ಭಾರತದಲ್ಲಿ ನೂರಾರು ನದಿಗಳು (River) ಜನಜೀವನದ ಭಾಗವಾಗಿವೆ. ಹಲವು ನದಿಗಳು ಕೃಷಿಗೆ ನೀರು ಒದಗಿಸಿದರೆ, ಇನ್ನೂ ಕೆಲವು ನದಿಗಳು (Interesting Facts) ಧಾರ್ಮಿಕ ನಂಬಿಕೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿವೆ. ಇಂತಹ ನದಿಗಳ ಪೈಕಿ ದೇಶದ ರಾಷ್ಟ್ರೀಯ ನದಿ ಎಂಬ ಗೌರವ ಪಡೆದಿರುವುದು ಗಂಗಾ (Ganga River).
ಭಾರತ ಸರ್ಕಾರ 2008ರ ನವೆಂಬರ್ 4ರಂದು ಗಂಗಾ ನದಿಯನ್ನು ರಾಷ್ಟ್ರೀಯ ನದಿಯಾಗಿ ಘೋಷಿಸಿತು. ದೇಶದ ಇತಿಹಾಸ, ಧಾರ್ಮಿಕ ಪರಂಪರೆ, ಕೃಷಿ ಹಾಗೂ ಆರ್ಥಿಕತೆಯಲ್ಲಿ ಗಂಗೆಯ ಮಹತ್ವವನ್ನು ಗುರುತಿಸಿ ಈ ಸ್ಥಾನಮಾನ ನೀಡಲಾಗಿದೆ. ಗಂಗೆಯ ಮೂಲ ಹಿಮಾಲಯದ ಉತ್ತರಾಖಂಡದಲ್ಲಿದೆ. ಗಂಗೋತ್ರಿ ಹಿಮನದಿಯ ಗೋಮುಖದಿಂದ ಭಾಗೀರಥಿ ಎಂಬ ಹೆಸರಿನಲ್ಲಿ ಹರಿಯುವ ನದಿ, ದೇವಪ್ರಯಾಗದಲ್ಲಿ ಅಲಕನಂದೆಯೊಂದಿಗೆ ಸಂಗಮವಾದ ಬಳಿಕ ಗಂಗಾ ಎಂದು ಕರೆಯಲ್ಪಡುತ್ತದೆ. ಅಲ್ಲಿಂದ ಉತ್ತರ ಭಾರತದ ವಿಶಾಲ ಪ್ರದೇಶವನ್ನು ಹಾದು ಪೂರ್ವದತ್ತ ಸಾಗುತ್ತದೆ. ಉತ್ತರಾಖಂಡದಿಂದ ಆರಂಭವಾಗುವ ಗಂಗೆಯ ಹರಿವು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಮೂಲಕ ಮುಂದುವರಿಯುತ್ತದೆ. ಬಳಿಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಬಾಂಗ್ಲಾದೇಶದ ಭಾಗದಲ್ಲಿ ಈ ನದಿಯನ್ನು ಪದ್ಮಾ ಎಂದು ಕರೆಯಲಾಗುತ್ತದೆ. ಒಟ್ಟು ಸುಮಾರು 2,525 ಕಿಲೋಮೀಟರ್ ಉದ್ದದ ಈ ನದಿ ಭಾರತದ ಪ್ರಮುಖ ನದಿ ವ್ಯವಸ್ಥೆಗಳಲ್ಲಿ ಒಂದಾಗಿದೆ. ಗಂಗೆಯೊಂದಿಗೆ ಹಲವು ಪ್ರಮುಖ ನದಿಗಳು ಸೇರಿಕೊಳ್ಳುತ್ತವೆ. ಯಮುನಾ, ಘಾಗ್ರಾ, ಗಂಡಕ್, ಕೋಸಿ, ರಾಮಗಂಗಾ ಮತ್ತು ಸೋನ್ ಪ್ರಮುಖ ಉಪನದಿಗಳಾಗಿವೆ. ಈ ನದಿ ವ್ಯವಸ್ಥೆಯ ಸುತ್ತಲಿನ ಪ್ರದೇಶವು ಕೃಷಿ ಚಟುವಟಿಕೆಗೆ ಅತ್ಯಂತ ಪ್ರಮುಖವಾಗಿದ್ದು, ದಟ್ಟ ಜನಸಂಖ್ಯೆಯ ಪ್ರದೇಶವಾಗಿಯೂ ಗುರುತಿಸಿಕೊಂಡಿದೆ. ಗಂಗೆಯ ದಡದಲ್ಲಿರುವ ನಗರಗಳಿಗೆ ಧಾರ್ಮಿಕವಾಗಿ ವಿಶೇಷ ಸ್ಥಾನವಿದೆ. ಹರಿದ್ವಾರ, ಪ್ರಯಾಗ್‌ರಾಜ್ ಮತ್ತು ವಾರಾಣಸಿ ಪ್ರಮುಖ ಯಾತ್ರಾ ಕೇಂದ್ರಗಳಾಗಿವೆ. ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುವ ಪದ್ಧತಿ ಹಿಂದೂ ಧರ್ಮದಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕುಂಭಮೇಳ ಸೇರಿದಂತೆ ಹಲವು ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಿಗೂ ಗಂಗಾ ಸಾಕ್ಷಿಯಾಗುತ್ತದೆ. ಆದರೆ ಗಂಗೆಯ ಮಹತ್ವ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಗಂಗಾ ಜಲಾನಯನ ಪ್ರದೇಶದ ಕೃಷಿಗೆ ನದಿ ನೀರು ಪ್ರಮುಖ ಆಧಾರವಾಗಿದೆ. ಕುಡಿಯುವ ನೀರು, ನೀರಾವರಿ, ಮೀನುಗಾರಿಕೆ, ಕೈಗಾರಿಕೆ ಮತ್ತು ಜಲಸಾರಿಗೆ ಸೇರಿದಂತೆ ಹಲವು ಕ್ಷೇತ್ರಗಳು ಗಂಗೆಯನ್ನು ಅವಲಂಬಿಸಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರ ಬದುಕಿನೊಂದಿಗೆ ಬೆಸೆದುಕೊಂಡಿರುವ ಗಂಗೆ ಇಂದು ಮಾಲಿನ್ಯದ ಸವಾಲನ್ನೂ ಎದುರಿಸುತ್ತಿದೆ. ನಗರಗಳ ಒಳಚರಂಡಿ, ಕೈಗಾರಿಕಾ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಸೇರಿದಂತೆ ವಿವಿಧ ರೀತಿಯ ಮಾಲಿನ್ಯ ನದಿಯ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ. ಹೀಗಾಗಿ ರಾಷ್ಟ್ರೀಯ ನದಿಯಾಗಿ ಗಂಗೆಗೆ ನೀಡಿರುವ ಸ್ಥಾನಮಾನ ಅದರ ಮಹತ್ವವನ್ನು ಗುರುತಿಸುವುದರ ಜೊತೆಗೆ, ನದಿಯ ಸಂರಕ್ಷಣೆಯ ಜವಾಬ್ದಾರಿಯನ್ನೂ ನೆನಪಿಸುತ್ತದೆ. ಭಾರತದ ಇತಿಹಾಸ, ನಂಬಿಕೆ ಮತ್ತು ಆರ್ಥಿಕತೆಯೊಂದಿಗೆ ನೂರಾರು ವರ್ಷಗಳಿಂದ ಸಾಗಿಬಂದಿರುವ ಗಂಗೆಯನ್ನು ಮುಂದಿನ ಪೀಳಿಗೆಗೂ ಉಳಿಸುವುದು ದೊಡ್ಡ ಸವಾಲಾಗಿದೆ.

