ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಯುಎಸ್-ಇಸ್ರೇಲ್ (Iran War) ನಡುವೆ ಭೀಕರ ಯುದ್ಧ ನಡೆಯುತ್ತಿದ್ದರೂ, ಭಾರತಕ್ಕೆ ಹಾರ್ಮುಜ್ ಜಲಸಂಧಿಯ ಮೂಲಕ ಅನಿಲ ಮತ್ತು ತೈಲ ಪೂರೈಕೆ ಸ್ಥಿರವಾಗಿದೆ.
ಜಲಸಂಧಿಯಲ್ಲಿ ದಾಟಿದ ಭಾರತದ 8ನೇ ಹಡಗು
ಜಾಗತಿಕ ಇಂಧನ ವ್ಯಾಪಾರದ ಪ್ರಮುಖ ಕೊಂಡಿಯಾದ ಈ ಜಲಮಾರ್ಗದಲ್ಲಿ ಇರಾನ್ ನಿರ್ಬಂಧ ಹೇರಿದ್ದರೂ, ತನ್ನ ಮಿತ್ರ ರಾಷ್ಟ್ರವಾದ ಭಾರತದ ಹಡಗುಗಳ ಸಂಚಾರಕ್ಕೆ ಯಾವುದೇ ಅಡ್ಡಿಪಡಿಸಿಲ್ಲ.
ಇಂದು ಮುಂಜಾನೆ 'ಗ್ರೀನ್ ಸಾನ್ವಿ' ಎಂಬ ಎಲ್‌ಪಿಜಿ ಟ್ಯಾಂಕರ್ ಈ ಸಂಕಷ್ಟದ ಹಾದಿಯನ್ನು ಯಶಸ್ವಿಯಾಗಿ ದಾಟುವ ಮೂಲಕ ಭಾರತದತ್ತ ಸಾಗುತ್ತಿರುವ 8ನೇ ಹಡಗು ಎನಿಸಿಕೊಂಡಿದೆ. ಫೆಬ್ರವರಿ 28ರಿಂದ ಈ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಇರಾನ್ ಈ ಜಲಮಾರ್ಗವನ್ನು ಇತರ ದೇಶಗಳಿಗೆ ಮುಚ್ಚಿದೆ. ಆದರೆ ಭಾರತ, ರಷ್ಯಾ, ಚೀನಾ ಮತ್ತು ಪಾಕಿಸ್ತಾನದಂತಹ ದೇಶಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈವರೆಗೆ ಭಾರತದ ಶಿವಾಲಿಕ್, ನಂದಾ ದೇವಿ, ಜಗ್ ಲಾಡ್ಕಿ ಸೇರಿದಂತೆ ಒಟ್ಟು ಎಂಟು ಬೃಹತ್ ನೌಕೆಗಳು ಈ ಅಪಾಯಕಾರಿ ಮಾರ್ಗವನ್ನು ಸುರಕ್ಷಿತವಾಗಿ ದಾಟಿವೆ. ಇದು ಯುದ್ಧಪೀಡಿತ ಪ್ರದೇಶದ ಮೂಲಕ ಅತಿ ಹೆಚ್ಚು ಹಡಗುಗಳನ್ನು ಯಶಸ್ವಿಯಾಗಿ ಚಲಾಯಿಸಿದ ದೇಶಗಳಲ್ಲಿ ಭಾರತವನ್ನು ಮುಂಚೂಣಿಯಲ್ಲಿ ನಿಲ್ಲಿಸಿದೆ. ವಿದೇಶಾಂಗ ಸಚಿವಾಲಯದಿಂದ ಸಕಲ ಕ್ರಮ ಪ್ರಸ್ತುತ ಸುಮಾರು 485 ಭಾರತೀಯ ನಾವಿಕರು ಇರುವ 15ಕ್ಕೂ ಹೆಚ್ಚು ಭಾರತೀಯ ಧ್ವಜವಿರುವ ಹಡಗುಗಳು ಇನ್ನೂ ಗಲ್ಫ್ ರಾಷ್ಟ್ರಗಳಲ್ಲೇ ಇವೆ. ಯುದ್ಧವು ಸುದೀರ್ಘವಾಗಿ ಮುಂದುವರಿಯುತ್ತಿರುವುದರಿಂದ, ಭಾರತೀಯ ಹಡಗುಗಳ ರಕ್ಷಣೆಗಾಗಿ ಭಾರತೀಯ ನೌಕಾಪಡೆಯು ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ನಿರಂತರ ನಿಗಾ ವಹಿಸಿದೆ. ನಮ್ಮ ನೌಕಾಪಡೆಯ ಉಪಸ್ಥಿತಿಯಿಂದಾಗಿ ಸಮುದ್ರ ಮಾರ್ಗಗಳು ಸುರಕ್ಷಿತವಾಗಿದ್ದು, ದೇಶದ ಇಂಧನ ಭದ್ರತೆಗೆ ಯಾವುದೇ ಧಕ್ಕೆ ಉಂಟಾಗದಂತೆ ವಿದೇಶಾಂಗ ಸಚಿವಾಲಯ ಕ್ರಮ ಕೈಗೊಂಡಿದೆ. ಭಾರತದ ಹಡಗು ಚೀನಾಗೆ ಹೋಗಿಲ್ಲ, ಸ್ಪಷ್ಟನೆ ನೀಡಿದ ಕೇಂದ್ರ ಸಚಿವಾಲಯ ಇರಾನ್‌ನ ಕಚ್ಚಾ ತೈಲ (Crude oil) ಹೊತ್ತ ಹಡಗು ಹಣ ಪಾವತಿ ಸಮಸ್ಯೆಯಿಂದಾಗಿ ಭಾರತದ ಬದಲು ಚೀನಾದತ್ತ ಮುಖ ಮಾಡಿದೆ ಎಂಬ ವರದಿಗಳನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಶನಿವಾರ ತಳ್ಳಿಹಾಕಿದೆ. ಈ ರೀತಿಯ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು, ದೇಶದ ಇಂಧನ ಪೂರೈಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಸಚಿವಾಲಯವು ಸಾರ್ವಜನಿಕರಿಗೆ ಭರವಸೆ ನೀಡಿದೆ. ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ನೀಡಿರುವ ಸಚಿವಾಲಯವು, ಇರಾನ್‌ನಿಂದ ಗುಜರಾತ್‌ನ ವಾಡಿನಾರ್ ಬಂದರಿಗೆ ಬರಬೇಕಿದ್ದ 'ಪಿಂಗ್ ಶುನ್' ಎಂಬ ತೈಲ ನೌಕೆಯು ಪಾವತಿ ವಿವಾದ ಕಾರಣದಿಂದ ಚೀನಾದ ಕಡೆ ದಾರಿ ಬದಲಿಸಿದೆ ಎಂಬ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದೆ

