Dailyhunt Logo
  • Light mode
    Follow system
    Dark mode
    • Play Story
    • App Story
HIGH COURT: ನಾಲ್ವರೇ ಟಾರ್ಗೆಟ್ ಯಾಕೆ? ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಕೇಸ್​​​ನ FIRಗೆ ಕೋರ್ಟ್ ತಡೆ

HIGH COURT: ನಾಲ್ವರೇ ಟಾರ್ಗೆಟ್ ಯಾಕೆ? ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಕೇಸ್​​​ನ FIRಗೆ ಕೋರ್ಟ್ ತಡೆ

Navasamaja.com 1 week ago

ಬೆಂಗಳೂರು: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರ ಮೇಲೆ ಚಪ್ಪಲಿ ಎಸೆದ ಆರೋಪಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ (High Court) ಮಧ್ಯಂತರ ತಡೆಯಾಜ್ಞೆ ನೀಡಿದೆ.

ಅಲ್ಲದೆ, ಸ್ಥಳದಲ್ಲಿದ್ದ ನೂರಾರು ಜನರ ಮಧ್ಯೆ ಕೇವಲ ನಿರ್ದಿಷ್ಟ ನಾಲ್ವರನ್ನು ಮಾತ್ರವೇ ಗುರಿಯಾಗಿಸಿಕೊಂಡು ಸ್ವಯಂಪ್ರೇರಿತ ಕೇಸ್ ದಾಖಲಿಸಿದ ಚಿಕ್ಕಬಳ್ಳಾಪುರ ಪೊಲೀಸರ ತಾರತಮ್ಯದ ನಡೆಯನ್ನು ನ್ಯಾಯಾಲಯ ಪ್ರಶ್ನಿಸಿದೆ.

ಪೊಲೀಸರ ದ್ವೇಷದ ಕ್ರಮಕ್ಕೆ ಅಸಮಾಧಾನ!
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಬೇಕು ಎಂದು ಕೋರಿ ಆರೋಪಿಗಳಾದ ಮೋಹನ್ ರಾಜ್, ಅಕ್ಕುಲ ರೆಡ್ಡಿ, ಟಿ.ಎಸ್​. ಮಹೇಂದ್ರ ಮತ್ತು ಟಿ.ಎಸ್‌. ಪ್ರಕಾಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮಾನ್ಯ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಪೊಲೀಸರ ದ್ವೇಷದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಒಂದು ವೇಳೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾಸಕರಿಗೆ ಅಪಮಾನವಾಗಿದ್ದರೆ, ಅವರು ವೈಯಕ್ತಿಕವಾಗಿ ಮಾನನಷ್ಟ ಮೊಕದ್ದಮೆ (Defamation Case) ದಾಖಲಿಸಬಹುದಿತ್ತು. ಅದನ್ನು ಬಿಟ್ಟು, ಅಲ್ಲಿ ನೆರೆದಿದ್ದ ಸುಮಾರು 800 ಜನರ ಪೈಕಿ ಕೇವಲ ಈ ನಾಲ್ವರ ವಿರುದ್ಧವೇ ಪೊಲೀಸರು ಹುಡುಕಿ ಹುಡುಕಿ ಕೇಸ್ ದಾಖಲಿಸಿದ್ದೇಕೆ? ಎಂದು ಚಿಕ್ಕಬಳ್ಳಾಪುರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು. ಈ ಬಗ್ಗೆ ಲಿಖಿತ ಪ್ರತಿಕ್ರಿಯೆ ನೀಡುವಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಿದ ನ್ಯಾಯಪೀಠ, ನಾಲ್ವರ ವಿರುದ್ಧದ ಮುಂದಿನ ಎಲ್ಲಾ ತನಿಖಾ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ಕೆಂಪೇಗೌಡ ಜಯಂತಿ ದಿನ ನಡೆದಿದ್ದೇನು?
ಕಳೆದ ಜೂನ್ 27ರಂದು ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕುರಿತಾಗಿ ಶಾಸಕ ಪ್ರದೀಪ್ ಈಶ್ವರ್ ನೀಡಿದ್ದ ಹಳೆಯ ವಿವಾದಾತ್ಮಕ ಹೇಳಿಕೆಯಿಂದ ರೊಚ್ಚಿಗೆದ್ದಿದ್ದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಏಕಾಏಕಿ ಕಾರ್ಯಕ್ರಮದ ವೇದಿಕೆಗೆ ನುಗ್ಗಿದ್ದರು. ಪ್ರದೀಪ್ ಈಶ್ವರ್ ಅವರನ್ನು ತಕ್ಷಣವೇ ವೇದಿಕೆಯಿಂದ ಕೆಳಗಿಳಿಸಬೇಕು ಎಂದು ಆಕ್ರೋಶ ಭರಿತ ಘೋಷಣೆಗಳನ್ನು ಕೂಗಿ ಗಲಾಟೆ ಆರಂಭಿಸಿದ್ದರು. ತದನಂತರ ವೇದಿಕೆಯಲ್ಲಿದ್ದ ಸ್ವಾಮೀಜಿಯವರು ಮಧ್ಯಪ್ರವೇಶಿಸಿ ಉಭಯ ಕಡೆಯವರನ್ನು ಸಮಾಧಾನಪಡಿಸಿದ ನಂತರ ಪರಿಸ್ಥಿತಿ ತಿಳಿಗೊಂಡಿತ್ತು.

ಅಧಿಕೃತ ಸರ್ಕಾರಿ ಕಾರ್ಯಕ್ರಮ ಮುಗಿದು ಹೊರಬರುತ್ತಿದ್ದಂತೆಯೇ ಗಲಾಟೆ ಮತ್ತಷ್ಟು ವಿಕೋಪಕ್ಕೆ ತಿರುಗಿತು. ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಐಷಾರಾಮಿ ಕಾರಿನ ಸನ್‌ರೂಫ್ (Sunroof) ಓಪನ್ ಮಾಡಿ ಅದರ ಮೇಲೆ ನಿಂತು ಸಾರ್ವಜನಿಕವಾಗಿ ಮೆರವಣಿಗೆ ಹೊರಟರು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಘೋಷಣೆ ಕೂಗುತ್ತಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೆ ತಿರುಗೇಟು ನೀಡುವ ಭರದಲ್ಲಿ, ಶಾಸಕರು ಸಾರ್ವಜನಿಕವಾಗಿಯೇ ಮೀಸೆ ತಿರುವಿ, ತೋಳು ತಟ್ಟಿ ಬಹಿರಂಗ ಸವಾಲು ಹಾಕಿದರು. ಶಾಸಕರ ಈ ನಡೆ ವಿಪಕ್ಷ ಕಾರ್ಯಕರ್ತರನ್ನು ಮತ್ತಷ್ಟು ಉದ್ರೇಕಿಸಿತು.

ರೊಚ್ಚಿಗೆದ್ದ ಪ್ರತಿಭಟನಾಕಾರರು ಶಾಸಕರ ಕಾರಿನತ್ತ ಚಪ್ಪಲಿಗಳನ್ನು ಎಸೆದು ಆಕ್ರೋಶ ಹೊರಹಾಕಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಲಾಠಿ ಬೀಸಿ ಪರಿಸ್ಥಿತಿಯನ್ನು ಹತೋಟಿಗೆ ತಂದು, ಸ್ಥಳದಲ್ಲೇ ಕೆಲವರನ್ನು ವಶಕ್ಕೆ ಪಡೆದಿದ್ದರು. ತದನಂತರ ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಅಮರ್ ಅವರು ಸಿಸಿಟಿವಿ ಮತ್ತು ಮೊಬೈಲ್ ದೃಶ್ಯಾವಳಿಗಳನ್ನು ಪರಿಶೀಲಿಸಿ, ಶಾಸಕರ ಮೇಲೆ ಚಪ್ಪಲಿ ಎಸೆದ, ಅವಾಚ್ಯ ಪದಗಳಿಂದ ನಿಂದಿಸಿದ ಹಾಗೂ ಸರ್ಕಾರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಸ್ವಯಂಪ್ರೇರಿತ (Suo Moto) ಎಫ್‌ಐಆರ್ ದಾಖಲಿಸಿ ನಾಲ್ವರನ್ನು ಬಂಧಿಸಿದ್ದರು. ಪೊಲೀಸರ ಈ ಏಕಪಕ್ಷೀಯ ಕ್ರಮಕ್ಕೆ ಈಗ ಹೈಕೋರ್ಟ್ ಬ್ರೇಕ್ ಹಾಕಿದೆ.

: CONGRESS: ಪಕ್ಷದಲ್ಲಿ ಸಿದ್ದರಾಮಯ್ಯ ಮೂಲೆಗುಂಪು ಆರೋಪಕ್ಕೆ ಪುತ್ರ ಯತೀಂದ್ರ ತಿರುಗೇಟು

Dailyhunt
Disclaimer: This content has not been generated, created or edited by Dailyhunt. Publisher: Navasamaja