಸಂವಿಧಾನದ 14 ಮತ್ತು 300-ಎ ವಿಧಿಗಳ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸಂತ್ರಸ್ತ ರೈತರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಭಾವನಾತ್ಮಕ ನಷ್ಟ ಮತ್ತು ಬಡ್ಡಿ ಸೌಲಭ್ಯಗಳನ್ನು ಲೆಕ್ಕಹಾಕಿ ಸೂಕ್ತ ಆದೇಶ ಹೊರಡಿಸಬೇಕು ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗೆ ನ್ಯಾಯಾಲಯ ನಿರ್ದೇಶಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja