ನವದೆಹಲಿ: ಭಾರತದ (India) ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯನ್ನು (Terrorism) ಪ್ರಚೋದಿಸುತ್ತಿರುವ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ (Central Govt) ಮತ್ತೊಮ್ಮೆ ಖಡಕ್ ಸಂದೇಶ ರವಾನಿಸಿದೆ. ಸಿಂಧೂ ನದಿ (Sindu River) ನೀರು ಹಂಚಿಕೆ ಒಪ್ಪಂದಕ್ಕೆ (IWT) ಧಕ್ಕೆ ತರದಂತೆ ಇತ್ತೀಚೆಗೆ ಪಾಕಿಸ್ತಾನ ನೀಡಿದ್ದ ಎಚ್ಚರಿಕೆಗೆ ತಿರುಗೇಟು ನೀಡಿರುವ ಭಾರತ, ಇಸ್ಲಾಮಾಬಾದ್ ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೂ ಈ ಜಲ ಒಪ್ಪಂದವನ್ನು ಅಮಾನತಿನಲ್ಲಿಡಲಾಗುವುದು (In abeyance) ಎಂದು ಖಡಕ್ ಆಗಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, "ಸಿಂಧೂ ನದಿ ನೀರು ಒಪ್ಪಂದದ ವಿಷಯದಲ್ಲಿ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದನೆಗೆ ಸ್ಪಾನ್ಸರ್ ಮಾಡುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಈ ಒಪ್ಪಂದವನ್ನು ತಡೆಹಿಡಿಯಲಾಗಿದೆ. ಪಾಕಿಸ್ತಾನ ಮೊದಲು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಂಬಲರ್ಹ ಹಾಗೂ ಶಾಶ್ವತ ರೀತಿಯಲ್ಲಿ ಕೈಬಿಡಬೇಕು" ಎಂದು ಸ್ಪಷ್ಟಪಡಿಸಿದರು. ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಇತ್ತೀಚೆಗೆ, "ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ಬರಬೇಕಾದ ನೀರಿನ ಪಾಲನ್ನು ಕಿತ್ತುಕೊಳ್ಳಲು ಯತ್ನಿಸುವವರ ಕೈಗಳನ್ನು ಕತ್ತರಿಸಲಾಗುವುದು" ಎಂದು ಭಾರತಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅಲ್ಲಿನ ಮಾಹಿತಿ ಸಚಿವ ಅಟಾವುಲ್ಲಾ ತರಾರ್, 1960 ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದವು ಕಾನೂನುಬದ್ಧವಾಗಿದ್ದು, ಇದನ್ನು ಭಾರತ ಏಕಪಕ್ಷೀಯವಾಗಿ ಅಮಾನತುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಪಾಕಿಸ್ತಾನದ ಈ ಉದ್ಧಟತನದ ಹೇಳಿಕೆಗಳಿಗೆ ಈಗ ಭಾರತದ ವಿದೇಶಾಂಗ ಸಚಿವಾಲಯ ತಕ್ಕ ಉತ್ತರ ನೀಡಿದೆ. ಕಳೆದ ವರ್ಷ ಅಂದರೆ 2025ರ ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಅದರಲ್ಲಿ ಪ್ರಮುಖವಾಗಿ, ಪಾಕಿಸ್ತಾನದ ಉಗ್ರ ಪೋಷಣೆಗೆ ತಕ್ಕ ಪಾಠ ಕಲಿಸಲು 1960 ರ ಐತಿಹಾಸಿಕ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತಿನಲ್ಲಿಡಲು ಭಾರತ ನಿರ್ಧರಿಸಿತ್ತು. ಇದೇ ವೇಳೆ ಬಾಂಗ್ಲಾದೇಶದ 'ತೀಸ್ತಾ ನದಿ ಯೋಜನೆ'ಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಕ್ತಾರ ರಣಧೀರ್ ಜೈಸ್ವಾಲ್, "ಬಾಂಗ್ಲಾದೇಶಕ್ಕೆ ಭಾರತ ನೀಡುತ್ತಿರುವ ಅಭಿವೃದ್ಧಿ ನೆರವು ಉಭಯ ದೇಶಗಳು ಒಪ್ಪಿಕೊಂಡಿರುವ ಮಾರ್ಗಸೂಚಿಯ ಪ್ರಕಾರವೇ ಸಾಗುತ್ತಿದ್ದು, ಇದನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ. ತೀಸ್ತಾ ನದಿ ಯೋಜನೆಗೆ ಸಂಬಂಧಿಸಿದಂತೆ ಭಾರತ ಈಗಾಗಲೇ ತನ್ನ ನಿಲುವನ್ನು ಬಾಂಗ್ಲಾದೇಶಕ್ಕೆ ತಿಳಿಸಿದೆ. ಈ ವಿಷಯದಲ್ಲಿ ಮುಂದಿನ ಹೆಜ್ಜೆ ಇಡುವಾಗ ಎಲ್ಲಾ ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು" ಎಂದು ಮಾಹಿತಿ ನೀಡಿದರು.

