ವಿಜಯಪುರ : ವಿಜಯಪುರದಲ್ಲಿ (Vijayapura ) ಜಮೀನು ಮಾರಾಟ ಮಾಡಿದ ದೊಡ್ಡ ಮೊತ್ತದ ಹಣದ (Money ) ಆಸೆಗಾಗಿ ಸ್ವಂತ ಸಹೋದ್ಯೋಗಿಯನ್ನೇ ಹನಿಟ್ರ್ಯಾಪ್ (Honeytrap ) ಬಲೆಗೆ ಬೀಳಿಸಿ, ಅಪಹರಣ ಮಾಡಿದ್ದ ಭೀಕರ ಜಾಲವನ್ನು ವಿಜಯಪುರ ಪೊಲೀಸರು ಭೇದಿಸಿದ್ದಾರೆ.
ಈ ರೋಮಾಂಚನಕಾರಿ ಕಾರ್ಯಾಚರಣೆಯಲ್ಲಿ ಕೇವಲ ಎರಡು ದಿನಗಳಲ್ಲಿ ಬಲಿಪಶುವನ್ನು ರಕ್ಷಿಸಿರುವ ಪೊಲೀಸರು, ಕಿಡ್ನ್ಯಾಪ್ ಮಾಡಿ 12 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮಹಿಳೆ ಸೇರಿದಂತೆ ಒಟ್ಟು 8 ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಸಂತ್ರಸ್ತ ಯುವಕ ಸಾಹಿಲ್ ಕುಟುಂಬ ಇತ್ತೀಚೆಗಷ್ಟೇ ತನ್ನ 2 ಎಕರೆ ಜಮೀನನ್ನು ಬರೋಬ್ಬರಿ 26 ಲಕ್ಷ ರೂಪಾಯಿಗೆ ಮಾರಾಟ ಮಾಡಿತ್ತು. ಈ ಆರ್ಥಿಕ ವ್ಯವಹಾರದ ಸಂಪೂರ್ಣ ಮಾಹಿತಿ ಸಾಹಿಲ್ ಜೊತೆ ಕೆಲಸ ಮಾಡುತ್ತಿದ್ದ ಆತನ ಸಹೋದ್ಯೋಗಿ ಮಹಮ್ಮದ್ ರಫೀಕ್‌ಗೆ ತಿಳಿದಿತ್ತು. ಈ ಭಾರಿ ಮೊತ್ತದ ಹಣವನ್ನು ಹೇಗೆಯಾದರೂ ಕಬಳಿಸಲೇಬೇಕು ಎಂದು ಹೊಂಚು ಹಾಕಿದ ರಫೀಕ್, ತನ್ನ ಸ್ನೇಹಿತರೊಂದಿಗೆ ಸೇರಿ ಹನಿಟ್ರ್ಯಾಪ್ ಮತ್ತು ಅಪಹರಣದ ಮಾಸ್ಟರ್ ಪ್ಲಾನ್ ರೂಪಿಸಿದ್ದನು. ಯೋಜನೆಯಂತೆ ಆರೋಪಿಗಳು ಯುವತಿಯೊಬ್ಬಳ ಮೂಲಕ ಸಾಹಿಲ್‌ನನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ವಿಜಯಪುರದ ನಿರ್ದಿಷ್ಟ ಜಾಗಕ್ಕೆ ಬರುವಂತೆ ಮಾಡಿದ್ದಾರೆ. ಅಲ್ಲಿಗೆ ಸಾಹಿಲ್ ಬರುತ್ತಿದ್ದಂತೆ ಹೊಂಚು ಹಾಕಿ ಕಾಯುತ್ತಿದ್ದ ದುಷ್ಕರ್ಮಿಗಳು ಸ್ಕಾರ್ಪಿಯೋ ವಾಹನದಲ್ಲಿ ಆತನನ್ನು ಅಪಹರಿಸಿದ್ದಾರೆ. ಬಳಿಕ ವಿಜಯಪುರದಿಂದ ಗದಗ, ಅಲ್ಲಿಂದ ಗೋವಾ ತಲುಪಿ, ಕೊನೆಗೆ ಬೆಳಗಾವಿ ಜಿಲ್ಲೆಯ ಘಟಪ್ರಭಾ ಭಾಗದಲ್ಲಿ ತಲೆಮರೆಸಿಕೊಂಡಿದ್ದರು. ನಂತರ ಸಾಹಿಲ್ ಮೊಬೈಲ್‌ನಿಂದಲೇ ಆತನ ತಾಯಿಗೆ ಕರೆ ಮಾಡಿ, ಮಗನ ಪ್ರಾಣ ಬೇಕಿದ್ದರೆ 12 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಇತ್ತ ಆತಂಕಗೊಂಡ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ವಿಜಯಪುರದ ಗಾಂಧಿಚೌಕ್ ಪೊಲೀಸರು, ಮೊಬೈಲ್ ಕರೆಗಳ ನೆಟ್‌ವರ್ಕ್ ಮತ್ತು ಲೊಕೇಶನ್ ಜಾಡು ಹಿಡಿದು ಬೆಳಗಾವಿಯ ಘಟಪ್ರಭಾ ಸಮೀಪ ಅಡಗುದಾಣದ ಮೇಲೆ ಭರ್ಜರಿ ದಾಳಿ ನಡೆಸಿ ಸಾಹಿಲ್‌ನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೇವಲ 48 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸ್ ತಂಡದ ಸಾಹಸವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

