Dailyhunt Logo
  • Light mode
    Follow system
    Dark mode
    • Play Story
    • App Story
HIGH COURT : ಮುಡಾ ನಿವೇಶನ ಜಪ್ತಿ ಪ್ರಕರಣ: ಇ.ಡಿ ಆದೇಶ ರದ್ದುಗೊಳಿಸಿದ ಹೈಕೋರ್ಟ್‌

HIGH COURT : ಮುಡಾ ನಿವೇಶನ ಜಪ್ತಿ ಪ್ರಕರಣ: ಇ.ಡಿ ಆದೇಶ ರದ್ದುಗೊಳಿಸಿದ ಹೈಕೋರ್ಟ್‌

Navasamaja.com 2 days ago

ಬೆಂಗಳೂರು: ಮೈಸೂರು (Mysuru) ನಗರಾಭಿವೃದ್ಧಿ ಪ್ರಾಧಿಕಾರದ (MUDA ) ನಿವೇಶನಗಳ ಜಪ್ತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement directorate ) ಹೊರಡಿಸಿದ್ದ ತಾತ್ಕಾಲಿಕ ಮುಟ್ಟುಗೋಲು ಆದೇಶವನ್ನು ಕರ್ನಾಟಕ ಹೈಕೋರ್ಟ್ (High Court) ರದ್ದುಪಡಿಸಿದೆ.

ಮೈಸೂರಿನ ಕೆ.ಜಿ. ಕೊಪ್ಪಲಿನ 70 ವರ್ಷದ ಜಯಮ್ಮ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು, ಕಳೆದ ವರ್ಷ ಇ.ಡಿ ಹೊರಡಿಸಿದ್ದ ಜಪ್ತಿ ಆದೇಶ ಮತ್ತು ಅದರ ಮುಂದುವರಿದ ಎಲ್ಲಾ ಪ್ರಕ್ರಿಯೆಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (PMLA) ಅಡಿ ಇ.ಡಿ ಅಧಿಕಾರಿಗಳು ಹೊರಡಿಸುವ ಆದೇಶಗಳು ಕೇವಲ ಕಾನೂನಿನ ನಿಯಮಗಳ ಯಾಂತ್ರಿಕ ನಕಲಾಗಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆಸ್ತಿಯನ್ನು ತಕ್ಷಣವೇ ಜಪ್ತಿ ಮಾಡದಿದ್ದರೆ ತನಿಖೆಗೆ ಹಿನ್ನಡೆಯಾಗುತ್ತದೆ ಎಂಬುದಕ್ಕೆ ಸ್ಪಷ್ಟವಾದ ವಸ್ತುನಿಷ್ಠ ದಾಖಲೆಗಳಿರಬೇಕು. ಪ್ರಸ್ತುತ ಪ್ರಕರಣದಲ್ಲಿ ಜಪ್ತಿ ಮಾಡಲಾಗಿದ್ದ ನಿವೇಶನಗಳ ಖಾತೆ ಇನ್ನೂ ಅರ್ಜಿದಾರರ ಹೆಸರಿಗೇ ವರ್ಗಾವಣೆಯಾಗಿರಲಿಲ್ಲ. ಖಾತೆಯೇ ಬದಲಾಗದ ಸ್ಥಿರಾಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಲು ಅಥವಾ ಹಸ್ತಾಂತರಿಸಲು ಸಾಧ್ಯವೇ ಇಲ್ಲದಿರುವಾಗ, ಆಸ್ತಿ ಹಸ್ತಾಂತರವಾಗುವ ಆತಂಕವಿದೆ ಎಂಬ ಇ.ಡಿ ವಾದಕ್ಕೆ ಯಾವುದೇ ಆಧಾರವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಸದೆ ಜಯನಗರ ಲೇಔಟ್‌ಗೆ ಜಯಮ್ಮ ಅವರ ಜಮೀನನ್ನು ಮುಡಾ ಬಳಸಿಕೊಂಡಿತ್ತು. ಇದಕ್ಕೆ ಪರಿಹಾರವಾಗಿ ಮುಡಾ ಕೆಲವು ನಿವೇಶನಗಳನ್ನು ಕ್ರಯಪತ್ರದ ಮೂಲಕ ಅವರಿಗೆ ಮಂಜೂರು ಮಾಡಿತ್ತು. ಆದರೆ, ಈ ನಿವೇಶನಗಳ ಖಾತೆ ವರ್ಗಾವಣೆಗೆ ಕಂದಾಯ ಅಧಿಕಾರಿಗಳು ನಿರಾಕರಿಸಿದ್ದರು. ಇದೇ ವೇಳೆ ಸ್ನೇಹಮಯಿ ಕೃಷ್ಣ ಅವರು ನೀಡಿದ ಖಾಸಗಿ ದೂರಿನನ್ವಯ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಇ.ಡಿ ಪ್ರಕರಣ ದಾಖಲಿಸಿಕೊಂಡು, ಇವು 'ಅಪರಾಧದ ಮೂಲಕ ಗಳಿಸಿದ ಆಸ್ತಿ' ಎಂದು ಆರೋಪಿಸಿ ಜಪ್ತಿ ಆದೇಶ ಹೊರಡಿಸಿತ್ತು. ಆರಂಭಿಕ ಹಂತದ ಜಪ್ತಿ ಆದೇಶವೇ ಕಾನೂನುಬದ್ಧವಾಗಿ ದೋಷಪೂರಿತವಾಗಿದ್ದರಿಂದ ಅದರ ಮುಂದಿನ ಪ್ರಕ್ರಿಯೆಗಳು ಅಸಿಂಧುಗೊಳ್ಳುತ್ತವೆ ಎಂದು ತಿಳಿಸಿರುವ ಹೈಕೋರ್ಟ್, ಅಗತ್ಯಬಿದ್ದರೆ ಕಾನೂನು ಚೌಕಟ್ಟಿನಲ್ಲಿ ಹೊಸದಾಗಿ ವಿಚಾರಣೆ ನಡೆಸಲು ಇ.ಡಿಗೆ ಮುಕ್ತ ಅವಕಾಶ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja