ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ (Iran) ವಿರುದ್ಧ ನೀಡಿದ್ದ ಹೊಡೆದರೆ ಶಿಲಾಯುಗಕ್ಕೆ ಹೋಗಬೇಕು ಎಂಬ ಎಚ್ಚರಿಕೆಗೆ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಮೆರಿಕ (America) ತನ್ನ ಹಳೆಯ ಕಾಲದ ಅಪರಾಧ ಮನೋಭಾವವನ್ನು ಆಧುನಿಕ ಜಗತ್ತಿಗೆ ತರುತ್ತಿದೆ ಎಂದು ಇರಾನ್ ಗುಡುಗಿದೆ.
ಟ್ರಂಪ್ ಎಚ್ಚರಿಕೆ ಏನು? ದೇಶವನ್ನುದ್ದೇಶಿಸಿ ಮಾತನಾಡಿದ್ದ ಟ್ರಂಪ್, ಇರಾನ್ ಮೇಲಿನ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಮುಂದಿನ ಎರಡು ಮೂರು ವಾರಗಳಲ್ಲಿ ನಾವು ಇರಾನ್ ಮೇಲೆ ಅತ್ಯಂತ ಕಠಿಣವಾಗಿ ದಾಳಿ ಮಾಡಲಿದ್ದೇವೆ. ಇರಾನ್ಗೆ ನಾವು ಶಿಲಾಯುಗಕ್ಕೆ ಮರಳಿ ಕಳುಹಿಸುತ್ತೇವೆ ಎಂದಿದ್ದಾರೆ. ಇರಾನ್ ಸೇನೆಯು ಅಮೆರಿಕ-ಇಸ್ರೇಲ್ ದಾಳಿಯಿಂದ ಸಂಪೂರ್ಣವಾಗಿ ನಾಶವಾಗಿದೆ ಎಂಬ ಅರ್ಥದಲ್ಲಿ ಟ್ರಂಪ್ ಮಾತನಾಡಿದ್ದರು. ಇರಾನ್‌ನ ಖಾರವಾದ ಪ್ರತಿಕ್ರಿಯೆ: ಟ್ರಂಪ್ ಈ ಹೇಳಿಕೆಗೆ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದೆ. ನಾವು 7,000 ವರ್ಷಗಳ ಸುದೀರ್ಘ ಇತಿಹಾಸ ಮತ್ತು ನಾಗರಿಕತೆಯನ್ನು ಹೊಂದಿರುವ ರಾಷ್ಟ್ರ. ಇತಿಹಾಸಕ್ಕೆ ನಮ್ಮ ಬಗ್ಗೆ ಚೆನ್ನಾಗಿ ಗೊತ್ತು. ಆದರೆ ಶಿಲಾಯುಗದ ಕಾಲದ ಶಿಶು ಹತ್ಯೆ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಆಧುನಿಕ ಜಗತ್ತಿಗೆ ಹೊತ್ತು ತಂದಿರುವುದು ಅಮೆರಿಕ ಎಂದು ಇರಾನ್ ಕಿಡಿಕಾರಿದೆ. ಇದೇ ವೇಳೆ ಇರಾನ್‌ನ ಐಆರ್‌ಜಿಸಿ (IRGC) ಕಮಾಂಡರ್ ಬ್ರಿಗೇಡಿಯರ್ ಜನರಲ್ ಸೈಯದ್ ಮಜೀದ್ ಮೂಸವಿ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿ, "ಹಾಲಿವುಡ್ ಭ್ರಮೆಗಳು ನಿಮ್ಮ ಮೆದುಳನ್ನು ಎಷ್ಟರಮಟ್ಟಿಗೆ ವಿಷವಾಗಿಸಿವೆ ಎಂದರೆ, ಕೇವಲ 250 ವರ್ಷಗಳ ಇತಿಹಾಸವಿರುವ ನೀವು 6,000 ವರ್ಷಗಳ ಹಳೆಯ ನಾಗರಿಕತೆಗೆ ಬೆದರಿಕೆ ಹಾಕುತ್ತಿದ್ದೀರಿ. ನೀವು ಇರಾನ್ ಅನ್ನು ಶಿಲಾಯುಗಕ್ಕೆ ತಳ್ಳುತ್ತಿಲ್ಲ, ಬದಲಾಗಿ ನಿಮ್ಮ ಸೈನಿಕರನ್ನು ಅವರ ಸಮಾಧಿಯತ್ತ ಕೊಂಡೊಯ್ಯುತ್ತಿದ್ದೀರಿ ಎಂದು ಎಚ್ಚರಿಸಿದ್ದಾರೆ. ಇರಾನ್ ಸೇನಾ ವಕ್ತಾರರು ಸಹ ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇರಾನ್‌ನ ವ್ಯೂಹಾತ್ಮಕ ಸಾಮರ್ಥ್ಯಗಳ ಬಗ್ಗೆ ವಾಷಿಂಗ್ಟನ್‌ಗೆ ಏನೂ ತಿಳಿದಿಲ್ಲ. ಇಂತಹ ತಪ್ಪು ಕಲ್ಪನೆಗಳು ಅಮೆರಿಕವನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿವೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ, ಉಭಯ ದೇಶಗಳ ನಡುವಿನ ಈ ವಾಕ್ಸಮರವು ಗಲ್ಫ್ ವಲಯದಲ್ಲಿ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.

