Dailyhunt Logo
  • Light mode
    Follow system
    Dark mode
    • Play Story
    • App Story
HIGHCOURT: ಕಂಟೋನ್ಮೆಂಟ್ ರೈಲ್ವೆ ಭೂಮಿ ವಿವಾದ - ನಕಲಿ ದಾಖಲೆ ಸೃಷ್ಟಿಸಿ ವಂಚಿಸಲು ಯತ್ನಿಸಿದವರಿಗೆ ಹೈಕೋರ್ಟ್ ಚಾಟಿ

HIGHCOURT: ಕಂಟೋನ್ಮೆಂಟ್ ರೈಲ್ವೆ ಭೂಮಿ ವಿವಾದ - ನಕಲಿ ದಾಖಲೆ ಸೃಷ್ಟಿಸಿ ವಂಚಿಸಲು ಯತ್ನಿಸಿದವರಿಗೆ ಹೈಕೋರ್ಟ್ ಚಾಟಿ

Navasamaja.com 1 week ago

ಬೆಂಗಳೂರು : ನಗರದ (Bengaluru) ವಸಂತನಗರದ ಸಮೀಪವಿರುವ ಕಂಟೋನ್ಮೆಂಟ್ ರೈಲು ನಿಲ್ದಾಣದ (Cantonment Railway Station) ಬಳಿ 5 ಎಕರೆ ಜಾಗ ಕೇಂದ್ರ ರೈಲ್ವೆ ಇಲಾಖೆಗೆ ಸೇರಿದ್ದಾಗಿದೆ ಎಂದು ಕರ್ನಾಟಕ ಹೈಕೋರ್ಟ್ (Highcourt) ಮಹತ್ವದ ತೀರ್ಪು ಪ್ರಕಟಿಸಿದೆ.

ನಕಲಿ ದಾಖಲೆಗಳ (Fake documents) ಮೂಲಕ ಈ ಆಸ್ತಿಯನ್ನು ಕಬಳಿಸಲು ಹೊಂಚು ಹಾಕಿದ್ದ ಖಾಸಗಿ ವ್ಯಕ್ತಿಗಳ ಜಾಲವನ್ನು ನ್ಯಾಯಾಲಯ ಸಂಪೂರ್ಣವಾಗಿ ಬಯಲಿಗೆಳೆದಿದೆ. ಬ್ರಿಟಿಷರ ಅವಧಿಯಲ್ಲಿ ರೈಲ್ವೆ ಯೋಜನೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ ಒಟ್ಟು 600 ಎಕರೆ ಜಾಗದ ಪೈಕಿ ಈ ಐದು ಎಕರೆ ಪ್ರದೇಶವೂ ಸಹ ಒಂದು ಭಾಗವಾಗಿದೆ ಎಂಬುದು ಸಾಬೀತಾಗಿದೆ.

ಈ ಹಿಂದೆ 1997 ರಲ್ಲಿಯೇ ಸಿವಿಲ್ ನ್ಯಾಯಾಲಯ ಈ ಭೂಮಿಯ ಮಾಲೀಕತ್ವವನ್ನು ರೈಲ್ವೆಗೆ ನೀಡಿ ತೀರ್ಪು ನೀಡಿತ್ತು. ಆದರೆ 2006 ರ ನಂತರದ ಖಾಸಗಿ ಸಿವಿಲ್ ದಾವೆಗಳ ಜಾರಿ ಪ್ರಕ್ರಿಯೆಯ ವೇಳೆ, ಮೂಲ ಅರ್ಜಿಯಲ್ಲಿ ಇರದಿದ್ದ ಸರ್ವೇ ಸಂಖ್ಯೆ 'CTS No. 1047' ಅನ್ನು ಅಕ್ರಮವಾಗಿ ಸೇರಿಸಲಾಗಿತ್ತು. ಈ ರೀತಿ ಮಾರ್ಪಡಿಸಿದ ದಾಖಲೆಗಳನ್ನು ಮುಂದಿಟ್ಟುಕೊಂಡು ಅಮೃತ್‌ಲಾಲ್ ಜೈನ್ ಎಂಬುವವರು ಜಾಗದ ಸ್ವಾಧೀನ ಪಡೆದುಕೊಂಡಿದ್ದಲ್ಲದೆ, ಕಂದಾಯ ದಾಖಲೆಗಳಲ್ಲಿ ತಮ್ಮ ಹೆಸರು ನೋಂದಾಯಿಸಲು ಮುಂದಾಗಿದ್ದರು. ಏಕಸದಸ್ಯ ಪೀಠ ಈ ಬಗ್ಗೆ ಪರಿಶೀಲಿಸಲು ಆದೇಶಿಸಿದಾಗ, ರಾಜ್ಯ ಕಂದಾಯ ಮತ್ತು ಕೇಂದ್ರ ರೈಲ್ವೆ ಇಲಾಖೆಗಳು ಜಂಟಿಯಾಗಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು.

ಈ ಪ್ರಕರಣದ ನಿಖರ ಪರಿಶೀಲನೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಹಾಗೂ ಜಿ. ಬಸವರಾಜ ಅವರಿದ್ದ ವಿಭಾಗೀಯ ಪೀಠ, ಆರಂಭಿಕ ಮಾರಾಟ ಒಪ್ಪಂದಗಳಲ್ಲಿ ಇಲ್ಲದ ಸರ್ವೇ ಸಂಖ್ಯೆಯನ್ನು ನಂತರ ಸೇರಿಸಿರುವುದು ಸ್ಪಷ್ಟ ವಂಚನೆಯಾಗಿದೆ ಎಂದು ಹೇಳಿದೆ. ಸತ್ಯವನ್ನು ಮರೆಮಾಚಿ ನ್ಯಾಯಾಲಯದ ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ತರಾಟೆಗೆ ತೆಗೆದುಕೊಂಡಿರುವ ಪೀಠ, ವಿವಾದಿತ ಜಾಗದ ಮೇಲಿನ ರೈಲ್ವೆ ಇಲಾಖೆಯ ಕಾನೂನುಬದ್ಧ ಹಕ್ಕನ್ನು ಎತ್ತಿಹಿಡಿದಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja