ಕಲಬುರಗಿ: ಬೀದರ್(Bidar) ಜಿಲ್ಲೆಯ ಬಸವಕಲ್ಯಾಣದಲ್ಲಿ ಕನ್ನೇರಿ ಶ್ರೀಗಳು(Basavakalyana kanneri Swamiji) ಭಾಗಿಯಾಗಲಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಹೈಕೋರ್ಟ್‌ನ ಕಲಬುರಗಿ(High Court Kalaburagi) ಪೀಠವು ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದೆ.
ಜೂನ್ 28ರಂದು ನಡೆಯಲಿರುವ ಈ ಸಮಾವೇಶದ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಆದೇಶ ಹೊರಡಿಸಿದೆ. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ಪೀಠವು ಈ ಕೆಳಗಿನ ಪ್ರಮುಖ ಷರತ್ತುಗಳನ್ನು ವಿಧಿಸಿ ಸಮಾವೇಶಕ್ಕೆ ಸಮ್ಮತಿ ಸೂಚಿಸಿದೆ ಹೈಕೋರ್ಟ್ ವಿಧಿಸಿರುವ ಪ್ರಮುಖ ಷರತ್ತುಗಳು ಕಾರ್ಯಕ್ರಮದ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಅಥವಾ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವಂತಹ ಯಾವುದೇ ಪ್ರಚೋದನಾಕಾರಿ ಚಟುವಟಿಕೆಗಳು ನಡೆಯಬಾರದು ಎಂದು ಸೂಚಿಸಿದೆ. ಒಂದು ವೇಳೆ ಸಮಾವೇಶದ ಹಿನ್ನೆಲೆಯಲ್ಲಿ ಬಸವಕಲ್ಯಾಣದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಲ್ಲಿ ಅಥವಾ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ, ಅದಕ್ಕೆ ಕಾರ್ಯಕ್ರಮದ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ. ಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದ
ಕಾರ್ಯಕ್ರಮದಲ್ಲಿ ಕನ್ನೇರಿ ಸ್ವಾಮೀಜಿಯವರು ಯಾವುದೇ ರೀತಿಯ ಸಾರ್ವಜನಿಕ ಭಾಷಣ ಮಾಡಬಾರದು ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ, ಅವರು ಭಾಷಣ ಮಾಡದಂತೆ ಕೋರ್ಟ್ ನಿರ್ಬಂಧಿಸಿದೆ. ಈ ಸಮಾವೇಶದಲ್ಲಿ ಗರಿಷ್ಠ 2,500 ಜನರು ಮಾತ್ರ ಭಾಗಿಯಾಗಲು ನ್ಯಾಯಾಲಯವು ಸಮ್ಮತಿ ನೀಡಿದೆ. ನಿಗದಿತ ಸಂಖ್ಯೆಗಿಂತ ಹೆಚ್ಚು ಜನ ಸೇರುವಂತಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನೇರಿ ಸ್ವಾಮೀಜಿ ಮತ್ತು ಆಯೋಜಕರ ಪರವಾಗಿ ಹಿರಿಯ ವಕೀಲ ವೆಂಕಟೇಶ್ ದಳವಾಯಿ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಇನ್ನು ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ (ಎಜಿ) ಶಶಿಕಿರಣ್ ಶೆಟ್ಟಿ ಅವರು ಹಾಜರಾಗಿ, ಪ್ರಾದೇಶಿಕ ಸೂಕ್ಷ್ಮತೆ ಹಾಗೂ ಭದ್ರತೆಯ ದೃಷ್ಟಿಯಿಂದ ಸರ್ಕಾರದ ನಿಲುವನ್ನು ಕೋರ್ಟ್ ಗಮನಕ್ಕೆ ತಂದಿದ್ದರು. ಉಭಯ ಪಕ್ಷಗಳ ಸುದೀರ್ಘ ವಾದ ಆಲಿಸಿದ ನ್ಯಾಯಾಲಯವು, ಕಾರ್ಯಕ್ರಮಕ್ಕೆ ಸಂಪೂರ್ಣ ನಿಷೇಧ ಹೇರುವ ಬದಲಿಗೆ ಈ ಕಟ್ಟುನಿಟ್ಟಿನ ನಿಯಮಗಳ ಅಡಿಯಲ್ಲಿ ಸಮಾವೇಶ ನಡೆಸಲು ಹಸಿರು ನಿಶಾನೆ ತೋರಿದೆ.

