Dailyhunt
IRAN-ISRAEL: ಯುದ್ಧ ಮುಂದುವರಿಸುವುದರಲ್ಲಿ ಅರ್ಥ ಇಲ್ಲ: ಆಸ್ಟ್ರೇಲಿಯಾ ಪ್ರಧಾನಿ

IRAN-ISRAEL: ಯುದ್ಧ ಮುಂದುವರಿಸುವುದರಲ್ಲಿ ಅರ್ಥ ಇಲ್ಲ: ಆಸ್ಟ್ರೇಲಿಯಾ ಪ್ರಧಾನಿ

Navasamaja.com 0 months ago

ಸ್ಟ್ರೇಲಿಯಾ: ಇರಾನ್ ಮೇಲಿನ ಯುದ್ಧದ (Iran- Israel War) ಮೂಲ ಉದ್ದೇಶಗಳು ಈಗಾಗಲೇ ಈಡೇರಿವೆ, ಇನ್ನು ಮುಂದೆ ಈ ಸಂಘರ್ಷವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.

ಉದ್ವಿಗ್ನತೆ ನಿಲ್ಲಿಸಿ ಎಂದ ಆಂಥೋನಿ

ಗುರುವಾರ ರಾಜಧಾನಿ ಕ್ಯಾನ್ಬೆರಾದಲ್ಲಿ ಮಾತನಾಡಿದ ಅವರು, ಕೂಡಲೇ ಉದ್ವಿಗ್ನತೆ ಶಮನವಾಗಬೇಕು ಎಂದು ಕರೆ ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಂದ ಇರಾನ್‌ನ ವಾಯುಪಡೆ, ನೌಕಾಪಡೆ ಮತ್ತು ಸೇನಾ ಕೈಗಾರಿಕಾ ನೆಲೆಗಳು ಈಗಾಗಲೇ ಧ್ವಂಸವಾಗಿವೆ. ಹೀಗಿರುವಾಗ ಯುದ್ಧದ ಅಂತ್ಯ ಹೇಗಿರಬೇಕು ಎಂಬುದು ಯಾರಿಗೂ ತಿಳಿಯುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯುದ್ಧ ದೀರ್ಘಕಾಲ ಮುಂದುವರಿದರೆ ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಲ್ಬನೀಸ್ ಎಚ್ಚರಿಕೆ ನೀಡಿದ್ದು, ಆಸ್ಟ್ರೇಲಿಯಾವು ಪೆಟ್ರೋಲ್ ಆಮದಿನ ಮೇಲೆ ಅವಲಂಬಿತವಾಗಿದ್ದು, ಸದ್ಯ ದೇಶದಲ್ಲಿ ಕೇವಲ 37 ದಿನಗಳಿಗೆ ಆಗುವಷ್ಟು ಮಾತ್ರ ಇಂಧನ ದಾಸ್ತಾನು ಇದೆ. ಗಗನಕ್ಕೇರುತ್ತಿರುವ ತೈಲ ಬೆಲೆಗಳ ಹೊರೆ ತಗ್ಗಿಸಲು ಆಸ್ಟ್ರೇಲಿಯಾ ಸರ್ಕಾರ ಈಗಾಗಲೇ ಪೆಟ್ರೋಲ್ ಮೇಲಿನ ತೆರಿಗೆ ಕಡಿತಗೊಳಿಸಿದೆ ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ಸಾಲದ ನೆರವು ಘೋಷಿಸಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಯುದ್ಧದಲ್ಲಿ ಆಸ್ಟ್ರೇಲಿಯಾ ನೇರವಾಗಿ ಭಾಗವಹಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯ ನಂತರ ಇರಾನ್ ವಿಶ್ವದ ಪ್ರಮುಖ ವ್ಯಾಪಾರ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ವಿಶ್ವದ ಒಟ್ಟು ತೈಲ ಪೂರೈಕೆಯ ಐದನೇ ಒಂದು ಭಾಗ ಈ ಮಾರ್ಗದ ಮೂಲಕವೇ ಸಾಗುತ್ತದೆ. ಇದು ಜಾಗತಿಕವಾಗಿ ತೈಲ ಮತ್ತು ಅನಿಲ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಮಾರ್ಗವನ್ನು ಮತ್ತೆ ಸಂಚಾರ ಮುಕ್ತಗೊಳಿಸುವ ಕುರಿತು ಬ್ರಿಟನ್ ಮತ್ತು ಫ್ರಾನ್ಸ್ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ಆಸ್ಟ್ರೇಲಿಯಾ ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್ ತಿಳಿಸಿದ್ದಾರೆ. ಸದ್ಯಕ್ಕೆ ಅಲ್ಲಿನ ಪರಿಸ್ಥಿತಿ ಹತೋಟಿಯಲ್ಲಿ ಇಲ್ಲದ ಕಾರಣ ಸಂಚಾರ ಆರಂಭಿಸುವುದು ಕಷ್ಟ ಎಂದು ಹೇಳಿದ್ದಾರೆ.

ಕಠಿಣ ದಾಳಿ ಮಾಡುತ್ತೇವೆ ಎಂದ ಟ್ರಂಪ್
ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಇನ್ನೂ ಎರಡು ಮೂರು ವಾರಗಳ ಕಾಲ ಕಠಿಣ ದಾಳಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಇರಾನ್‌ನ ಮಿಲಿಟರಿ ಶಕ್ತಿಯನ್ನು ಸಂಪೂರ್ಣವಾಗಿ ಹತ್ತಿಕ್ಕುವುದು ಮತ್ತು ಪರಮಾಣು ಬಾಂಬ್ ತಯಾರಿಸದಂತೆ ತಡೆಯುವುದು ನಮ್ಮ ಗುರಿ ಎಂದು ಟ್ರಂಪ್ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja