Dailyhunt
IRAN WAR: ಸುರಕ್ಷಿತವಾಗಿ ಮನೆಗೆ ಮರಳಿದ 345 ಭಾರತೀಯ ಮೀನುಗಾರರು

IRAN WAR: ಸುರಕ್ಷಿತವಾಗಿ ಮನೆಗೆ ಮರಳಿದ 345 ಭಾರತೀಯ ಮೀನುಗಾರರು

Navasamaja.com 3 weeks ago

ಚೆನ್ನೈ: ಇರಾನ್‌ನಲ್ಲಿ ಹಲವು ತಿಂಗಳಿಂದ ಸಿಲುಕಿಕೊಂಡಿದ್ದ (Iran War) ಭಾರತೀಯ ಮೀನುಗಾರರು ಕೊನೆಗೂ ಸುರಕ್ಷಿತವಾಗಿ ಇಂದು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ್ದಾರೆ.

ಸುರಕ್ಷಿತವಾಗಿ ತಲುಪಿದ 345 ಮೀನುಗಾರರು
ತಮಿಳುನಾಡು ಸೇರಿದಂತೆ ವಿವಿಧ ಕರಾವಳಿ ರಾಜ್ಯಗಳಿಗೆ ಸೇರಿದ ಈ ಮೀನುಗಾರರನ್ನು ವಿಶೇಷ ವಿಮಾನದ ಮೂಲಕ ಕರೆತರಲಾಗಿದ್ದು, ಇವರ ಆಗಮನದಿಂದ ಕುಟುಂಬಸ್ಥರಲ್ಲಿ ಸಂತಸದ ಕಡಲು ಮನೆಮಾಡಿದೆ.

ರಾಜತಾಂತ್ರಿಕ ಸಂಕಷ್ಟಗಳಿಂದಾಗಿ ನೇರವಾಗಿ ಬರಲು ಸಾಧ್ಯವಾಗದಿದ್ದರಿಂದ, ಇವರನ್ನು ಇರಾನ್‌ನಿಂದ ರಸ್ತೆ ಮಾರ್ಗದ ಮೂಲಕ ಆರ್ಮೇನಿಯಾಕ್ಕೆ ಕರೆತಂದು, ಅಲ್ಲಿಂದ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ.

ಈ ಮೀನುಗಾರರು ಕೆಲಸಕ್ಕಾಗಿ ಇರಾನ್ ಕಡಲ ಪ್ರದೇಶಕ್ಕೆ ಹೋಗಿದ್ದರು. ಆದರೆ ಅಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಮರಳಿ ಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಭಾರತ ಸರ್ಕಾರವು ಇರಾನ್ ಮತ್ತು ಆರ್ಮೇನಿಯಾ ಸರ್ಕಾರಗಳೊಂದಿಗೆ ನಿರಂತರ ಮಾತುಕತೆ ನಡೆಸಿ, ಪರ್ಯಾಯ ಮಾರ್ಗದ ಮೂಲಕ ಇವರನ್ನು ತಾಯ್ನಾಡಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೀನುಗಾರರನ್ನು ಮೀನುಗಾರಿಕಾ ಇಲಾಖೆ ಮತ್ತು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು ಬರಮಾಡಿಕೊಂಡಿದ್ದು, ಎಲ್ಲರ ಆರೋಗ್ಯ ತಪಾಸಣೆ ನಡೆಸಿ ಅವರವರ ಊರುಗಳಿಗೆ ಕಳುಹಿಸಿಕೊಡಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ಭಾರತೀಯರ ಸುರಕ್ಷತೆಗೆ ಸರ್ಕಾರ ಬದ್ಧ

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, "ಇರಾನ್‌ನಲ್ಲಿ ಸಂಕಷ್ಟ ಅನುಭವಿಸುತ್ತಿದ್ದ ನಮ್ಮ ಸಹೋದರರು ಇಂದು ತಮ್ಮ ಕುಟುಂಬ ಮತ್ತು ತಾಯ್ನಾಡಿಗೆ ಮರಳಿರುವುದು ಅತ್ಯಂತ ಸಂತಸದ ವಿಷಯ. ಇದು ನಿಜಕ್ಕೂ ಕಠಿಣ ಪ್ರಯಾಣವಾಗಿತ್ತು ಅವರು ಸುಮಾರು 20 ಗಂಟೆಗಳ ಕಾಲ ಪ್ರಯಾಣಿಸಿ ಆರ್ಮೇನಿಯಾ ತಲುಪಬೇಕಾಯಿತು. ಅಲ್ಲಿಂದ ಅವರನ್ನು ಸುರಕ್ಷಿತವಾಗಿ ಕರೆತರಲಾಗಿದೆ" ಎಂದು ತಿಳಿಸಿದರು. ಕಷ್ಟದ ಸಂದರ್ಭದಲ್ಲಿ ವಿದೇಶದಲ್ಲಿರುವ ತನ್ನ ನಾಗರಿಕರ ಹಿತರಕ್ಷಣೆಗೆ ಭಾರತ ಸರ್ಕಾರ ಬದ್ಧವಾಗಿದೆ ಎಂಬುದಕ್ಕೆ ಈ ಕಾರ್ಯಾಚರಣೆ ಮತ್ತೊಂದು ಸಾಕ್ಷಿಯಾಗಿದೆ.

ಯುದ್ಧದ ನಡುವೆಯೂ ಹಾರ್ಮುಜ್ ಜಲಸಂಧಿಯ ಮೂಲಕ ಭಾರತಕ್ಕೆ ಬಂದ 8ನೇ ಹಡಗು

ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಯುಎಸ್-ಇಸ್ರೇಲ್ (Iran War) ನಡುವೆ ಭೀಕರ ಯುದ್ಧ ನಡೆಯುತ್ತಿದ್ದರೂ, ಭಾರತಕ್ಕೆ ಹಾರ್ಮುಜ್ ಜಲಸಂಧಿಯ ಮೂಲಕ ಅನಿಲ ಮತ್ತು ತೈಲ ಪೂರೈಕೆ ಸ್ಥಿರವಾಗಿದೆ.

ಜಾಗತಿಕ ಇಂಧನ ವ್ಯಾಪಾರದ ಪ್ರಮುಖ ಕೊಂಡಿಯಾದ ಈ ಜಲಮಾರ್ಗದಲ್ಲಿ ಇರಾನ್ ನಿರ್ಬಂಧ ಹೇರಿದ್ದರೂ, ತನ್ನ ಮಿತ್ರ ರಾಷ್ಟ್ರವಾದ ಭಾರತದ ಹಡಗುಗಳ ಸಂಚಾರಕ್ಕೆ ಯಾವುದೇ ಅಡ್ಡಿಪಡಿಸಿಲ್ಲ. ಇಂದು ಮುಂಜಾನೆ 'ಗ್ರೀನ್ ಸಾನ್ವಿ' ಎಂಬ ಎಲ್‌ಪಿಜಿ ಟ್ಯಾಂಕರ್ ಈ ಸಂಕಷ್ಟದ ಹಾದಿಯನ್ನು ಯಶಸ್ವಿಯಾಗಿ ದಾಟುವ ಮೂಲಕ ಭಾರತದತ್ತ ಸಾಗುತ್ತಿರುವ 8ನೇ ಹಡಗು ಎನಿಸಿಕೊಂಡಿದೆ.

ಫೆಬ್ರವರಿ 28ರಿಂದ ಈ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಇರಾನ್ ಈ ಜಲಮಾರ್ಗವನ್ನು ಇತರ ದೇಶಗಳಿಗೆ ಮುಚ್ಚಿದೆ. ಆದರೆ ಭಾರತ, ರಷ್ಯಾ, ಚೀನಾ ಮತ್ತು ಪಾಕಿಸ್ತಾನದಂತಹ ದೇಶಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈವರೆಗೆ ಭಾರತದ ಶಿವಾಲಿಕ್, ನಂದಾ ದೇವಿ, ಜಗ್ ಲಾಡ್ಕಿ ಸೇರಿದಂತೆ ಒಟ್ಟು ಎಂಟು ಬೃಹತ್ ನೌಕೆಗಳು ಈ ಅಪಾಯಕಾರಿ ಮಾರ್ಗವನ್ನು ಸುರಕ್ಷಿತವಾಗಿ ದಾಟಿವೆ. ಇದು ಯುದ್ಧಪೀಡಿತ ಪ್ರದೇಶದ ಮೂಲಕ ಅತಿ ಹೆಚ್ಚು ಹಡಗುಗಳನ್ನು ಯಶಸ್ವಿಯಾಗಿ ಚಲಾಯಿಸಿದ ದೇಶಗಳಲ್ಲಿ ಭಾರತವನ್ನು ಮುಂಚೂಣಿಯಲ್ಲಿ ನಿಲ್ಲಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja