Dailyhunt
IRAN-AMERICA WAR: ಇರಾನ್‌ ವಶದಲ್ಲಿ ಅಮೆರಿಕ ಪೈಲೆಟ್‌?

IRAN-AMERICA WAR: ಇರಾನ್‌ ವಶದಲ್ಲಿ ಅಮೆರಿಕ ಪೈಲೆಟ್‌?

Navasamaja.com 2 weeks ago

ಟೆಹ್ರಾನ್: ಅಮೆರಿಕದ ಅತ್ಯಾಧುನಿಕ ಎಫ್-35 (F-35) ಮತ್ತು ಎಫ್-15ಇ (F-15E) ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಮತ್ತು ವಿಮಾನದಿಂದ ಜಿಗಿದಿದ್ದ ಅಮೆರಿಕದ ಪೈಲಟ್‌ನನ್ನು ಸೆರೆಹಿಡಿಯಲಾಗಿದೆ ಎಂದು ಇರಾನ್‌ (Iran- America War) ಹೇಳಿಕೊಂಡಿದೆ.

ವಿಡಿಯೋ ಹಂಚಿಕೊಂಡ ಇರಾನ್‌ ಸೇನೆ
ವರದಿಗಳ ಪ್ರಕಾರ, ನೈಋತ್ಯ ಇರಾನ್‌ನ ಕೊಹ್ಗಿಲುಯೆ ಮತ್ತು ಬೋಯರ್-ಅಹ್ಮದ್ ಪ್ರಾಂತ್ಯದಲ್ಲಿ ವಿಮಾನ ಪತನವಾಗಿದ್ದು, ಪೈಲಟ್ ಸುರಕ್ಷಿತವಾಗಿ ಜಿಗಿದಿದ್ದರು. ಆತನನ್ನು ರಕ್ಷಿಸಲು ಅಮೆರಿಕದ ಪಡೆಗಳು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಮತ್ತು ಸಿ-130 ಹರ್ಕ್ಯುಲಸ್ ವಿಮಾನಗಳ ಮೂಲಕ ಪ್ರಯತ್ನ ನಡೆಸಿದವು ಎನ್ನಲಾಗಿದೆ. ಆದರೆ, ಈ ಕಾರ್ಯಾಚರಣೆ ವಿಫಲವಾಗಿದ್ದು, ಇರಾನ್ ಸೇನೆಯೇ ಪೈಲಟ್‌ನನ್ನು ವಶಕ್ಕೆ ಪಡೆದಿದೆ ಎಂದು ಸ್ಥಳೀಯ ಮೂಲಗಳು ಹೇಳಿವೆ. ಸೋಷಿಯಲ್ ಮೀಡಿಯಾಗಳಲ್ಲಿ ಇರಾನ್ ಸೇನೆಗೆ ಸಂಬಂಧಿಸಿದ ಖಾತೆಗಳು ಈ ಕುರಿತಾದ ಕೆಲವು ವಿಡಿಯೋಗಳನ್ನು ಹಂಚಿಕೊಂಡಿವೆ.

ಮೌನಕ್ಕೆ ಶರಣಾದ ಅಮೆರಿಕ

ಇರಾನ್ ಈ ಮಟ್ಟದ ದೊಡ್ಡ ಪ್ರತಿಪಾದನೆ ಮಾಡಿದ್ದರೂ, ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ಅಥವಾ ಶ್ವೇತಭವನ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಅತ್ತ, ವಿಮಾನದ ಅವಶೇಷಗಳು ಎಫ್-15ಇ ಮಾದರಿಗೆ ಹೋಲುತ್ತವೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದರೆ, ಇರಾನ್ ಮಾತ್ರ ಇದು ಅಮೆರಿಕದ ಅತ್ಯಂತ ಮೌಲ್ಯಯುತವಾದ ಐದನೇ ತಲೆಮಾರಿನ ಎಫ್-35 ಲೈಟ್ನಿಂಗ್ 2 ವಿಮಾನ ಎಂದು ಹೇಳುತ್ತಿದೆ.

ಈ ಘಟನೆಯು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಯುದ್ಧದ 35ನೇ ದಿನದಂದು ನಡೆದಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲೂ ಅಮೆರಿಕದ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೊಂಡಿತ್ತು. ಒಂದು ವೇಳೆ ಅಮೆರಿಕದ ಪೈಲಟ್ ಇರಾನ್ ವಶದಲ್ಲಿರುವುದು ನಿಜವೇ ಆದಲ್ಲಿ, ಇದು ಈ ಯುದ್ಧದಲ್ಲಿ ಅತ್ಯಂತ ಗಂಭೀರ ತಿರುವು ನೀಡುವ ಸಾಧ್ಯತೆಯಿದೆ. ಸದ್ಯಕ್ಕೆ ಇಡೀ ವಿಶ್ವದ ಗಮನ ಅಮೆರಿಕ ನೀಡಲಿರುವ ಸ್ಪಷ್ಟನೆಯ ಮೇಲೆ ನೆಟ್ಟಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja