Dailyhunt Logo
  • Light mode
    Follow system
    Dark mode
    • Play Story
    • App Story
INDIAN NAVY: ಭಾರತೀಯ ಹಡಗಿನ ಮೇಲೆ ದಾಳಿ: ನಾವಿಕರ ರಕ್ಷಣೆಗೆ ನೌಕಾಪಡೆ ನಿಯೋಜನೆಗೆ ಆಗ್ರಹ

INDIAN NAVY: ಭಾರತೀಯ ಹಡಗಿನ ಮೇಲೆ ದಾಳಿ: ನಾವಿಕರ ರಕ್ಷಣೆಗೆ ನೌಕಾಪಡೆ ನಿಯೋಜನೆಗೆ ಆಗ್ರಹ

Navasamaja.com 6 days ago

ವದೆಹಲಿ: ಯೆಮೆನ್ ಕರಾವಳಿಯ ಕೆಂಪು ಸಮುದ್ರದಲ್ಲಿ ಭಾರತೀಯ ವಾಣಿಜ್ಯ ಹಡಗು 'ಎಮ್‌ಎಸ್‌ವಿ ಫೈಜ್ ನೂರ್ ಓಲಿಯಾ' ಮೇಲೆ ದಾಳಿ (Red Sea attack) ನಡೆದು ಮುಳುಗಡೆಯಾದ ಮರುದಿನವೇ, ಅಪಾಯಕಾರಿ ಜಲಮಾರ್ಗಗಳಲ್ಲಿ ಸಂಚರಿಸುವ ಭಾರತೀಯ ಹಡಗುಗಳು ಹಾಗೂ ನಾವಿಕರ ರಕ್ಷಣೆಗೆ ತಕ್ಷಣವೇ ಭಾರತೀಯ ನೌಕಾಪಡೆಯನ್ನು (Indian Navy) ನಿಯೋಜಿಸುವಂತೆ 'ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ' (FSUI) ಕೇಂದ್ರ ಸರ್ಕಾರವನ್ನು(Central Government) ಆಗ್ರಹಿಸಿದೆ.

ಇಸ್ರೇಲ್, ಇರಾನ್, ಅಮೆರಿಕ ನಡುವಿನ ಸಂಘರ್ಷ ಹಾಗೂ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಪ್ರಮುಖ ವಾಣಿಜ್ಯ ಹಡಗು ಮಾರ್ಗಗಳು ಅತ್ಯಂತ ಅಪಾಯಕಾರಿ ವಲಯಗಳಾಗಿ ಬದಲಾಗಿವೆ ಎಂದು ಕಳವಳ ವ್ಯಕ್ತಪಡಿಸಿ ನಾವಿಕರ ಸಂಘಟನೆಯು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಬುಧವಾರ ತುರ್ತು ಮನವಿ ಸಲ್ಲಿಸಿದೆ.

ಬಾಬ್ ಎಲ್ ಮಂಡೇಬ್ ಜಲಸಂಧಿಯಲ್ಲಿ 13 ಭಾರತೀಯ ಸಿಬ್ಬಂದಿಯೊಂದಿಗೆ ಚಲಿಸುತ್ತಿದ್ದ ಭಾರತದ ಧ್ವಜ ಹೊಂದಿದ್ದ ಹಡಗಿನ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಿದ್ದಾರೆ ಎಂದು ಯೆಮೆನ್ ಪಡೆಗಳು ತಿಳಿಸಿವೆ. ಕೆಂಪು ಸಮುದ್ರ ಮತ್ತು ಕಪ್ಪು ಸಮುದ್ರದಲ್ಲಿ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳು ಹೆಚ್ಚಾಗುತ್ತಿದ್ದು, ಹಲವು ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಕಾಣೆಯಾಗಿದ್ದಾರೆ. ಈ ನಿಟ್ಟಿನಲ್ಲಿ ಪರಿಸ್ಥಿತಿ ತಿಳಿಯಾಗುವವರೆಗೆ ನೌಕಾಪಡೆಯ ಯುದ್ಧನೌಕೆಗಳ ಮೂಲಕ ಭಾರತೀಯ ಹಡಗುಗಳಿಗೆ ಕಟ್ಟುನಿಟ್ಟಿನ ಭದ್ರತೆ ಒದಗಿಸಬೇಕು ಎಂದು ಸಂಘಟನೆಯು ಸರ್ಕಾರವನ್ನು ಕೋರಿದೆ.

ಇನ್ನು ರಕ್ಷಿಸಲ್ಪಟ್ಟ ನಾವಿಕರಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ಹಾಗೂ ಅಗತ್ಯ ನೆರವನ್ನು ಒದಗಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಮುದ್ರದಲ್ಲಿ ಭದ್ರತಾ ಪಡೆಗಳು ತಕ್ಷಣ ಸ್ಪಂದಿಸಿದ್ದರಿಂದ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಭಾರತ

ಮತ್ತೊಂದೆಡೆ, ಹಡಗು ಮುಳುಗಡೆಯಾದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಭಾರತದ ವಿದೇಶಾಂಗ ಸಚಿವಾಲಯ (MEA), ಹಡಗಿನಲ್ಲಿದ್ದ ಎಲ್ಲಾ 13 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯೆಮೆನ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಾವಿಕರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದೆ. ವಾಣಿಜ್ಯ ಹಡಗುಗಳ ಮೇಲಿನ ಈ ರೀತಿಯ ಸಾಲು ಸಾಲು ದಾಳಿಗಳು ಅತ್ಯಂತ ಕಳವಳಕಾರಿಯಾಗಿದ್ದು, ಜಾಗತಿಕ ಜಲಮಾರ್ಗಗಳಲ್ಲಿ ಅಡೆತಡೆಗಳಿಲ್ಲದ ಮುಕ್ತ ಸಂಚಾರ ಮತ್ತು ವ್ಯಾಪಾರಕ್ಕೆ ತಕ್ಷಣವೇ ಅನುವು ಮಾಡಿಕೊಡಬೇಕು ಹಾಗೂ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಆಗ್ರಹಿಸಿದೆ.

ಇತ್ತೀಚಿನ ತಿಂಗಳುಗಳಲ್ಲಿ ಕೆಂಪು ಸಮುದ್ರ ಹಾಗೂ ಏಡೆನ್ ಕೊಲ್ಲಿ ವ್ಯಾಪ್ತಿಯಲ್ಲಿ ವಾಣಿಜ್ಯ ಮತ್ತು ಸರಕು ಸಾಗಣೆ ಹಡಗುಗಳ ಮೇಲಿನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳು ಹೆಚ್ಚಾಗುತ್ತಿವೆ. ಈ ಜಾಗತಿಕ ಜಲಮಾರ್ಗದಲ್ಲಿ ಸಂಚರಿಸುವ ಹಡಗುಗಳು ಮತ್ತು ಸಿಬ್ಬಂದಿಯ ಭದ್ರತೆಗಾಗಿ ಭಾರತೀಯ ನೌಕಾಪಡೆ ಸೇರಿದಂತೆ ಅಂತಾರಾಷ್ಟ್ರೀಯ ರಕ್ಷಣಾ ಪಡೆಗಳು ಕಾವಲು ಕಾರ್ಯಾಚರಣೆಯನ್ನು ಮತ್ತಷ್ಟು ಬಿಗಿಗೊಳಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja