ಟೆಹ್ರಾನ್: ಇರಾನ್‌ನ (Iran) ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿರುವ ಒಂದೇ ಶಾಟ್ (One Shot) ಹೇಳಿಕೆಗೆ ಇರಾನ್ ಪ್ರತಿಕ್ರಿಯಿಸಿದೆ.
ವ್ಯಕ್ತಿಗಳನ್ನು ಕೊಲ್ಲಬಹುದು, ಆದರೆ ಅವರ ಆದರ್ಶಗಳನ್ನಲ್ಲ ಎಂದು ಹೇಳಿರುವ ಇರಾನ್, ವಾಷಿಂಗ್ಟನ್‌ಗೆ ನಾಗರಿಕತೆ, ಇತಿಹಾಸ ಮತ್ತು ಗೌರವದ ಬಗ್ಗೆ ಯಾವುದೇ ತಿಳಿವಳಿಕೆಯಿಲ್ಲ ಎಂದು ತಿರುಗೇಟು ನೀಡಿದೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಆರ್ಮೇನಿಯಾದಲ್ಲಿನ ಇರಾನ್ ರಾಯಭಾರ ಕಚೇರಿಯು, ನೀವು ಅಯತೊಲ್ಲಾ ಖಮೇನಿ ಅವರನ್ನು ಕೊಂದಿದ್ದೀರಿ, ಆದರೆ ವಾಸ್ತವದಲ್ಲಿ ನೀವು ಸುಗಂಧ ದ್ರವ್ಯದ ಬಾಟಲಿಯನ್ನು ಒಡೆದಿದ್ದೀರಿ, ಅದರ ಪರಿಮಳ ಈಗ ಎಲ್ಲೆಡೆ ಹರಡಿದೆ. ನಿಮಗೆ ಇಂತಹ ವಿಷಯಗಳು ಅರ್ಥವಾಗುವುದಿಲ್ಲ, ಏಕೆಂದರೆ ನಿಮ್ಮಲ್ಲಿ ನಾಗರಿಕತೆಯೂ ಇಲ್ಲ, ಇತಿಹಾಸವೂ ಇಲ್ಲ, ಗೌರವವೂ ಇಲ್ಲ ಎಂದು ಅಮೆರಿಕದ ವಿರುದ್ಧ ಆಕ್ರೋಶ ಹೊರಹಾಕಿದೆ. ಟ್ರಂಪ್ ನೀಡಿದ್ದ ಒಂದೇ ಶಾಟ್ ಎಚ್ಚರಿಕೆ ಏನು? ಅವರೆಲ್ಲರೂ ಅಲ್ಲೇ ಇದ್ದಾರೆ. ಒಂದೇ ಒಂದು ಶಾಟ್ ಮೂಲಕ ನಾವು ಅವರೆಲ್ಲರನ್ನೂ ಮುಗಿಸಬಹುದು. ಆದರೆ ನಾವು ಹಾಗೆ ಮಾಡುವುದಿಲ್ಲ, ಏಕೆಂದರೆ ಒಂದು ವೇಳೆ ಎಲ್ಲರನ್ನೂ ಇಲ್ಲವಾಗಿಸಿದರೆ ಆಮೇಲೆ ನಮಗೆ ಮಾತುಕತೆ ನಡೆಸಲು ಯಾರೂ ಉಳಿಯುವುದಿಲ್ಲ. ಅವರು ಒಪ್ಪಂದ ಮಾಡಿಕೊಳ್ಳಲು ಹಪಹಪಿಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದರು. ಇದೇ ವೇಳೆ, ಅಂತ್ಯಕ್ರಿಯೆಯಲ್ಲಿ ನೆರೆದಿರುವ ಲಕ್ಷಾಂತರ ಜನರ ಜನಸಾಗರವನ್ನು ಕಂಡು ತಮಗೆ ಆಶ್ಚರ್ಯವಾಗಿದೆ ಎಂದಿದ್ದ ಟ್ರಂಪ್, ಇರಾನ್‌ನ ಜನ ಖಮೇನಿಯನ್ನು ದ್ವೇಷಿಸುತ್ತಾರೆ ಅಂದುಕೊಂಡಿದ್ದೆ, ಬಹುಶಃ ಇವೆಲ್ಲಾ ಕೃತಕ ಕಣ್ಣೀರು ಇರಬಹುದು ಎಂದು ಲೇವಡಿ ಮಾಡಿದ್ದರು. ಆರು ದಿನಗಳ ಕಾಲ ನಡೆಯಲಿರುವ ಸುದೀರ್ಘ ಅಂತ್ಯಕ್ರಿಯೆ ಖಮೇನಿ ಅವರ ಪಾರ್ಥಿವ ಶರೀರವನ್ನು ಶಿಯಾ ಮುಸ್ಲಿಮರ ಪವಿತ್ರ ನಗರಗಳಾದ ಕೋಮ್, ಇರಾಕ್‌ನ ನಜಾಫ್ ಮತ್ತು ಕರ್ಬಲಾಗೂ ಕೊಂಡೊಯ್ಯಲಾಗುತ್ತದೆ. ಜುಲೈ 9 ರಂದು ಅವರ ಜನ್ಮಸ್ಥಳವಾದ ಈಶಾನ್ಯ ಇರಾನ್‌ನ ಮಶಾದ್ ನಗರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ದಫನ್ ಮಾಡಲಾಗುವುದು. ಸದ್ಯ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗವಹಿಸಿರುವ ಲಕ್ಷಾಂತರ ಇರಾನಿಗರು ಅಮೆರಿಕದ ವಿರುದ್ಧ ಕರಪತ್ರಗಳನ್ನು ಹಿಡಿದು, ನಮ್ಮ ಮಾತು ಒಂದೇ, ಪ್ರತಿಕಾರ! ಪ್ರತಿಕಾರ! ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.
ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ , ಖಮೇನಿ ಅಂತ್ಯಕ್ರಿಯೆಯಲ್ಲಿ ಇರಾನ್‌ನ ಇಡೀ ಉನ್ನತ ನಾಯಕತ್ವವೇ ಒಟ್ಟಿಗೆ ಸೇರಿರುವ ಬಗ್ಗೆ ಮಾತನಾಡಿದ್ದರು. ಇರಾನ್‌ನ ಉಳಿದ ಎಲ್ಲಾ ನಾಯಕರನ್ನು ಅಂತ್ಯಕ್ರಿಯೆಯ ಸಂದರ್ಭದಲ್ಲೇ ಒಂದೇ ಶಾಟ್‌ನಲ್ಲಿ ಇಲ್ಲವಾಗಿಸುವ ಸಾಮರ್ಥ್ಯ ಅಮೆರಿಕಕ್ಕೆ ಇದೆ ಎಂದು ಅವರು ಎಚ್ಚರಿಸಿದ್ದರು.
ಅಮೆರಿಕ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಆರು ದಿನಗಳ ಸುದೀರ್ಘ ಅಂತ್ಯಕ್ರಿಯೆಯ ವಿಧಿವಿಧಾನಗಳು ಶನಿವಾರದಿಂದ ಟೆಹ್ರಾನ್‌ನಲ್ಲಿ ಆರಂಭಗೊಂಡಿವೆ. ಶನಿವಾರ ನಡೆದ ಮೆರವಣಿಗೆಯಲ್ಲಿ ಖಮೇನಿಯ ಮೂವರು ಪುತ್ರರಾದ ಮುಸ್ತಫಾ, ಮೇಸಮ್ ಮತ್ತು ಮಸೂದ್ ಭಾಗವಹಿಸಿದ್ದರು. ಆದರೆ ಇರಾನ್‌ನ ಪ್ರಸ್ತುತ ಹೊಸ ಸುಪ್ರೀಂ ಲೀಡರ್ ಆಗಿರುವ ಮತ್ತೊಬ್ಬ ಪುತ್ರ ಮೊಜ್ತಾಬಾ ಖಮೇನಿ ಅವರು ಭದ್ರತಾ ಕಾರಣಗಳಿಂದಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

